ದರ್ಶನ್ ಮನವಿಗೆ ಕೊನೆಗೂ ಸಿಕ್ತು ಮನ್ನಣೆ ; ಕಾಲಹರಣ ಮಾಡಿದಕ್ಕೆ ಪವಿತ್ರಾ ಗೌಡ ಬಲಗೈ ಬಂಟನಿಗೆ 5,000 ದಂಡ
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಸದ್ಯ ಮತ್ತೊಮ್ಮೆ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ.
ಇಂದಿಗೆ (ಮಾರ್ಚ್ 17) ದರ್ಶನ್ ಮತ್ತೊಮ್ಮೆ ಜೈಲು ಸೇರಿ 215 ದಿನಗಳಾಗಿವೆ. ಕಳೆದ ಬಾರಿಯಂತೆ ದರ್ಶನ್‌ಗೆ ಈ ಬಾರಿ ಹೊರ ಬರಲು ಸಾಧ್ಯವಾಗುತ್ತಿಲ್ಲ. ಕೊನೆ ಪಕ್ಷ ಇದ್ದರೆ ನೆಮ್ಮದಿಯಾಗ್ ಇರಬೇಕು ಎನ್ನುವ ದರ್ಶನ್‌ಗೆ ಜೈಲಿನಲ್ಲಾದರೂ ನೆಮ್ಮದಿ ಇದೆಯಾ ಅಂದರೆ ಅದು ಇಲ್ಲ.

ಒಂದು ಕಾಲದಲ್ಲಿ ದೇಹಿ ಎಂದು ಬಂದವರಿಗೆ ಸಹಾಯದ ಹಸ್ತ ಚಾಚುತ್ತಿದ್ದ ದರ್ಶನ್ ಖುದ್ದು ಇಂದು ದಯನೀಯ ಸ್ಥಿತಿಯಲ್ಲಿದ್ಧಾರೆ.ಎಲ್ಲದಕ್ಕೂ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ದರ್ಶನ್ ಪಾಲಿಗೆ ಸದ್ಯದ ಸಮಾಧಾನ ಅಂದರೆ ಪ್ರತಿ ಬಾರಿ ಅರ್ಜಿ ಸಲ್ಲಿಸಿದಾಗ ದರ್ಶನ್‌ಗೆ ಹಿನ್ನೆಡೆಯಾಗುತ್ತಿತ್ತು. ಆದರೆ ಈ ಬಾರಿ ಅರ್ಜಿಗೆ ಮನ್ನಣೆ ಸಿಕ್ಕಿದೆ.
ಹೌದು, ಅಸಲಿಗೆ ಮೊದಲ ಬಾರಿ ಬಂಧನಕ್ಕೊಳಗಾಗಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾಗ ವಿಜಯಲಕ್ಷ್ಮಿ ಆಗಲಿ ದಿನಕರ್ ಆಗಲಿ ಅವರನ್ನು ಸುಲಭವಾಗಿ ಭೇಟಿಯಾಗಬಹುದಿತ್ತು. ಪತಿಯ ದರ್ಶನ ಪಡೆಯುವುದು ಆಗ ವಿಜಯಲಕ್ಷ್ಮಿ ಅವರಿಗೆ ತುಂಬಾನೇ ಸುಲಭವಾಗಿತ್ತು.
ಮೊದಲು ವಿಜಯಲಕ್ಷ್ಮಿ ಜೈಲಿಗೆ ಬಂದರೆ ಜೈಲಾಧಿಕಾರಿ ಚೇಂಬರ್‌ಗೆ ಇವರನ್ನು ಕರೆದೊಯ್ಯಲಾಗುತ್ತಿತ್ತು. ಅಲ್ಲಿ ವಿಜಯಲಕ್ಷ್ಮಿ ತಮ್ಮ ಪತಿಯ ಜೊತೆ ಮಾತನಾಡುತ್ತಿದ್ದರು. ಕಷ್ಟ ಸುಖ ಹಂಚಿಕೊಂಡು ದರ್ಶನ್‌ಗೆ ಧೈರ್ಯ ತುಂಬಿ ಬರುತ್ತಿದ್ದರು.
ಆದರೆ ಈಗ ಮೊದಲಿನ ವಾತಾವರಣ ಇರಲಿಲ್ಲ. ಸುಪ್ರೀಂ ಕೋರ್ಟ್‌ನ ಖಂಡ ತುಂಡ ಆದೇಶ ವಿಜಯಲಕ್ಷ್ಮಿ ಅವರನ್ನು ಕೂಡ ಹೈರಾಣಾಗಿಸಿತ್ತು. ಜೈಲು ಹಕ್ಕಿಗಳನ್ನು ಅವರ ಮನೆಯವರು ಹೇಗೆ ನೋಡಲು ಬರುತ್ತಾರೆ ಅದೇ ರೀತಿ ವಿಜಯಲಕ್ಷ್ಮಿ ಕೂಡ ಜೈಲಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೇರೆ ಖೈದಿಗಳ ಸಂಬಂಧಿಕರು ಭೇಟಿಯಾಗಲು ಕಾಯುವಂತೆ ವಿಜಯಲಕ್ಷ್ಮಿ ಕೂಡ ಟೋಕನ್ ಪಡೆದುಕೊಂಡು ಕಾಯಬೇಕಿತ್ತು.

ಈ ಹಿನ್ನೆಲೆ ದರ್ಶನ್ ಕುಟುಂಬಸ್ಥರು ಒಳಗೆ ಬಂದು ಭೇಟಿಯಾಗಲು ಅವಕಾಶ ನೀಡುವಂತೆ ನ್ಯಾಯಾಲಯದಲ್ಲಿ ಮನವಿಯನ್ನು ಮಾಡಿಕೊಂಡಿದ್ದರು. ದರ್ಶನ್ ಅವರ ಈ ಮನವಿಯನ್ನು ಸೆಷನ್ಸ್ ಕೋರ್ಟ್ ಪುರಸ್ಕರಿಸಿದೆ. ಜೈಲಿನ ಕೈಪಿಡಿಯ ನಿಯಮದ ಪ್ರಕಾರ ಒಳಸಂದರ್ಶನಕ್ಕೆ ಅವಕಾಶ ನೀಡಲು ಅನುಮತಿ ನೀಡಿದೆ. ಈ ಹಿನ್ನೆಲೆ ದರ್ಶನ್ ಅವರ ಕುಟುಂಬಸ್ಥರು ಒಳಗೆ ದರ್ಶನ್ ಅವರನ್ನು ಭೇಟಿ ಮಾಡಬಹುದಾಗಿದೆ. ಇದರಿಂದ ದರ್ಶನ್‌ಗೆ ಚೂರು ನೆಮ್ಮದಿ ಸಿಕ್ಕಂತಾಗಿದೆ.
ದರ್ಶನ್‌ಗೆ ಚೂರು ನೆಮ್ಮದಿಯನ್ನೇನೋ ನ್ಯಾಯಾಲಯ ಕರುಣಿಸಿದೆ. ಆದರೆ, ಇದೇ ಸಮಯದಲ್ಲಿ ಇಲ್ಲಿಯೂ ಕೂಡ ಕೆಲ ನಿಯಮಗಳನ್ನು ದರ್ಶನ್ ಪಾಲಿಸಬೇಕಿದೆ.ಒಳ ಸಂದರ್ಶನಕ್ಕೆ ಸಮ್ಮತಿ ನೀಡಿರುವ ನ್ಯಾಯಾಲಯ ಜೈಲು ಅಧೀಕ್ಷಕರಿಗೆ ಅಧಿಕಾರ ನೀಡಿದೆ. ಜೈಲಿನ ಸೂಪರಿಂಟೆಂಡೆಂಟ್ ದರ್ಶನ್ ಅವರ ಮನವಿಗೆ ಮನ್ನಣೆ ನೀಡಿದರೆ ಮಾತ್ರ ದರ್ಶನ್ ಮನೆಯವರು ಒಳಗಡೆ ಹೋಗಿ ಭೇಟಿ ಮಾಡಬಹುದು. ಇಲ್ಲದೇ ಇದ್ದಲ್ಲಿ ಇಲ್ಲ. ಜೈಲು ಅಧೀಕ್ಷಕರ ಅನುಮತಿ ಕಡ್ಡಾಯ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಇನ್ನೂ ಇದೇ ಸಮಯದಲ್ಲಿ ಪ್ರಕರಣದ ಮೂರನೇ ಆರೋಪಿ ಮತ್ತು ಪವಿತ್ರಾ ಗೌಡ ಮತ್ತು ದರ್ಶನ್ ಅವರ ನಂಬಿಕಸ್ಥ ವ್ಯಕ್ತಿಯಾಗಿದ್ದ ಪವನ್ ಪರ ವಕೀಲರು, ಪ್ರಕರಣದ ತನಿಖಾಧಿಕಾರಿಗಳ ವಿರುದ್ಧವೇ ಆರೋಪ ಮಾಡಿದ್ದರು.ತನಿಖಾಧಿಕಾರಿಗಳಲ್ಲಿ ಒಬ್ಬರಾಗಿರುವ ಎಸಿಪಿ ಚಂದನ್ ಅವರನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಬೇಕು ಎಂದು ಪವನ್ ಪರ ವಕೀಲರು ವಾದಿ ಮಾಡಿದ್ದರು. ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕೆ 5 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.


Click it and Unblock the Notifications











