ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಪ್ರಾಣ ಬೆದರಿಕೆ; ‘ಡಿ ಕಂಪನಿ’ ಅಡ್ಮಿನ್ ಸೇರಿ ಮೂವರ ಬಂಧನ
ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾಗಿರಬಾರದು. ಯಾಕೆಂದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ. ಅಭಿಮಾನ ಮೀತಿ ಮೀರಿದರೆ ವಿನಾಶಕಾರಿ ಬೆಳವಣಿಗೆಗೆ ಕಾರಣವಾಗುತ್ತೆ.ಇದಕ್ಕೆ ಜ್ವಲಂತ ಉದಾಹರಣೆಯಂತೆ ದರ್ಶನ್ ಅವರ ಮೂವರು ಅಭಿಮಾನಿಗಳು ಕಂಬಿ ಹಿಂದೆ ಹೋಗಿದ್ದಾರೆ.
ಹೌದು, ಅಸಲಿಗೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾದಾಗ ದರ್ಶನ್ ಅವರ ನಿಜವಾದ ಅಭಿಮಾನಿಗಳು ಮಮ್ಮಲ ಮರುಗಿದ್ದರು. ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಬೇಕಿದ್ದ ನಮ್ಮ ಹೀರೋ ಹೀಗೆ ದುಷ್ಕೃತ್ಯದ ಪಾಲುದಾರರಾಗಿ ಜೈಲು ಸೇರಿದಲ್ಲ ಅಂಥಾ ಅಕ್ಷರಶಃ ಕೊರಗಿದರು.

ಆದರೆ, ಇನ್ನು ಕೆಲವರು ದರ್ಶನ್ ಅವರನ್ನು ಸಮರ್ಥಿಸಿಕೊಂಡರು. ಈಗಲೂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಅಭಿಮಾನ ಕಂಡು ಖುದ್ದು ದರ್ಶನ್ ಮೂಕವಿಸ್ಮಿತವಾಗಿದ್ದು ಇದೆ. ಜೈಲಿಂದ ಹೊರ ಬಂದ ನಂತರ ನಿಮ್ಮನ್ನು ಪಡೆದ ನಾನೇ ಧನ್ಯ ಎಂದು ಹೇಳಿಯೂ ಆಗಿದೆ.
ಇದೀಗ ಇದೇ ಅಭಿಮಾನ ದರ್ಶನ್ ಪಾಲಿಗೆ ಮತ್ತೊಮ್ಮೆ ಮುಳ್ಳಾಗುವ ಸಾಧ್ಯತೆ ಇದೆ. ಯಾಕೆಂದರೆ ದರ್ಶನ್ ಮೇಲೀನ ಅಭಿಮಾನಿಗಳ ಅಭಿಮಾನದಿಂದ ಈ ಪ್ರಕರಣಕ್ಕೆ ತಿರುವು ಸಿಕ್ಕಿದ್ದು,49ನೇ ಸಾಕ್ಷಿಗೆ ಧಮ್ಕಿ ಹಾಕಿದ ಆರೋಪದಡಿ ಮೂವರು ದರ್ಶನ್ ಅಭಿಮಾನಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ನಿಮಗೆ ಗೊತ್ತಿರಲಿ, ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಈಗಾಗಲೇ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಆರಂಭವಾಗಿದೆ. ಕೆಲ ಸಾಕ್ಷಿಗಳ ವಿಚಾರಣೆ ಜೊತೆಗೆ ಕ್ರಾಸ್ ಎಕ್ಸಾಮಿನೇಷನ್ ಕೂಡ ನಡೆಯುತ್ತಿದೆ.
ಇದೇ ಸಮಯದಲ್ಲಿ ಕೊಲೆ ಕೇಸ್‌ನ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವವರಿಗೆ ಸಾಕ್ಷಿ ಹೇಳದಂತೆ ಬೆದರಿಕೆ ಒಡ್ಡಲಾಗಿದೆ. ಸಾಕ್ಷಿ ಹೇಳದಂತೆ ತಮಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ ವಿಚಾರವನ್ನು ಸಂದೀಪ್ ನ್ಯಾಯಾಲಯದ
ಮುಂದೆ ಹೇಳಿಕೊಂಡ ಬೆನ್ನಲ್ಲೇ ಸಾಕ್ಷಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದರು.
ಅದ್ರಂತೆ ಸಾಕ್ಷಿಗೆ ರಕ್ಷಣೆ ನೀಡಿದ್ದ ಪೊಲೀಸರು, ಬೆದರಿಕೆ ಹಾಕಿದವರಿಗೆ ಜಾಲ ಬೀಸಿದ್ದರು. ಸದ್ಯ ಕಾರ್ಯಾಚರಣೆ ನಡೆಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ವೇಣು, ಸುಹಾಸ್ ಮತ್ತು ಪುನೀತ್ ಎಂಬ ಮೂವರನ್ನು ಬಂಧಿಸಿದ್ದಾರೆ.
ಯಾರು ಈ ಮೂರು ಅಭಿಮಾನಿಗಳು ?
ಸದ್ಯ ಕಂಬಿ ಹಿಂದೆ ಹೋದ ಮೂವರು ಅಭಿಮಾನಿಗಳಲ್ಲಿ ಒಬ್ಬರಾದ ಪುನೀತ್, ಸಾಮಾಜಿಕ ಜಾಲತಾಣದಲ್ಲಿನ ಅತ್ಯಂತ ಪ್ರಭಾವಶಾಲಿ ಫ್ಯಾನ್ ಪೇಜ್‌ಗಳಲ್ಲಿ ಒಂದಾದ ದರ್ಶನ್ ಅವರ ''ಡಿ ಕಂಪನಿ'' ಫ್ಯಾನ್ ಪೇಜ್ ಅಡ್ಮಿನ್ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರಾಗಿದ್ದ ಇವರು ಅಭಿಮಾನಿಗಳನ್ನು ಆನ್‌ಲೈನ್‌ನಲ್ಲಿ ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದರು.
ಇವರನ್ನು ಹೊರತು ಪಡಿಸಿದರೆ ಬಂಧನಕ್ಕೊಳಗಾದ ಇನ್ನು ಇಬ್ಬರ ಹೆಸರು ಸುಹಾಸ್ ಮತ್ತು ವೇಣು ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇವರಿಬ್ಬರು ತುಮಕೂರಿನ ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇವಲ ಆನ್‌ಲೈನ್ ಟ್ರೋಲಿಂಗ್ ಮತ್ತು ಅಭಿಮಾನಕ್ಕೆ ಸೀಮಿತವಾಗಿದ್ದ ಇವರ ನಡೆ, ಕೋರ್ಟ್ ಸಾಕ್ಷಿ ಸಂದೀಪ್‌ನನ್ನು ಗುರಿಯಾಗಿಸಿಕೊಂಡು ಅಪರಾಧ ಕೃತ್ಯವೆಸಗುವ ಮಟ್ಟಕ್ಕೆ ತಲುಪಿರುವುದು ದುರಂತ.
ಕಾರಿನಲ್ಲಿ ಸಂದೀಪ್‌ಗೆ ಬೆದರಿಕೆ
ಪ್ರಕರಣದಲ್ಲಿ 49ನೇ ಸಾಕ್ಷಿದಾರರಾದ ಸಂದೀಪ್ ಜೊತೆ ಮಾತುಕತೆ ನಡೆಸುವ ನೆಪದಲ್ಲಿ ಮೂವರು ಕರೆಸಿಕೊಂಡಿದ್ದಾರೆ. ಆ ನಂತರ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ನಗರ ಪ್ರದಕ್ಷಣೆಯನ್ನು ಹಾಕಿರುವ ಮೂವರು ದರ್ಶನ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದೆ. ಮಾನಸಿಕ ಒತ್ತಡ ಹೇರಿದೆ. ಇವರ ಈ ಬೆದರಿಕೆಗೆ ಸಂದೀಪ್ ಮಣಿಯದಿದ್ದಾಗ ಜೈಲಿನಲ್ಲಿರುವ ದರ್ಶನ್ ಅವರ ಹೆಸರನ್ನು ಉಲ್ಲೇಖಿಸಿ ಸುಹಾಸ್ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಪ್ರಾರ್ಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಭಿಮಾನಿಗಳಿಂದ ದರ್ಶನ್‌ಗೆ ಸಂಕಷ್ಟ..?
ಅಭಿಮಾನಿಗಳ ಈ ಅಭಿಮಾನದ ಪ್ರದರ್ಶನದಿಂದ ದರ್ಶನ್ ಕಾನೂನು ಹೋರಾಟಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ದರ್ಶನ್ ಅವರನ್ನು ಹೊರ ಕರೆತರಲು ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ವಕೀಲರು ನಾನಾ ಕಸರತ್ತು ಮಾಡುತ್ತಿದ್ದಾರೆ. ಆದರೆ ಮತ್ತೊಂದು ಕಡೆ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಕೆಲಸವನ್ನು ಅಭಿಮಾನಿಗಳು ಮಾಡಿದ್ದಾರೆ. ಪ್ರಾಸಿಕ್ಯೂಷನ್ ವಾದಕ್ಕೆ ಇದರಿಂದ ಮತ್ತಷ್ಟು ಬಲ ಬಂದಂತಾಗಿದೆ. ಪ್ರಕರಣದ ಗಂಭೀರತೆ ಮತ್ತಷ್ಟು ಹೆಚ್ಚಾಗಿದೆ.
ಒಟ್ನಲ್ಲಿ ಸದ್ಯ ಮೂವರು ಅಭಿಮಾನಿಗಳು ಕಂಬಿ ಹಿಂದೆ ಹೋಗಿದ್ದಾರೆ. ಬೆಂಗಳೂರು ಸೆಷನ್ಸ್ ಕೋರ್ಟ್ ಇನ್ನುಳಿದ ಎಲ್ಲಾ ಪ್ರಮುಖ ಸಾಕ್ಷಿಗಳಿಗೆ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಒದಗಿಸಲು ಆದೇಶಿಸಿದ್ದು, ಅಂಧಾಭಿಮಾನದ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡರೆ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.


Click it and Unblock the Notifications