ರೇಣುಕಾಸ್ವಾಮಿ ಪ್ರಕರಣದಲ್ಲಿ 17ನೇ ಸಾಕ್ಷಿಗೆ ಬೆದರಿಕೆ; ಕೋರ್ಟ್ ಕಠಿಣ ಕ್ರಮದ ಎಚ್ಚರಿಕೆ
ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಈಗಾಗಲೇ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಆರಂಭವಾಗಿದೆ. ಕೆಲ ಸಾಕ್ಷಿಗಳ ವಿಚಾರಣೆ ಜೊತೆಗೆ ಕ್ರಾಸ್ ಎಕ್ಸಾಮಿನೇಷನ್ ಕೂಡ ನಡೀತಿದೆ. ದರ್ಶನ್ ಹಾಗೂ ಇನ್ನುಳಿದ ಆರೋಪಿಗಳಿಗೆ ನಡುಕ ಶುರುವಾಗಿದೆ. ಇದೆಲ್ಲದರ ನಡುವೆ ಪ್ರಕರಣದ 17ನೇ ಸಾಕ್ಷಿಗೆ ಬೆದರಿಕೆ ಕರೆ ಬಂದಿರುವುದಾಗಿ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣದ ಸಂಬಂಧ 17ನೇ ಸಾಕ್ಷಿ ತಮಗೆ ಕೆಲವರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು ತಾವು ಹೇಳಿದಂತೆ ಸಾಕ್ಷ್ಯ ನುಡಿಯುವಂತೆ ಒತ್ತರ ಏರುತ್ತಿದ್ದಾರೆ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿದ್ದು ಸಾಕ್ಷಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ. ಬೆದರಿಕೆ ಕರೆಗಳು ಹಾಗೂ ಅವರು ಯಾವ ರೀತಿ ಒತ್ತಡ ಹಾಕಿದ್ರು ಎನ್ನುವ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ 17ನೇ ಸಾಕ್ಷಿಗೆ ನ್ಯಾಯಾಧೀಶರು ತಿಳಿಸಿದ್ದಾರೆ. ಈ ಮೂಲಕ ಬೆದರಿಕೆ ಕರೆಗಳ ಮೂಲ ಹುಡುಕಲು ಕೋರ್ಟ್ ಮುಂದಾಗಿದೆ. ಸಾಕ್ಷ್ಯ ನಾಶಕ್ಕೆ ಯತ್ನಿಸುವುದು ಹಾಗೂ ಸಾಕ್ಷಿಗಳ ಮೇಲೆ ಒತ್ತಡ ಹೇರಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ವಿಚಾರಣೆ ವೇಳೆ ಸಾಕ್ಷ್ಯಗಳ ನಾಶ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎನ್ನುವ ಅನುಮಾನ ಪೊಲೀಸರಿಗೆ ಮೊದಲೇ ಇತ್ತು. ಇದೇ ಕಾರಣಕ್ಕೆ ಕಾರಣಕ್ಕೆ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಬಗ್ಗೆ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆಗ ಪೊಲೀಸ್ ಇಲಾಖೆ ಇದೇ ಕಾರಣವನ್ನು ಮುಂದಿಟ್ಟಿತ್ತು. ಇದು ಹೈಪ್ರೊಫೈಲ್ ಕೇಸ್ ಆಗಿರುವುದರಿಂದ ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದರು. ಈ ಅಂಶವನ್ನು ಸುಪ್ರೀಂ ಗಂಭೀರವಾಗಿ ಪರಿಗಣಿಸಿತ್ತು. ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿತ್ತು.
ಅಷ್ಟಕ್ಕೂ ಪ್ರಕರಣದ ಸಂಬಂಧ ಸಾಕ್ಷಿ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿರುವುದು ಯಾರು? ಅವರ ಹಿನ್ನೆಲೆ ಏನು ಎನ್ನುವ ಕುತೂಹಲ ಮೂಡಿದೆ. 17ನೇ ಸಾಕ್ಷಿಗೆ ಫೋನ್ ಮಾಡಿ ಒತ್ತಡ ಹೇರಿದವರು ಯಾರು ಎನ್ನುವುದು ಗೊತ್ತಾದರೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಗುವ ನಿರೀಕ್ಷೆಯಿದೆ. 60 ಮುಖ್ಯ ಸಾಕ್ಷಿಗಳು ಸೇರಿ ರೇಣುಕಾಸ್ವಾಮಿ ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿವೆ. ಮಾರ್ಚ್ 15ರ ವೇಳೆಗೆ ಇನ್ನು 150 ಸಾಕ್ಷಿಗಳ ವಿಚಾರಣೆ ಬಾಕಿಯಿತ್ತು. ವಿಚಾರಣೆ ತಡವಾಗುತ್ತಿದೆ ಹಾಗಾಗಿ ಜಾಮೀನು ನೀಡಿ ಎಂದು ದರ್ಶನ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆದರೆ ಒಂದು ವರ್ಷದಲ್ಲಿ 60 ಮುಖ್ಯ ಸಾಕ್ಷಿಗಳ ವಿಚಾರಣೆ ಮುಗಿಸುವಂತೆ ಸುಪ್ರೀಂ ಸೂಚಿಸಿದೆ. ಆ ಬಳಿಕ ಜಾಮೀನು ಅರ್ಜಿ ಸಲ್ಲಿಸಲು ತಿಳಿಸಿದೆ. ಹಾಗಾಗಿ ಇನ್ನು ಒಂದು ವರ್ಷ ದರ್ಶನ್ ಜೈಲಿನಲ್ಲೇ ಇರಬೇಕಾಗುತ್ತದೆ.
ಸಾಕ್ಷಿಗೆ ಬೆದರಿಕೆ ವಿಚಾರ ಈಗ ಭಾರೀ ಸದ್ದು ಮಾಡ್ತಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ. ಮತ್ತೊಂದು ಕಡೆ 'ಬಾಸ್' ಸಿನಿಮಾ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಸಿನಿಮಾ ಬಿಡುಗಡೆ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ವಿಜಯಲಕ್ಷ್ಮಿ ದರ್ಶನ್ ಕೋರಿದ್ದಾರೆ. ಇದಕ್ಕೆ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ವಿರೋಧ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿ ಪ್ರಕರಣ ಹೋಲುವಂತಹ ಸನ್ನಿವೇಶಗಳು 'ಬಾಸ್' ಚಿತ್ರದಲ್ಲಿವೆ ಎನ್ನುವ ಅನುಮಾನ ಮೂಡಿದೆ. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆಗೆ ವಿಜಯಲಕ್ಷ್ಮಿ ದರ್ಶನ್ ಒಪ್ಪುತ್ತಿಲ್ಲ. ಜೂನ್ 30ರಂದು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.


Click it and Unblock the Notifications