ರೇಣುಕಾಸ್ವಾಮಿ ಕೊಲೆ ಪ್ರಕರಣ: ವಿಜಯಲಕ್ಷ್ಮಿ ದರ್ಶನ್ ಪೊಲೀಸ್ ಠಾಣೆಗೆ ಹಾಜರ್
ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದೆ. ಮೊದಲಿಗೆ ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ಆದರೆ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಸಾಕಷ್ಟು ಶಾಕಿಂಗ್ ಸಂಗತಿಗಳು ಹೊರ ಬಂದಿತ್ತು. ಪ್ರಕರಣದಲ್ಲಿ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಹಲವರನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೀಗ ಪ್ರಕರಣ ಸಂಬಂಧ ಪೊಲೀಸರು ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಬಂದು ವಿಜಯಲಕ್ಷ್ಮಿ ವಿಚಾರಣೆ ಎದುರಿಸುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆಯಾದ ದಿನ ದರ್ಶನ್ ಧರಿಸಿದ್ದ ಶೂ ಅನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿತ್ತು.

ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಪುಟ್ಟೇನಳ್ಳಿಯ ಬಳಿಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿ ದರ್ಶನ್ ಶೂಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಬಳಿಕ ದರ್ಶನ್ ಮನೆಗೆ ತೆರಳಿದ್ದರು. ಅಲ್ಲಿ ಧರಿಸಿದ್ದ ಬಟ್ಟೆ, ಶೂ ಬದಲಿಸಿ ಸ್ನಾನ ಮಾಡಿ 'ಡೆವಿಲ್' ಚಿತ್ರೀಕರಣಕ್ಕಾಗಿ ಮೈಸೂರಿಗೆ ತೆರಳಿದ್ದರು ಎನ್ನಲಾಗಿದೆ. ಮನೆ ಕೆಲಸದಾಳು ದರ್ಶನ್ ಶೂಗಳನ್ನು ವಿಜಯಲಕ್ಷ್ಮಿ ವಾಸವಿದ್ದ ಫ್ಲಾಟ್‌ನಲ್ಲಿ ಇರಿಸಿದ್ದ ಎನ್ನಲಾಗಿದೆ.
ದರ್ಶನ್ ಧರಿಸಿದ್ದ ಬಟ್ಟೆಯನ್ನು ಆರ್‌ಆರ್ ನಗರದ ಮನೆಯಲ್ಲಿ ಒಗೆದು ಒಣ ಹಾಕಲಾಗಿತ್ತು. ಶೂಗಳ ಜೊತೆಗೆ ಬಟ್ಟೆಯನ್ನು ಕೂಡ ಪೊಲೀಸರು ಜಪ್ತಿ ಮಾಡಿರುವುದು ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಹಾಸ್ಯ ನಟ ಚಿಕ್ಕಣ್ಣನನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಮತ್ತೊಬ್ಬ ನಟ ಯಶಸ್ ಸೂರ್ಯಗೆ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ.
ಶನಿವಾರ(ಜೂನ್ 8) ರೇಣುಕಾಸ್ವಾಮಿಯನ್ನು ಆರೋಪಿಗಳು ಪಟ್ಟಣಗೆರೆ ಶೆಡ್‌ಗೆ ಕರೆತಂದಿದ್ದರು. ಆ ವೇಳೆ ದರ್ಶನ್ ಆಪ್ತರ ಜೊತೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯ ನಟ ಚಿಕ್ಕಣ್ಣ, ನಟ ಯಶಸ್ ಸೂರ್ಯ ಸಹ ಭಾಗಿ ಆಗಿದ್ದರು. ಪಾರ್ಟಿ ವೇಳೆ ರೇಣುಕಾಸ್ವಾಮಿ ಅಪಹರಣದ ಬಗ್ಗೆ ಏನಾದರೂ ಚರ್ಚೆ ನಡೆದಿತ್ತಾ ಎನ್ನುವ ಬಗ್ಗೆ ಅವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಜನರನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.


Click it and Unblock the Notifications










