''ನನ್ನ ಮಗನನ್ನು ಕೊಂದವರು ಜೈಲಿನಲ್ಲಿ ಚೈನಿ ಹೊಡೆಯುತ್ತಿದ್ದಾರೆ'' -ರೇಣುಕಾಸ್ವಾಮಿ ತಂದೆ ಕಣ್ಣೀರು...!
ಆ ಕಡೆ ಮನೆ ಮಗನನ್ನು ಕಳೆದುಕೊಂಡ ಹೆತ್ತವರು ದಿನನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ನ್ಯಾಯಕ್ಕೆ ಅಂಗಲಾಚುತ್ತಿದ್ದಾರೆ. ಆದರೆ, ಅದೇ ಮತ್ತೊಂದು ಕಡೆ ನಮ್ಮ ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದೆ. ಕೊಲೆ ಆರೋಪವನ್ನೊತ್ತ ಆರೋಪಿಯ ಐಶಾರಾಮಿ ಬದುಕು ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ನಿಜಾ.. ನಡೆದು ಹೋದ ಭಯಾನಕ ಕೊಲೆ ಈ ದೇಶದ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದಾರೆ. ತಪ್ಪು ಮಾಡಿದವನು ಯಾವೂರ ದೊರೆಯೇ ಆಗಿದ್ದರೂ, ಹೆಸರಾಂತ ನಟನಾಗಿದ್ದರೂ ಕಾನೂನು ಎಲ್ಲರಿಗೂ ಒಂದೇ. ತಪ್ಪಿತಸ್ಥ ಇವತ್ತಲ್ಲಾ ನಾಳೆ ಮಾಡಿರುವ ಕೆಲಸಕ್ಕೆ ಶಿಕ್ಷೆ ಅನುಭವಿಸಲೇಬೇಕು.

ಆದರೆ, ದರ್ಶನ್ ವಿಚಾರದಲ್ಲಿ ಇದು ನಿಜವಾಗುತ್ತಾ ಅನ್ನುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ. ಜೈಲಿನಲ್ಲಿ ದರ್ಶನ್ ವೈಭೋಗವನ್ನು ಕಣ್ತುಂಬಿಕೊಂಡ ನಂತರ ರೇಣುಕಾ ಸ್ವಾಮಿಯ ತಂದೆ ಮತ್ತು ತಾಯಿಯ ಆತಂಕ ಹೆಚ್ಚಾಗಿದೆ. ಹೀಗಾಗಿಯೇ ನಿನ್ನೆ ದರ್ಶನ್ ಆಡಂಬರದ ಬದುಕಿನ ಚಿತ್ರಣವನ್ನು ಕಣ್ಣಾರೆ ಕಂಡ ರೇಣುಕಾ ಸ್ವಾಮಿ ತಂದೆ ಶಿವನಗೌಡ ಕಣ್ಣೀರು ಹಾಕಿದ್ದಾರೆ. ಜೈಲು ಜೈಲಾಗಿರಬೇಕು ರೆಸಾರ್ಟ್ ಆಗಬಾರದು ಎಂದಿದ್ದಾರೆ.
ದರ್ಶನ್ ಮುಖದಲ್ಲಿ ಪಶ್ಚಾತಾಪದ ಗೆರೆಯೂ ಇಲ್ಲ ಎಂದಿರುವ ರೇಣುಕಾ ಸ್ವಾಮಿಯ ತಂದೆ ಸಾಮಾನ್ಯ ಕೈದಿಯಂತೆ ಶಿಕ್ಷೆ ಅನುಭವಿಸಿದೇ ರೆಸಾರ್ಟ್‌ನಲ್ಲಿ ಕುಳಿತಂತೆ ಕುಳಿತಿರುವ ಆರೋಪಿಯನ್ನು ಕಂಡು ನನಗೆ ಆಘಾತವಾಗಿದೆ ಎಂದಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ, ಪೊಲೀಸ್ ಇಲಾಖೆಯ ಮೇಲೆ ನಮಗೆ ಇನ್ನೂ ನಂಬಿಕೆ ಇದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಕಣ್ಣೀರು ಹಾಕಿರುವ ರೇಣುಕಾಸ್ವಾಮಿ ತಂದೆ ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಎಂದು ಹೇಳಿದ್ದರು, ನಾವು ಸರ್ಕಾರವನ್ನೇ ನಂಬಿದ್ದೇವೆ ಎಂದು ಹೇಳಿದ್ದಾರೆ. ಈವರೆಗೆ ಸರ್ಕಾರದಿಂದ ಉತ್ತಮ ತನಿಖೆ ನಡೆದಿದೆ. ಆದರೆ ಈಗ ನೋಡಿದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಅನಸುತ್ತದೆ ಎಂದು ಕೂಡ ಹೇಳಿದ್ದಾರೆ ರೇಣುಕಾ ಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು.
ಮುಂದುವರೆದು ನಾವು ಇಲ್ಲಿ ನಮ್ಮ ಮಗನನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ, ಆದರೆ ಆರೋಪಿ ಮಾತ್ರ ಜೈಲಿನಲ್ಲಿ ನೆಮ್ಮದಿಯಿಂದ ಇದ್ದಾರೆ, ಚೈನಿ ಹೊಡೆಯುತ್ತಿದ್ದಾರೆ ಎಂದಿರುವ ರೇಣುಕಾ ಸ್ವಾಮಿ ತಂದೆ ಶಿವನಗೌಡ್ರು, ದಿನನಿತ್ಯ ಸೊಸೆ ಬದುಕಿನ ಕುರಿತು ಸಂಕಟ ಆಗುತ್ತೆ, ಇಂತಹ ದೃಶ್ಯಗಳು ನಮ್ಮ ಹೊಟ್ಟೆ ಉರಿಸುತ್ತವೆ ಎಂದಿದ್ದಾರೆ. ಇನ್ನೂ ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು, ಗೃಹ ಸಚಿವರು ಈ ಕಡೆ ಗಮನ ಹರಿಸಬೇಕು ಎಂದಿರುವ ಕಾಶೀನಾಥ್ ಶಿವನಗೌಡ್ರು ಇಂಥವರಿಗೆ ಮನುಷ್ಯತ್ವ ಇದೆಯಾ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ಪರಪ್ಪನ ಅಗ್ರಹಾರದಿಂದ ತೇಲಿಕೊಂಡು ಬಂದ ದರ್ಶನ್ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಸದ್ದು ಮಾಡುತ್ತಿವೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ಸಿಕ್ಕ ರಾಜಾತಿಥ್ಯ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದರ ನಡುವೆ ದರ್ಶನ್ ಅಭಿಮಾನಿಗಳು ಇಲ್ಲಿಯೂ ಕೂಡಾ ವಿವೇಚನೆ ಕಳೆದುಕೊಂಡು, ಸದ್ಯ ನಮ್ಮ ನೆಚ್ಚಿನ ನಾಯಕ ಜೈಲಿನಲ್ಲಿ ನೆಮ್ಮದಿಯಿಂದ ಇದ್ದಾರಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮವನ್ನು ಪಡುತ್ತಿದ್ದಾರೆ


Click it and Unblock the Notifications











