ದರ್ಶನ್, ಪವಿತ್ರಾ ಇಬ್ಬರನ್ನು ಕೆರಳಿಸಿದ್ದ ರೇಣುಕಾ ಸ್ವಾಮಿ ಮೆಸೇಜ್ ಏನು? ಆ ಅಶ್ಲೀಲ ಫೋಟೊ ಯಾವ್ದು?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಕ್ಷುಲ್ಲಕ ಕಾರಣಕ್ಕೆ ಒಂದು ಜೀವ ಬಲಿಯಾಗಿದೆ. ತಮ್ಮ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್, ಫೋಟೊ ಕಳುಹಿಸಿದ್ದಕ್ಕೆ ರೇಣುಕಾ ಸ್ವಾಮಿ ಹತ್ಯೆ ಆಗಿದೆ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕಳುಹಿಸಿದ ಮೆಸೇಜ್, ಫೋಟೊ ನಟ ದರ್ಶನ್‌ನ ಕೆರಳಿಸಿತ್ತು. ಅದೇ ಕಾರಣಕ್ಕೆ ಆತನನ್ನು ಆಪ್ತರ ಮೂಲಕ ಬೆಂಗಳೂರಿಗೆ ಕರೆಸಿ ಥಳಿಸಿದ್ದು ಈ ವೇಳೆ ಆತನ ಜೀವವೇ ಹೋಗಿದೆ ಎನ್ನಲಾಗ್ತಿದೆ. ಈಗಾಗಲೇ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಕೇವಲ ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್ ಕಳುಹಿಸಿದ್ದಕ್ಕೆ ಆತನ ಜೀವವನ್ನೇ ತೆಗೆದು ಬಿಟ್ರಾ? ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ. ಅಷ್ಟಕ್ಕೂ ಪವಿತ್ರಾ ಗೌಡಗೆ ಆತ ಕಳುಹಿಸಿದ ಫೋಟೊ ಏನು? ಮೆಸೇಜ್ ಏನು? ಎಂದು ಕೆಲವರು ಕೇಳುತ್ತಿದ್ದಾರೆ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ರಿಲೇಷನ್‌ಶಿಪ್ ವಿಚಾರ ಜಗಜ್ಜಾಹೀರಾಗಿದೆ. ಖುದ್ದು ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಇದಕ್ಕೆ ಕೌಂಟರ್ ಆಗಿ ವಿಜಯಲಕ್ಷ್ಮಿ ದರ್ಶನ್ ಕೂಡ ಪೋಸ್ಟ್ ಮಾಡಿದ್ದರು. ಇಬ್ಬರ ಇನ್‌ಸ್ಟಾಗ್ರಾಂ ವಾರ್ ಭಾರೀ ಸುದ್ದಿ ಆಗಿತ್ತು.
ಪವಿತ್ರಾ ಗೌಡ ಪೋಸ್ಟ್ ಬಳಿಕ ಕೆಲ ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಪರ ವಹಿಸಿ, ಪವಿತ್ರಾ ಗೌಡಳನ್ನು ಟಾರ್ಗೆಟ್ ಮಾಡುತ್ತಿದ್ದರು. ನಿಮ್ಮಿಂದಲೇ ನಮ್ಮ ಬಾಸ್ ದಾಂಪತ್ಯ ಜೀವನ ಹಾಳಾಯಿತು ಎನ್ನುವ ಕಾಮೆಂಟ್ ಮಾಡುತ್ತಿದ್ದರು. ಇದೇ ರೀತಿ ರೇಣುಕಾಸ್ವಾಮಿ ಕೂಡ ತಮ್ಮ ನೆಚ್ಚಿನ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಜೀವನ ಚೆನ್ನಾಗಿರಬೇಕು ಎಂದು ಬಯಸಿದ್ದರು. ಪವಿತ್ರಾ ಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು ಎನ್ನಲಾಗ್ತಿದೆ.
ಕಳೆದ 3 ತಿಂಗಳಿಂದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಿದ್ದರು. ಪವಿತ್ರಾ ಗೌಡ ಆತನ ಅಕೌಂಟ್ ಬ್ಲಾಕ್ ಮಾಡಿದ್ರೆ, ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಮತ್ತೆ ಕಾಮೆಂಟ್ ಹಾಕುತ್ತಿದ್ದರು ಎನ್ನಲಾಗ್ತಿದೆ. 5 ದಿನಗಳ ಹಿಂದೆ ರೇಣುಕಾಸ್ವಾಮಿ ಮರ್ಮಾಂಗದ ಫೋಟೊ ಕಳುಹಿಸಿ "ದರ್ಶನ್‌ಗಿಂತ ನಾನೇನು ಕಮ್ಮಿ ಬಾ" ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು, ಇದೇ ಫೋಟೊ, ಕಾಮೆಂಟ್ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ ಎಂದು ಟಿವಿ9 ಸುದ್ದಿವಾಹಿನಿಯಲ್ಲಿ ವರದಿಯಾಗಿದೆ.

ಪವಿತ್ರಾ ಗೌಡ ಮೊದಲಿಗೆ ಈ ವಿಚಾರವನ್ನು ತಮ್ಮ ಮನೆ ಕೆಲಸದಾತ ಪವನ್‌ಗೆ ಹೇಳಿದ್ದಾರೆ. ಈ ವಿಚಾರ ದರ್ಶನ್‌ಗೆ ಹೇಳಬೇಡ ಎಂದು ಕೇಳದೇ ಆತನ ಹೇಳಿಬಿಟ್ಟಿದ್ದಾರೆ. ಇದರಿಂದ ಕೆಂಡಾಮಂಡಲವಾದ ದರ್ಶನ್ ಇಂತಾದೊಂದು ಕೆಟ್ಟ ನಿರ್ಧಾರಕ್ಕೆ ಬಂದರು. ರೇಣುಕಾಸ್ವಾಮಿಯನ್ನು ಅಪಹರಿಸಿ, ಶಿಕ್ಷಿಸುವ ಮಟ್ಟಕ್ಕೆ ಇಳಿದು ಬಿಟ್ಟರು ಎಂದು ಹೇಳಲಾಗ್ತಿದೆ.
ಚಿತ್ರದುರ್ಗದಲ್ಲಿ ಅಪೋಲೊ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿಯನ್ನು ದರ್ಶನ್ ಗ್ಯಾಂಗ್ ಬೆಂಗಳೂರಿಗೆ ಕರೆದುಕೊಂಡು ಬಂದಿದೆ. ದರ್ಶನ್ ಆಪ್ತ ವಿನಯ್ ಮಾವನ ಶೆಡ್‌ನಲ್ಲಿ ಕೂಡಿ ಹಾಕಿದ್ದಾರೆ. ಆರೋಪಿಗಳು ಕುಡಿದು ಬಂದು ಶನಿವಾರ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಆ ಸ್ಥಳಕ್ಕೆ ನಟ ದರ್ಶನ್ ಕೂಡ ಹೋಗಿ ಬಂದಿದ್ದರು ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.


Click it and Unblock the Notifications











