ದರ್ಶನ್ ಮನೆಕೆಲಸದವರನ್ನು ಮನೆಗೆ ಕಳಿಸಿದ ವಿಜಯಲಕ್ಷ್ಮಿ, ಇನ್ಮುಂದೆ ದಾಸನನ್ನು ನೋಡಬೇಕೆಂದರೆ ಇವರ ಪರ್ಮಿಷನ್ ಕಡ್ಡಾಯ..
ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿದ್ದರಿಂದನೇ ದರ್ಶನ್ ಕಳೆದ ವರ್ಷ ಅಕ್ಷರಶಃ ನರಕ ಯಾತನೆಯನ್ನು ಅನುಭವಿಸಿದರು ಎನ್ನುವುದು ಅನೇಕರ ಅಭಿಪ್ರಾಯ.
ಕಳೆದ ವರ್ಷ ದರ್ಶನ್ ಕಂಬಿ ಹಿಂದೆ ಇದ್ದರಲ್ಲ, ಆಗ ನವರಸ ನಾಯಕ ಜಗ್ಗೇಶ್ ಸೇರಿ ಅನೇಕರು ಈ ಮಾತನ್ನು ಒಪ್ಪಿಕೊಂಡಿದ್ದರು. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬ ಮಾತು ದರ್ಶನ್‌ಗೆ ಅನ್ವಯವಾಗುತ್ತದೆ. ಯಾಕೆಂದರೆ ಸಾರಥಿ ನಂತರ ದರ್ಶನ್ ಯಾವತ್ತು ಸಜ್ಜನರ ಸಹವಾಸವನ್ನ ಮಾಡ್ಲೇ ಇಲ್ಲ. ಮಾಡಿದ್ದರೆ ಈ ದಯನೀಯ ಸ್ಥಿತಿಯಲ್ಲಿ ಖಂಡಿತವಾಗಿಯೂ ಇರುತ್ತಿರಲಿಲ್ಲ ಎಂದು ಹೇಳಿದ್ದರು.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಲ್ಲಿ ಕೂಡ ಇದೇ ಅಭಿಪ್ರಾಯ ಇತ್ತು ಅನ್ಸುತ್ತೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ತನ್ನ ಪತಿಯ ಸುತ್ತ ಮುತ್ತ ಇದ್ದವರನ್ನೆಲ್ಲ ವಿಜಯಲಕ್ಷ್ಮಿ ಮನೆಗೆ ಕಳಿಸಿದ್ದಾರೆ ಎಂಬ ಸುದ್ದಿ ಇಂದು ಬೆಳಗ್ಗೆಯಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅನೇಕ ಮಾಧ್ಯಮಗಳಲ್ಲಿ ಈ ಕುರಿತು ವರದಿಯನ್ನು ಕೂಡ ಪ್ರಸಾರ ಮಾಡಲಾಗಿದೆ.
ಆ ಪ್ರಕಾರ ದರ್ಶನ್ ಸುತ್ತ ಮುತ್ತ ವಿಜಯಲಕ್ಷ್ಮಿ ಅಷ್ಟದಿಗ್ಬಂಧನವನ್ನೇ ಹಾಕಿದ್ದಾರೆ.ಆರಂಭಿಕ ಹಂತವಾಗಿ ದರ್ಶನ್ ಅವರ ಕಾರ್ ಡ್ರೈವರ್ ಲಕ್ಷ್ಮಣ್ ಮತ್ತು ಮ್ಯಾನೇಜರ್ ನಾಗರಾಜುಗೆ ಮನೆ ಕಡೆ ದಾರಿಯನ್ನು ವಿಜಯಲಕ್ಷ್ಮೀ ತೋರಿಸಿದ್ದಾರೆ. ಇವರಿಬ್ಬರ ವಿಚಾರದಲ್ಲಿ ವಿಜಯಲಕ್ಷ್ಮಿ ದರ್ಶನ್ ಈ ನಿರ್ಧಾರಕ್ಕೆ ಬರಲು ರೇಣುಕಾ ಸ್ವಾಮಿ ಪ್ರಕರಣವೇ ಕಾರಣ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಇವರು ಇಬ್ಬರು ಕೂಡ ತಮ್ಮ ಒಡೆಯನ ಜೊತೆ ಪರಪ್ಪನ ಅಗ್ರಹಾರದ ದರ್ಶನಕ್ಕೆ ಕಳೆದ ವರ್ಷ ತೆರಳಿದ್ದರು. ಈ ಹಿನ್ನೆಲೆ ವಕೀಲರು ಇವರಿಬ್ಬರಿಂದ ದೂರು ಇರುವ ಸಲಹೆಯನ್ನು ದರ್ಶನ್ ಅವರಿಗೆ ಹೇಳಿದ್ದಾರೆ. ಈ ಕಾರಣಕ್ಕೆ ಮುಲಾಜಿಲ್ಲದೇ ವಿಜಯಲಕ್ಷ್ಮಿ ದರ್ಶನ್ ಇಬ್ಬರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ.
ಕೇವಲ ಇವರು ಇಬ್ಬರೇ ಅಲ್ಲ ನಡೆಯಬಾರದ ದುರಂತ ನಡೆಯುವ ಮುನ್ನ ದರ್ಶನ್ ಸುತ್ತ ಮುತ್ತ ಇದ್ದ ಮನೆ ಕೆಲಸದ ಹುಡುಗರಿಗೆ ಕೂಡ ವಿಜಯಲಕ್ಷ್ಮಿ ಗೇಟ್ ಪಾಸ್ ನೀಡಿದ್ಧಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ದರ್ಶನ್ ಅವರ ದಿನಚರಿಯನ್ನು ಬರೆಯಲು ಮ್ಯಾನೇಜರ್ ಇಲ್ಲ. ಅವರ ಚಿತ್ರಗಳ ಚಿತ್ರೀಕರಣ ಮತ್ತು ಚಿತ್ರಕ್ಕೆ ಸಂಬಂಧಿಸಿದ ಕೆಲಸ ಶುರುವಾಗೋವರೆಗೆ ದರ್ಶನ್ ಅವರಿಗೆ ಮ್ಯಾನೇಜರ್ ಇರಲ್ಲ, ಎಲ್ಲ ಜವಾಬ್ಧಾರಿಯನ್ನು ಕೂಡ ವಿಜಯಲಕ್ಷ್ಮಿ ಅವರೇ ನೋಡಿಕೊಳ್ಳುತ್ತಿದ್ಧಾರೆ. ಅತ್ತಿಗೆಯ ಜೊತೆ ನಾನು ಇದ್ದೇನೆ, ಸಿನಿಮಾ ಕೆಲಸಗಳು ಶುರುವಾದ ಮೇಲೆ ಎಲ್ಲರೂ ಬರುತ್ತಾರೆ ಎಂದು ದರ್ಶನ್ ಸಹೋದರ ದಿನಕರ್ ತೂಗುದೀಪ ಮಾಹಿತಿ ನೀಡಿರುವುದಾಗಿ ಕೂಡ ನ್ಯೂಸ್ ಫಸ್ಟ್ ವರದಿಯನ್ನು ಮಾಡಿದೆ.
ಒಟ್ನಲ್ಲಿ ಸದ್ಯ ದರ್ಶನ್ ಅವರ ಮೇಲೆ ಅವರ ಪತ್ನಿ ವಿಜಯಲಕ್ಷ್ಮಿ ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿಯನ್ನು ಮಾಡಿದ್ದು, ದರ್ಶನ್ ಬದುಕು ಮತ್ತು ದಿನಚರಿ ಸಂಪೂರ್ಣವಾಗಿ ಬದಲಾಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಇನ್ಮುಂದೆ ಸುಖಾ ಸುಮ್ಮನೆ ದರ್ಶನ್ ಎಲ್ಲರಿಗೂ ಸಿಗಲ್ಲ, ದರ್ಶನ್ ಅವರನ್ನು ಭೇಟಿ ಮಾಡಬೇಕು ಅಂದರೆ ವಿಜಯಲಕ್ಷ್ಮಿ ಅಥವಾ ದಿನಕರ್ ಅವರ ಮುಖಾಂತರವೇ ಹೋಗಬೇಕು ಎಂಬ ಮಾತು ಕೂಡ ರಾಜರಾಜೇಶ್ವರಿ ನಗರದ ಸುತ್ತ ಮುತ್ತ ಗುಲ್ಲಾಗಿದೆ.


Click it and Unblock the Notifications











