'ನಾನು ಹಾಸಿಗೆ ಹಿಡಿದಾಗ ನನ್ನ ನೆರವಿಗೆ ಬಂದಿದ್ದ ಆ ಇಬ್ಬರು ನಟರು ಮಾತ್ರ' - ಮಂಡ್ಯ ರಮೇಶ್..!
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗ ಅಂದ ಕೂಡಲೇ ಬಣ್ಣಗಳೇ ತುಂಬಿಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಬೇರೆಲ್ಲ ಉದ್ಯಮಕ್ಕಿಂತ ಅನಿಶ್ಚತೆ, ಅಭದ್ರತೆ ಇಲ್ಲಿ ಹೆಚ್ಚೇ ಇದೆ.
ಇನ್ನು, ಈ ಕಾಲದಲ್ಲಿ ಸ್ಟಾರ್‌ಗಳಾದರೆ ಅವರ ಕೈತುಂಬಾ ಕಾಸಾದರೂ ಇರುತ್ತೆ. ಆದರೆ, ಹಿಂದೆ ಹೀಗೆ ಇರಲಿಲ್ಲ. ಆಗ ಪಾತ್ರ ಸಿಕ್ಕರೆ ಅದೇ ದೊಡ್ಡ ವಿಷಯವಾಗಿತ್ತು. ಸ್ಟಾರ್‌ಗಳಿಂದ ಪೋಷಕ ಕಲಾವಿದರವೆರೆಗೆ ಅನೇಕರು ತಮಗೆ ನೀಡಿದ ಪಾತ್ರವನ್ನು ಹಿಂದೆಯಲ್ಲ ಕಣ್ಣಿಗೊತ್ತಿಕೊಂಡು ಮಾಡಿದ್ದು ಇದೆ. ಇದರಿಂದ ಹಣ ಇಲ್ಲದೆ ಆ ನಂತರ ಪರದಾಡಿದ್ದು ಇದೆ.ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಹಣಕಾಸಿನ ನೆರವನ್ನು ಚಿತ್ರರಂಗದ ಸಹೋದ್ಯೋಗಿಗಳಿಂದ ನಿರೀಕ್ಷೆ ಮಾಡಿದ್ದು ಇದೆ. ಆದರೆ, ಇದು ಬಣ್ಣದ ಲೋಕ. ಇಲ್ಲಿ ಬಹುತೇಕ ಬಾರಿ ನಿರೀಕ್ಷೆಗಳು ಹುಸಿಯಾಗುತ್ತವೆ. ಇನ್ನು ಕೆಲವೊಮ್ಮೆ ನಿರೀಕ್ಷೆಯನ್ನೇ ಮಾಡದ ವ್ಯಕ್ತಿಗಳಿಂದ ಆರ್ಥಿಕ ನೆರವು ಸಿಗುತ್ತೆ. ಇದಕ್ಕೆ ಮಂಡ್ಯ ರಮೇಶ್ ಅವರ ಬದುಕಿನಲ್ಲಿ ನಡೆದ ಘಟನೆ ಅತ್ಯುತ್ತಮ ಉದಾಹರಣೆ.

ಹೌದು, ರಂಗಕರ್ಮಿಯಾಗಿ, ಪೋಷಕ ಕಲಾವಿದರಾಗಿ ಚಿತ್ರರಂಗಕ್ಕೆ ಮತ್ತು ರಂಗಭೂಮಿಗೆ ಕಳೆದ ಎರಡು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದ ಮಂಡ್ಯ ರಮೇಶ್, ರ್ಯಾಪಿಡ್ ರಶ್ಮಿ ಅವರಿಗೆ ಸಂದರ್ಶನವನ್ನು ನೀಡಿದ್ದಾರೆ. ತಮ್ಮ ಬದುಕಿನ ಕೆಲ ಪುಟಗಳನ್ನು ತಿರುವಿ ಹಾಕಿದ್ದಾರೆ. ಇದೇ ಸಮಯದಲ್ಲಿ ತಮ್ಮ ಕಷ್ಟಕಾಲದಲ್ಲಿ ಕೈ ಹಿಡಿದವರನ್ನು ಕೂಡ ನೆನಪು ಮಾಡಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಮಂಡ್ಯ ರಮೇಶ್ ನನಗೆ 08 ತಿಂಗಳ ಹಿಂದೆ ಭೀಕರ ಅಪಘಾತವಾಗಿತ್ತು. ಎದ್ದು ನಿಲ್ಲಲು ಆಗದ ಪರಿಸ್ಥಿತಿ ಅದು. ಆಗ ನಾನು ಹಾಸಿಗೆ ಮೇಲೆ ಮಲಗಿದಾಗ ನನ್ನ ಕಡೆಯವರು ಸಹಾಯಕ್ಕೆ ಕೆಲವರಿಗೆ ಕರೆ ಮಾಡಿದ್ದರು. ಆದರೆ ಯಾರೊಬ್ಬರು ಸ್ಪಂದಿಸಲಿಲ್ಲ ಎಂದಿದ್ದಾರೆ.
ಮುಂದುವರೆದು ಈ ಸಮಯದಲ್ಲಿ ಎಲ್ಲರೂ ಕೈ ಎತ್ತಿದಾಗ ಒಬ್ಬ ನಟ-ನಿರ್ದೇಶಕ ಮಾತ್ರ ನನ್ನ ಕೈ ಹಿಡಿದರು ಸಹಾಯಕ್ಕೆ ಬಂದರು ಎಂದಿರುವ ಮಂಡ್ಯ ರಮೇಶ್ ಅಚ್ಚರಿ ಅಂದರೆ ನಾನು ಅವರ ಜೊತೆ ಇಲ್ಲಿಯವರೆಗೆ ಒಂದೇ ಒಂದು ಚಿತ್ರದಲ್ಲಿ ಕೂಡ ಅಭಿನಯಿಸಿಲ್ಲ ಎಂದು ಹೇಳಿದ್ದಾರೆ. ಅವರೇ ನನಗೆ ಕರೆ ಮಾಡಿ ಭೀಕರ ಅಪಘಾತದಲ್ಲಿ ನೀವು ಬದುಕುಳಿದಿದ್ದೆ ದೊಡ್ಡದು, ಕಳೆದು ಒಂದು ತಿಂಗಳಿಂದ ಹಾಸಿಗೆ ಹಿಡಿದಿದ್ದೀರಾ, ಜೀವನ ಹೇಗೆ ನಡೆಯುತ್ತಿದೆ ಅಣ್ಣಾ ಎಂದು ಕೇಳಿದರು ಆ ನಂತರ ಮಾತನಾಡಿ ಕಾಲ್ ಕಟ್ ಮಾಡಿದರು ಎಂದಿರುವ ಮಂಡ್ಯ ರಮೇಶ್, ಫೋನ್ ಕಟ್ ಆದ ಕೂಡಲೇ ನನ್ನ ಖಾತೆಗೆ ಹಣ ಬಂದಿತ್ತು. ಆ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ರಿಷಬ್ ಶೆಟ್ಟಿ ಎಂದು ಹೇಳಿದ್ಧಾರೆ.
ಇನ್ನು ಮೈಸೂರಿನಲ್ಲಿ ಮಂಡ್ಯ ರಮೇಶ್ ಅವರ ನಟನಾ ರಂಗ ಶಾಲೆ ಇದೆ. ಅಭಿನಯ, ರಂಗ ಸಂಗೀತ, ರಂಗ ವಿನ್ಯಾಸ, ಇತಿಹಾಸ ಸೇರಿ ರಂಗಭೂಮಿಯ ಹಲವು ಆಯಾಮಗಳ ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ಇಲ್ಲಿ ನಡೆಯುತ್ತವೆ. ಆದರೆ, ಈ ರಂಗಮಂದಿರ ನಿರ್ಮಾಣ ಮಾಡಲು ಮಂಡ್ಯ ರಮೇಶ್ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಈ ಕುರಿತು ಕೂಡ ಸಂದರ್ಶನದಲ್ಲಿ ಮಾತನಾಡಿರುವ ಮಂಡ್ಯ ರಮೇಶ್ ಹಿಂದೊಮ್ಮೆ ರಂಗಮಂದಿರ ನಿರ್ಮಾಣ ಮಾಡುವ ಸಮಯದಲ್ಲಿ ಜನರೇಟರ್ ಅಳವಡಿಸಲು ನನ್ನ ಬಳಿ ಹಣ ಇರಲಿಲ್ಲ. ತುಂಬಾ ಒದ್ದಾಡುತ್ತಿದ್ದೆ. ಆಗ ಜನರೇಟರ್ ತೆಗೆದುಕೊಳ್ಳಿ ಎಂದು ದರ್ಶನ್ ನನ್ನ ಜೇಬಿಗೆ ಹಣ ಇಟ್ಟು ಹೋಗಿದ್ದರು ಎಂದು ಹೇಳಿದ್ಧಾರೆ. ಹೀಗೆ ಕೆಲವರು ಮಾತ್ರ ಕಷ್ಟದ ಸಮಯದಲ್ಲಿ ನನ್ನ ಕೈ ಹಿಡಿದಿದ್ದಾರೆ ಎಂದು ಮಂಡ್ಯ ರಮೇಶ್ ನೆನಪು ಮಾಡಿಕೊಂಡಿದ್ದಾರೆ.


Click it and Unblock the Notifications











