SIIMA 2023: "ನಮ್ಮಮ್ಮನ ಜೊತೆ ಹೀಗೆ ಮಾತಾಡ್ತೀನಿ": ಕನ್ನಡದಲ್ಲಿ ತಾರಕ್- ರಿಷಬ್ ಶೆಟ್ಟಿ ಸಂಭಾಷಣೆ ವೈರಲ್
ತೆಲುಗು ನಟ ಜ್ಯೂ. ಎನ್‌ಟಿಆರ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ತಾರಕ್ ತಾಯಿ ಕುಂದಾಪುರ ಮೂಲದವರು. ಹಾಗಾಗಿ ಎನ್‌ಟಿಆರ್ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಡಾ. ರಾಜ್‌ಕುಮಾರ್ ಕುಟುಂಬದ ಜೊತೆಗೂ ಆತ್ಮೀಯ ಒಡನಾಟವಿದೆ. ಈ ಹಿಂದೆ ತೆಲುಗು ಬಿಗ್‌ಬಾಸ್ ವೇದಿಕೆಯಲ್ಲಿ ತಾರಕ್ ಕನ್ನಡದಲ್ಲಿ ಮಾತನಾಡಿದ್ದರು.
ದಿವಂಗತ ನಟ ಪುನೀತ್ ರಾಜ್‌ಕುಮಾರ್‌ಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿದ ಸಮಾರಂಭಕ್ಕೆ ತಾರಕ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೇ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಸೈಮಾ 2023 ವೇದಿಕೆಯಲ್ಲಿ ಮತ್ತೊಮ್ಮೆ ಟಾಲಿವುಡ್ ಯಂಗ್ ಟೈಗರ್ ಕನ್ನಡದಲ್ಲಿ ಮಾತನಾಡಿದ್ದಾರೆ. ಪ್ರಶಸ್ತಿ ಪಡೆಯಲು ವೇದಿಕೆ ಏರಿದ್ದ ರಿಷಬ್ ಜೊತೆ ಕನ್ನಡದಲ್ಲೇ ಸಂಭಾಷಣೆ ನಡೆಸಿದ್ದಾರೆ.

ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ತಾರಕ್ ಹಾಗೂ ರಿಷಬ್ ಶೆಟ್ಟಿ ಕನ್ನಡ ಸಂಭಾಷಣೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'RRR' ಚಿತ್ರದ ಪ್ರಚಾರದ ವೇಳೆ ಎನ್‌ಟಿಆರ್ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದ್ದು ವೈರಲ್ ಆಗಿತ್ತು. ಹಾಲಿವುಡ್ ವೇದಿಕೆಗಳಲ್ಲೂ ಸ್ಟೈಲಿಶ್ ಆಗಿ ಇಂಗ್ಲೀಷ್ ಮಾತನಾಡಿ ಅಭಿಮಾನಿಗಳ ಮನಗೆದ್ದಿದ್ದರು. ಈಗ ಮತ್ತೆ ತಾರಕ್ ಕನ್ನಡದಲ್ಲಿ ಮಾತನಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ 2023 (SIIMA) ನಲ್ಲಿ ಜ್ಯೂ. ಎನ್‌ಟಿಆರ್ ಭಾಗವಹಿಸಿದ್ದರು. ಎರಡು ದಿನಗಳ ಕಾಲ ಈ ಪ್ರಶಸ್ತಿ ಪ್ರದಾನ ನಡೆಯುತ್ತಿದ್ದು ನಿನ್ನೆ (ಸೆಪ್ಟೆಂಬರ್ 15) ಕನ್ನಡ ಮತ್ತು ತೆಲುಗು ಇಂಡಸ್ಟ್ರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ತೆಲುಗು ಮತ್ತು ಕನ್ನಡ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಏಕಕಾಲಕ್ಕೆ ಪ್ರಶಸ್ತಿ ನೀಡಲಾಯಿತು. ಎರಡೂ ಚಿತ್ರರಂಗದ ತಾರೆಯರು ಭಾಗಿ ಆಗಿದ್ದರು.
'ಕಾಂತಾರ' ಚಿತ್ರದ ಮೂಲಕ ರಿಷಬ್ ಶೆಟ್ಟಿ ದೇಶಾದ್ಯಂತ ಗುರ್ತಿಸಿಕೊಂಡಿದ್ದಾರೆ. ಸೈಮಾ ಪ್ರಶಸ್ತಿಗಳಲ್ಲಿ ರಿಷಬ್ ಶೆಟ್ಟಿ ಕನ್ನಡದ ಅತ್ಯುತ್ತಮ ನಟ (ಕ್ರಿಟಿಕ್ಸ್) ಪ್ರಶಸ್ತಿ ಗೆದ್ದಿದ್ದಾರೆ. ರಿಷಬ್ ಪ್ರಶಸ್ತಿ ಪಡೆದ ಬಳಿಕ ವೇದಿಕೆ ಮುಂಭಾಗ ಕುಳಿತಿದ್ದ ಜ್ಯೂ. ಎನ್‌ಟಿಆರ್ ಕೂಡ ಅಭಿನಂದಿಸಿದ್ದಾರೆ. ಆ ಸಮಯದಲ್ಲಿ ನಿರೂಪಕ ಅಕುಲ್ ಬಾಲಾಜಿ ತಾರಕ್‌ಗೆ ಮೈಕ್ ಕೊಟ್ಟಿದ್ದಾರೆ. ಆಗ ತಾರಕ್ ಮತ್ತು ರಿಷಬ್ ಶೆಟ್ಟಿ ನಡುವೆ ಕನ್ನಡದಲ್ಲಿ ಸಂಭಾಷಣೆ ನಡೆಯಿತು. ಇಬ್ಬರು ತಮ್ಮ ತಮ್ಮ ಚಿತ್ರಗಳ ಬಗ್ಗೆ ಪರಸ್ಪರ ಮೆಚ್ಚುಗೆಯ ಮಾತನಾಡಿದ್ದು ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಪರಸ್ಪರ ಅಭಿನಂದಿಸಿದ್ದಾರೆ.
ತಾರಕ್ ಮಾತನಾಡಿ "ಹೇಗಿದ್ದೀರಾ ಸರ್, ಮತ್ತೊಮ್ಮೆ ಪ್ರಶಸ್ತಿ ಪಡೆದಿದ್ದಕ್ಕೆ ಅಭಿನಂದನೆ. ನಮ್ಮ ಅಮ್ಮನ ಜೊತೆ ಹೀಗೆ ಕನ್ನಡದಲ್ಲಿ ಮಾತನಾಡುತ್ತೀನಿ" ಎಂದಿದ್ದಾರೆ. ಬಳಿ ರಿಷಬ್ ಶೆಟ್ಟಿ "ತಾರಕ್ ಸರ್ ನಿಮ್ಮನ್ನು ನೇರವಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಲು ಸಾಧ್ಯವಾಗಲಿಲ್ಲ. ಕೊನೆ ಬಾರಿ ಕಿರಿಕ್ ಪಾರ್ಟಿ ತಂಡ ಬಂದಾಗ ನೀವೇ ಪ್ರಶಸ್ತಿ ಕೊಟ್ಟಿದ್ರಿ. ನನ್ನದು ಕುಂದಾಪುರ. ನಿಮ್ಮ ತಾಯಿ ಊರು, ನಮ್ಮೂರು ಎಲ್ಲಾ ಒಂದೇ ಆಗಿರೋದ್ರಿಂದ ನೀವು ತೆಲುಗಿನವರು ಎನ್ನುವ ಆಲೋಚನೆ ಬರಲ್ಲ" ಎಂದಿದ್ದಾರೆ.
ಸೈಮಾ ಅವಾರ್ಡ್ಸ್‌ನಲ್ಲಿ 'RRR' ಚಿತ್ರದ ನಟನೆಗಾಗಿ ಜ್ಯೂ. ಎನ್‌ಟಿಆರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಜಮೌಳಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ತಾರಕ್ ಕೋಮುರಂ ಭೀಮ್ ಆಗಿ ನಟಿಸಿದ್ದರು. ಮಲ್ಟಿಸ್ಟಾರರ್ ಚಿತ್ರದಲ್ಲಿ ರಾಮ್‌ಚರಣ್ ಕೂಡ ಮಿಂಚಿದ್ದರು. 'RRR' ಸಿನಿಮಾ ಒಟ್ಟು 5 ವಿಭಾಗಗಳಲ್ಲಿ ಈ ಬಾರಿ ಸೈಮಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.


Click it and Unblock the Notifications











