'ಶ್ರೀ ಕೃಷ್ಣದೇವರಾಯ'ನಾಗಲಿದ್ದಾರೆ ರಿಷಬ್ ಶೆಟ್ಟಿ, ನಿರ್ದೇಶಕ ಯಾರು ?
ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ .. ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಸದಭಿರುಚಿಯ ಚಿತ್ರಗಳನ್ನು ಮಾಡುತ್ತಲೇ ಸೈ ಎನ್ನಿಸಿಕೊಂಡು, ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕ ಕಮ್ ನಾಯಕನಾಗಿ ಗುರುತಿಸಿಕೊಂಡ ರಿಷಬ್ ಈಗ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಬದಲಿಗೆ ರಿಷಬ್ ಈಗ ನ್ಯಾಶನಲ್ ಹೀರೋ.
ಇಂದು ರಿಷಬ್‌ಗೆ ಅಕ್ಕ-ಪಕ್ಕದ ರಾಜ್ಯದಲ್ಲಿ ಭಾರೀ ಬೇಡಿಕೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಕಾಂತಾರದ ಧ್ಯಾನದಲ್ಲಿರುವ ರಿಷಬ್ ಬಾಲಿವುಡ್‌ನಲ್ಲಿ ಶಿವಾಜಿ ಮಹಾರಾಜ್ ಅವತಾರವೆತ್ತಲು ಅಣಿಯಾಗಿದ್ದಾರೆ. ಮತ್ತೊಂದು ಕಡೆ ತೆಲುಗು ಚಿತ್ರವನ್ನು ಒಪ್ಪಿಕೊಂಡಿರುವ ರಿಷಬ್ ಜೈ ಹನುಮಾನ ಚಿತ್ರದಲ್ಲಿ ಹನುಮಂತನ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ತೆಲುಗಿನಲ್ಲಿ 'ಲಕ್ಕಿ ಭಾಸ್ಕರ್', 'ಜೆರ್ಸಿ' ಸೇರಿ ಒಂದಷ್ಟು ದೊಡ್ಡ ಚಿತ್ರಗಳನ್ನು ನಿರ್ಮಾಣ ಮಾಡಿರುವ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ಕೂಡ ರಿಷಬ್ ಚಿತ್ರವನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ. ಪ್ರಭಾಸ್ ಮತ್ತು ಹೊಂಬಾಳೆ ಸಂಸ್ಥೆಯ ಚಿತ್ರಕ್ಕೆ ಕೂಡ ರಿಷಬ್ ಕಥೆ ಬರೆಯಲಿದ್ದಾರೆ ಎನ್ನುವ ಮಾತು ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ.
ಇದರ ನಡುವೆ ಕನ್ನಡದಲ್ಲಿ ರುದ್ರಪ್ರಯಾಗ.. ಬೆಲ್ ಬಾಟಂ 2.. ಸೇರಿ ಈ ಹಿಂದೆ ಘೋಷಣೆಯಾದ ಹಲವು ಚಿತ್ರಗಳಿವೆ. ಈ ಚಿತ್ರಗಳು ಅದ್ಯಾವ ಕಾಲಕ್ಕೆ ತೆರೆಗೆ ಬರುತ್ತವೆ ಎನ್ನುವುದು ಸಾಕ್ಷಾತ್ ರಿಷಬ್ ಶೆಟ್ಟಿ ಅವರಿಗೆ ಕೂಡ ಗೊತ್ತಿರಲಿಕ್ಕಿಲ್ಲ. ಹೀಗಿರುವಾಗ ಇದೀಗ ರಿಷಬ್ ಶೆಟ್ಟಿ ಶ್ರೀಕೃಷ್ಣ ದೇವರಾಯನಾಗಲಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್‌ವೊಂದು ಉತ್ತರದಿಂದ ದಕ್ಷಿಣದವರೆಗೆ ಕೇಳಿ ಬರುತ್ತಿದೆ.
ಹೌದು, ಲಗಾನ್.. ಸ್ವದೇಸ್.. ಜೋಧಾ ಅಕ್ಬರ್.. ಅಂತಹ ಅತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಅಶುತೋಶ್ ಗೋವರಿಕರ್ ಅವರ ಜೊತೆ ರಿಷಬ್ ಚಿತ್ರವೊಂದನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಸೆಪ್ಟೆಂಬರ್ 2023 ರಲ್ಲಿಯೇ ಈ ಕುರಿತು ಪಿಂಕ್ ವಿಲ್ಲಾ ವರದಿಯನ್ನು ಮಾಡಿತ್ತು.

ಆ ನಂತರ 2024ರ ಆರಂಭದಲ್ಲಿ ಅಶುತೋಶ್ ಗೋವರಿಕರ್ ಅವರ ಆಫೀಸ್‌ನಲ್ಲಿ ರಿಷಬ್ ಕಾಣಿಸಿಕೊಂಡಿದ್ದರು. ಅಂದಿನಿಂದ ಇಂದಿನವರೆಗೆ ಈ ಜೋಡಿಯ ಚಿತ್ರದ ಕುರಿತು ಹಲವು ಪ್ರಶ್ನೆಗಳು ಹಲವರಲ್ಲಿ ಇದ್ದವು. ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದ್ದು ನಮ್ಮ ವಿಜಯನಗರ ಸಾಮ್ರಾಜ್ಯದ ಹೆಮ್ಮೆಯ ಅರಸ 'ಶ್ರೀ ಕೃಷ್ಣದೇವರಾಯ'ನ ಕುರಿತು ಅಶುತೋಶ್ ಗೋವರಿಕರ್ ಮಾಡಲು ಮುಂದಾಗಿದ್ದು 'ಶ್ರೀ ಕೃಷ್ಣದೇವರಾಯ'ನ ಪಾತ್ರದಲ್ಲಿ ರಿಷಬ್ ಧಗಧಗಿಸಲಿದ್ದಾರೆ ಎಂದು 'ಡೆಕ್ಕನ್ ಕ್ರೋನಿಕಲ್' ಸದ್ಯ ವರದಿಯನ್ನು ಮಾಡಿದೆ.
ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು 83.. ತಲೈವಿ.. ಸೇರಿ ಹಲವು ಟಾಲಿವುಡ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಷ್ಣುವರ್ಧನ್ ಇಂದುರಿ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಖುದ್ದು ವಿಷ್ಣುವರ್ಧನ್ ಇಂದುರಿ ಈ ವಿಚಾರವನ್ನು ಡೆಕ್ಕನ್ ಕ್ರೋನಿಕಲ್‌ಗೆ ಖಚಿತ ಪಡಿಸಿದ್ದು ರಿಷಬ್ ಮತ್ತು ಅಶುತೋಶ್ ಗೋವರಿಕರ್ ಜೊತೆ ಚಿತ್ರ ಮಾಡುತ್ತಿರುವುದಾಗಿ ಹೇಳಿದ್ಧಾರೆ. ಶೀಘ್ರದಲ್ಲಿಯೇ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದು ಕೂಡ ಹೇಳಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣ ಭಾರತದ ಹಲವು ದಿಗ್ಗಜರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಕಾಂತಾರ ಈ ಅಕ್ಟೋಬರ್2ರಂದು ಬಿಡುಗಡೆಯಾದ ಬೆನ್ನಲ್ಲಿಯೇ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯುವ ಸಾಧ್ಯತೆ ಕೂಡ ಇದೆ.
ಒಟ್ನಲ್ಲಿ ಸದ್ಯ ಶ್ರೀಕೃಷ್ಣದೇವರಾಯನಾಗಿ ರಿಷಬ್ ಅಬ್ಬರಿಸಲು ಸಿದ್ದರಾಗಿದ್ದಾರೆ. ಈ ವಿಚಾರ ಕನ್ನಡಿಗರಿಗೆ ಖುಷಿ ಕೊಡುವ ವಿಚಾರವಾದರೂ ಕೂಡ ಯಶ್ ಅವರಂತೆಯೇ ರಿಷಬ್ ಕೂಡ ಪರಭಾಷೆಯ ಪಾಲಾದ ದುಖ ಕೂಡ ಸದ್ಯ ಹಲವರಲ್ಲಿದೆ. ಕಾಂತಾರ ನಂತರ ರಿಷಬ್ ಕನ್ನಡ ಚಿತ್ರ ಮಾಡ್ತಾರಾ ಉತ್ತರ ಕಾಲವೇ ನೀಡಲಿದೆ.


Click it and Unblock the Notifications











