ತಮಿಳು ಚಿತ್ರದಲ್ಲಿ ಡಾ.ರಾಜ್ ಫೋಟೋ; ಗೂಗಲ್ ನಲ್ಲಿ ರಿಪೋರ್ಟ್ ಮಾಡಿ ಎಂದ ರಿಷಬ್ ಶೆಟ್ಟಿ
ಗೂಗಲ್ ಕಡೆಯಿಂದ ಕನ್ನಡಕ್ಕೆ ಪದೇ ಪದೇ ಅವಮಾನ ಆಗುತ್ತಿದೆ. ಇತ್ತೀಚಿಗೆ ಅತ್ಯಂತ ಕೊಳಕು ಭಾಷೆ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ರೆ ಕನ್ನಡ ಭಾಷೆ ಎಂದು ತೋರುತ್ತಿತ್ತು. ಕನ್ನಡಿಗರ ಆಕ್ರೋಶದ ಬಳಿಕ ತಪ್ಪನ್ನು ಸರಿಪಡಿಸಿಕೊಂಡಿತ್ತು. ಇದರ ಬೆನ್ನಲ್ಲೇ ಈಗ ಗೂಗಲ್ ಕಡೆಯಿಂದ ಮತ್ತೊಂದು ಎಡವಟ್ಟಾಗಿದೆ.
Recommended Video
ನಟಸಾರ್ವಭೌಮ ಡಾ.ರಾಜ್ ಕುಮಾರ್ ವಿಚಾರದಲ್ಲಿ ಗೂಗಲ್ ಮತ್ತೊಂದು ಎಡವಟ್ಟು ಮಾಡಿದೆ. ತಮಿಳು ಚಿತ್ರವೊಂದರಲ್ಲಿ ಡಾ.ರಾಜ್ ಕುಮಾರ್ ಫೋಟೋ ಮತ್ತು ಹೆಸರನ್ನು ಬಳಸಿಕೊಳ್ಳುವ ಮೂಲಕ ಕನ್ನಡ ಖ್ಯಾತ ನಟನಿಗೆ ಅವಮಾನ ಮಾಡಿದೆ. ಹೌದು, ತಮಿಳು ನಟ ವಿಜಯ್ ಸೇತುಪತಿ ಮತ್ತು ಮಾದವನ್ ನಟನೆಯ 'ವಿಕ್ರಮ್ ವೇದ' ಸಿನಿಮಾದ ಸ್ಟಾರ್ ಕಾಸ್ಟ್ ಲಿಸ್ಟ್ ನಲ್ಲಿ ಡಾ.ರಾಜ್ ಕುಮಾರ್ ಹೆಸರು ಮತ್ತು ಫೋಟೋ ಇದೆ.
ಚಿತ್ರದ ಹಾಫ್ ಬಾಯ್ಲ್ ಪಾತ್ರದಲ್ಲಿ ರಾಜ್ ಕುಮಾರ್ ನಟಿಸಿದ್ದಾರೆ ಎಂದು ಗೂಗಲ್ ತೋರಿಸುತ್ತಿದೆ. 2017ರಲ್ಲಿ ತಮಿಳಿನಲ್ಲಿ ಬಿಡುಗೆಯಾದ 'ವಿಕ್ರಮ್ ವೇದ' ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಡಾ.ರಾಜ್ ಕುಮಾರ್ ಹೆಸರು ಸೇರಿಕೊಂಡಿರುವ ಬಗ್ಗೆ ಕನ್ನಡಿಗರು ಸಿಡಿದೆದ್ದಿದ್ದಾರೆ. ಗೂಗಲ್ ಗೆ ರಿಪೋರ್ಟ್ ಮಾಡಿ ಎಂದು ಅನೇಕರು ಕೇಳಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ, ನಟ ರಿಷಬ್ ಶೆಟ್ಟಿ, "ಎಲ್ಲರಲ್ಲೂ ಒಂದು ಮನವಿ, ವಿಕ್ರಂ ವೇದ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ಡಾ. ರಾಜಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ (half boil) ಅಂತ ನಮೂದಿಸಲಾಗಿದೆ, ದಯಮಾಡಿ ಅದನ್ನು ಗೂಗಲ್ ಗೆ report ಮಾಡಿ, ತಪ್ಪು ಸರಿ ಹೋಗಲಿ" ಎಂದು ಮನವಿ ಮಾಡಿದ್ದಾರೆ.

ಚಿತ್ರದಲ್ಲಿ ಹಾಫ್ ಬಾಯ್ಲ್ ಪಾತ್ರವನ್ನು ಮಾಡಿದ ಕಲಾವಿದನ ಹೆಸರು ರಾಜ್ ಕುಮಾರ್ ಇರಬಹುದು. ಹಾಗಾಗಿ ಈ ಎಡವಟ್ಟು ಆಗಿರುವ ಸಾಧ್ಯತೆ ಇದೆ. ಆದರೆ ಕನ್ನಡಿಗರ ಆರಾದ್ಯ ದೈವ ಡಾ.ರಾಜ್ ಕುಮಾರ್ ಹೆಸರನ್ನು ಬೇರೆ ಭಾಷೆಯ ಯಾವುದೋ ಪಾತ್ರದಲ್ಲಿ ಕನ್ನಡಿಗರಿಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇದು ಡಾ.ರಾಜ್ ಕುಮಾರ್ ಆದ ಅವಮಾನ ಬೇಗ ಸರಿಪಡಿಸಿ ಎಂದು ಅನೇಕರು ಮನವಿ ಮಾಡುತ್ತಿದ್ದಾರೆ.


Click it and Unblock the Notifications











