'ಕಾಂತಾರ- 1' ಸಿನಿಮಾ ₹1000 ಕೋಟಿ ಕಲೆಕ್ಷನ್ ಮಾಡುತ್ತಾ? ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಬಹುನಿರೀಕ್ಷಿತ 'ಕಾಂತಾರ- 1' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮುಂದಿನ ವಾರವೇ ಸಿನಿಮಾ ತೆರೆಗಪ್ಪಳಿಸಲಿದೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
'ಕಾಂತಾರ- 1' ಪ್ರಮೋಷನ್ ಶುರುವಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಬಳಿಕ ಕೇರಳದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಕೇರಳದಲ್ಲಿ ಸಿನಿಮಾ ವಿತರಣೆ ಮಾಡುತ್ತಿದ್ದಾರೆ. ಮಲಯಾಳಂ ಮಾಧ್ಯಮದವರ ಪ್ರಶ್ನೆಗಳಿಗೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ. ಈ ವೇಳೆ 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಒತ್ತಡ ಇದ್ಯಾ? ಎನ್ನುವ ಪ್ರಶ್ನೆ ಕೂಡ ಎದುರಾಗಿದೆ.

3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಸಿನಿಮಾ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮಿತ್ತು. ಬಳಿಕ ಪ್ರೀಕ್ವೆಲ್ ಮಾಡುವ ಲೆಕ್ಕಾಚಾರ ಶುರುವಾಯಿತು. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣವಾಗಿದೆ. ಅದಕ್ಕೆ ತಕ್ಕಂತೆ ಕಲೆಕ್ಷನ್ ಕೂಡ ಇರುತ್ತದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.
ರಿಷಬ್ ಶೆಟ್ಟಿ ಮಾತನಾಡಿ "ನಾನು ಯಾವುದೇ ನಂಬರ್ ಗೇಮ್‌ನಲ್ಲಿ ಇಲ್ಲ. ನನಗೆ ನನ್ನ ಜೀವನದಲ್ಲಿ 'ಕಾಂತಾರ' ಬಹಳ ದೊಡ್ಡ ಬಜೆಟ್ ಸಿನ್ಮಾ ಆಗಿತ್ತು. ನಾನು ಒಬ್ಬ ಹೀರೊ, ಅಷ್ಟು ದೊಡ್ಡ ಬಜೆಟ್ ಸಿನ್ಮಾದಲ್ಲಿ ಕೆಲಸ ಮಾಡಿರಲಿಲ್ಲ. ಡೈರೆಕ್ಷನ್ ಕೂಡ ಮಾಡಿರಲಿಲ್ಲ. ಹೆಚ್ಚು ಅಂದರೆ 3ರಿಂದ 4 ಕೋಟಿ ರೂ. ಬಜೆಟ್ ಸಿನ್ಮಾ ಮಾಡುತ್ತಿದ್ದೆ. ಮೊದಲ ಬಾರಿಗೆ 15 ಕೋಟಿ ರೂ. ಬಜೆಟ್ ಸಿನ್ಮಾ(ಕಾಂತಾರ) ಅಂದಾಗ ಬಹಳ ಒತ್ತಡ ಇತ್ತು. ರಿಲೀಸ್ ಬಳಿಕ ಇದು ಚಿಕ್ಕ ಬಜೆಟ್ ಸಿನ್ಮಾ ಅಂತ ಎಲ್ರೂ ಹೇಳಿದ್ರು. 400 ಕೋಟಿ ರೂ. ಕಲೆಕ್ಷನ್ ನೋಡಿ ಹೀಗಂದ್ರು. ಕಲೆಕ್ಷನ್ ನೋಡಿ ಪ್ರೇಕ್ಷಕರು ಬಜೆಟ್ ಅನ್ನು ಕಮ್ಮಿ ಎನ್ನುವಂತೆ ಮಾಡಿಬಿಟ್ರು. ಆದರೆ ನನಗೆ ಆಗ ಭಯ ಇತ್ತು" ಎಂದಿದ್ದಾರೆ.

"ನಮಗೆ 1000 ಕೋಟಿ ರೂ. ಕ್ಲಬ್ ಬೇಡ, ಪ್ರೇಕ್ಷಕರ ಕ್ಲಬ್, ಫ್ಯಾನ್ಸ್ ಕ್ಲಬ್ ಸಾಕು. ನಾವು ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಾವು ಒಂದು ಸಿನ್ಮಾ ಮಾಡ್ತೀವಿ. ಅದನ್ನು ದೊಡ್ಡದು, ಚಿಕ್ಕದು ಮಾಡುವುದು ಪ್ರೇಕ್ಷಕರು. ಉದಾಹರಣೆಗೆ 'ಸು ಫ್ರಮ್ ಸೋ' ಸಿನ್ಮಾ ಎಲ್ಲಿಂದ ಎಲ್ಲಿಗೆ ಹೋಯ್ತು ಅನ್ನೋದು ಗೊತ್ತಿದೆ. 'ಕಾಂತಾರ' ಕೂಡ ಅದೇ ರೀತಿ ಆಗಿತ್ತು. ಮಲಯಾಳಂ ಸಿನ್ಮಾ 'ಲೋಕ' ಈಗ ವಿಶ್ವದಾದ್ಯಂತ ಸದ್ದು ಮಾಡ್ತಿದೆ ಎನ್ನುವುದನ್ನು ನೋಡ್ತಿದ್ದೇವೆ. ಪ್ರೇಕ್ಷಕರಿಗೆ ಇಷ್ಟವಾಗಿಬಿಟ್ಟರೆ ಚಿತ್ರವನ್ನು ದೊಡ್ಡದು ಮಾಡ್ತಾರೆ, ಚಿಕ್ಕದು ಮಾಡ್ತಾರೆ. ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. 'ಕಾಂತಾರ' ಹಿಟ್ ಆಗಿ ಪ್ರೀಕ್ವೆಲ್ ಮೇಲೆ ಒತ್ತಡ ಅಂದ್ರೆ ತಪ್ಪಾಗುತ್ತೆ. ಅದು ಜವಾಬ್ದಾರಿಯಾಗಿ ತೆಗೆದುಕೊಂಡು ಕೆಲಸ ಮಾಡಿದ್ದೀವಿ" ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.
ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಲೇ ಇದೆ. ಅಜನೀಶ್ ಲೋಕನಾಥ್ ಎಲ್ಲರೂ ಅದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ನಾನು ಕೂಡ ಅಲ್ಲೇ ಇರಬೇಕಿತ್ತು. ಆದರೆ ಬೇರೆ ವಿಧಿಯಿಲ್, ನಾನೇ ಪ್ರಚಾರ ಮಾಡಬೇಕು ಅದಕ್ಕೆ ಬಂದಿದ್ದೀನಿ ಎಂದು ರಿಷಬ್ ಶೆಟ್ಟಿ ಸಿನಿಮಾ ಪ್ರಮೋಷನ್ ಬಗ್ಗೆ ಮಾತನಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ- 1' ಸಿನಿಮಾ 30 ದೇಶಗಳಲ್ಲಿ ಬಿಡುಗಡೆ ಆಗ್ತಿದೆ. ಭಾರತದಲ್ಲೇ 7000 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಅಕ್ಟೋಬರ್ 1ರಂದು ರಾತ್ರಿ ಪ್ರೀಮಿಯರ್ ಶೋಗಳು ಶುರುವಾಗಲಿದೆ.


Click it and Unblock the Notifications











