Shivamma Trailer: ಯರೆಹಂಚಿನಾಳದ 'ಶಿವಮ್ಮ'ನ ಕಥೆ-ವ್ಯಥೆ ಏನು?
ರಿಷಬ್ ಶೆಟ್ಟಿ ನಿರ್ದೇಶಕರಾಗಿ, ಹೀರೊ ಆಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ಕಡಿಮೆ ಬಜೆಟ್ ಸಿನಿಮಾ ನಿರ್ದೇಶಿಸುವ ರಿಷಬ್ ಆಗಾಗ್ಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾರೆ. ಸದ್ಯ ರಿಷಬ್ ಶೆಟ್ಟಿ ಫಿಲ್ಮ್ಸ್ ಸಂಸ್ಥೆಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಜಯಶಂಖರ್ ಆರ್ಯರ್ ನಿರ್ದೇಶನದ 'ಶಿವಮ್ಮ' ಸಿನಿಮಾ ಜೂನ್ 14ಕ್ಕೆ ತೆರೆಗೆ ಬರ್ತಿದೆ. ಸದ್ಯ ಟ್ರೈಲರ್ ಬಿಡುಗಡೆ ಆಗಿದೆ. ಯರೆಹಂಚಿನಾಳ ಎನ್ನುವ ಊರಿನಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಸಿನಿಮಾ ಪ್ರಶಸ್ತಿಗಳನ್ನು ಗೆದ್ದಿದೆ. ಭಾರೀ ಮೆಚ್ಚುಗೆ ಗಳಿಸಿದೆ. ಅಂತೂ ಇಂತೂ ಇದೀಗ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

ಚಿತ್ರೀಕರಣದ ವೇಳೆ ನೈಜ ಶಬ್ಧವನ್ನು ಬಳಸಿ ಸಾಧ್ಯವಾದಷ್ಟು ನೈಜವಾಗಿ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಕೆಲವೊಮ್ಮೆ ನಡೆಯುತ್ತದೆ. 'ತಿಥಿ' ಚಿತ್ರದಲ್ಲಿ ಈ ತಂತ್ರ ಬಳಸಿ ರಾಮ್ ರೆಡ್ಡಿ ಗೆದ್ದಿದ್ದರು. ಬಳಿಕ ಅದೇ ರೀತಿ ಒಂದಷ್ಟು ಸಿನಿಮಾಗಳು ಬಂದಿದ್ದವು. ಶಿವಮ್ಮ ಚಿತ್ರದಲ್ಲಿ ಕೂಡ ಅದೇ ರೀತಿಯ ಪ್ರಯತ್ನ ಮಾಡಲಾಗಿದೆ. ಕಲಾವಿದರ ಬದಲು ಹಳ್ಳಿಯ ಜನರನ್ನೇ ಬಳಸಿಕೊಂಡು ಚಿತ್ರೀಕರಣ ಮಾಡಿದ್ದಾರೆ.
ಯರೆಹಂಚಿನಾಳದ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದ ಶಿವಮ್ಮನ ಬದುಕು ಹೇಗೆಲ್ಲಾ ಬದಲಾಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ. ಕುಟುಂಬ ಪೋಷಣೆಗಾಗಿ ಊರೆಲ್ಲಾ ಸಾಲ ಮಾಡಿಕೊಂಡ ಶಿವಮ್ಮ, ಕೊನೆಗೆ ಶಾಲಾ ಶಿಕ್ಷಕರ ಬಳಿಯೂ ಸಾಲ ಮಾಡಿ ಸಮಸ್ಯೆ ಎದುರಿಸುತ್ತಾಳೆ. ಬಳಿಕ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರ ಮಾಡಲು ಹೋಗಿ ಆಕೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎನ್ನುವ ಕಥೆಯನ್ನು ಎಳೆ ಎಳೆಯಾಗಿ ಹೇಳಲಾಗಿದೆ.

ಹಳ್ಳಿಯಲ್ಲಿ ನೆಟ್ವರ್ಕ್ ಮಾರ್ಕೆಟಿಂಗ್ ಹೆಸರಿನಲ್ಲಿ ಶಿವಮ್ಮ ಒಂದು ಉತ್ಪನ್ನವನ್ನು ಮಾರಿ ಹಣ ಮಾಡಲು ಮುಂದಾಗುತ್ತಾಳೆ. ಸರ್ವ ರೋಗಕ್ಕೂ ಇದು ರಾಮಬಾಣ ಎನ್ನುವಂತೆ ಒಂದು ಪೌಡರ್ ಊರಿಗೆಲ್ಲಾ ಹಂಚುತ್ತಾಳೆ. ಸಾಲ ಮಾಡಿ ಸಮಸ್ಯೆ ಸಿಲುಕುವ ಶಿವಮ್ಮಗೆ ಮಗಳು ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿ ಮತ್ತೊಂದು ತಲೆನೋವು ಶುರುವಾಗುತ್ತದೆ. ಹೀಗೆ ಹಳ್ಳಿಜನರ ಜೀವನಕ್ಕೆ ಹತ್ತಿರ ಎನ್ನಿಸುವ ಕಥೆ ಚಿತ್ರದಲ್ಲಿದೆ.
ಶರಣಮ್ಮ ಚಟ್ಟಿ ಎಂಬುವವರು ಟೈಟಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಚೆನ್ನಮ್ಮ ಅಬ್ಬೆಗೆರೆ, ಶಿವು ಅಬ್ಬೆಗೆರೆ, ಶ್ರುತಿ ಕೊಂಡೇನಹಳ್ಳಿ, ಚೆನ್ನಪ್ಪ ಹನ್ಸಿ, ಶಿವಾನಂದ್ ಸಾದರ್ ಚಿತ್ರದ ತಾರಾಗಣದಲ್ಲಿದ್ದಾರೆ. ವಿಕಾಸ್ ಯುಆರ್ಎಸ್ ಹಾಗೂ ಸೌಮ್ಯಾನಂದ ಸಾಹಿ ಛಾಯಾಗ್ರಹಣ 'ಶಿವಮ್ಮ' ಚಿತ್ರಕ್ಕಿದೆ.
ಫಜರ್ ಚಲನಚಿತ್ರೋತ್ಸವದಲ್ಲಿ ಕೂಡ 'ಶಿವಮ್ಮ' ಸಿನಿಮಾ ಪ್ರಶಸ್ತಿ ಗೆದ್ದಿತ್ತು. ಇದರ ಜೊತೆಗೆ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳು ಚಿತ್ರಕ್ಕೆ ಲಭಿಸಿದೆ. 2 ವರ್ಷಗಳ ಬಳಿಕ ಸಿನಿಮಾ ಇದೀಗ ತೆರೆಗಪ್ಪಳಿಸಲು ಸಜ್ಜಾಗಿದೆ. ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಇಡೀ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಊರಿನ ಗ್ರಾಮಸ್ಥರೇ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದಾರೆ.
ಸದ್ಯ ರಿಷಬ್ ಶೆಟ್ಟಿ 'ಕಾಂತಾರ' ಚಾಪ್ಟರ್-1 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಟ್ರೈಲರ್ ರಿಲೀಸ್ ಮಾಡಲಾಗಿದೆ. ಐಪಿಎಲ್, ಲೋಕಸಭೆ ಚುನಾವಣೆ ಬಳಿಕ ಸಾಲು ಸಾಲು ಕನ್ನಡ ಸಿನಿಮಾಳು ಬಿಡುಗಡೆಗೆ ಸಿದ್ಧವಾಗಿವೆ. ಜೂನ್ 14ಕ್ಕೆ 'ಕೋಟಿ', 'ಶೆಫ್ ಚಿದಂಬರ' ಹಾಗೂ 'ಲವ್‌ಲಿ' ಸಿನಿಮಾಗಳ ಜೊತೆಗೆ 'ಶಿವಮ್ಮ' ಕಥೆ ತೆರೆಮೇಲೆ ಅನಾವರಣವಾಗಲಿದೆ.


Click it and Unblock the Notifications











