"ನಾನು ಮಹಾನ್ ಭಕ್ತ, ಆದ್ರೆ ಅದನ್ನು ಯಾವ್ಯಾವುದಕ್ಕೋ ಲಿಂಕ್ ಮಾಡಿಬಿಡ್ತಾರೆ"- ರಿಷಬ್ ಶೆಟ್ಟಿ
'ಕಾಂತಾರ- 1' ಸಿನಿಮಾ ಪ್ರಚಾರ ಜೋರಾಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಊರೂರು ಸುತ್ತಾಡಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಭರ್ಜರಿ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ. ಜ್ಯೂ. ಎನ್‌ಟಿಆರ್ 'ಕಾಂತಾರ- 1' ಚಿತ್ರತಂಡಕ್ಕೆ ಸಾಥ್ ಕೊಡುತ್ತಿದ್ದಾರೆ.
ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರಿಷಬ್ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಈ ವೇಳೆ ದೇವರ ಮೇಲಿನ ನಂಬಿಕೆ ಬಗ್ಗೆಯೂ ಪ್ರಶ್ನೆ ಎದುರಾಯಿತು. ನಾನು ಬಹಳ ನಂಬಿಕೆಯಿಂದಲೇ ಸಿನಿಮಾ ಮಾಡಿದ್ದೀನಿ, ನಾನು ಮಹಾನ್ ಭಕ್ತ, ಆದರೆ ಅದನ್ನು ಬೇರೆ ಬೇರೆ ರೀತಿ ಕೆಲವರು ಅರ್ಥೈಸಿಬಿಡುತ್ತಾರೆ ಎಂದಿದ್ದಾರೆ.

"ಕಾಂತಾರ ಚಿತ್ರಕ್ಕೂ ಈಗ ಬರುತ್ತಿರುವ ಚಾಪ್ಟರ್-1 ಎಲ್ಲರೂ ಕಥೆಗಳ ಥೀಮ್ ಒಂದೇ. ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸಂಘರ್ಷ. ನಮ್ಮ ಬೇರುಗಳಲ್ಲೇ ಆಚಾರ, ವಿಚಾರ, ಸಂಪ್ರದಾಯ, ದೈವ ಎಲ್ಲವೂ ಇದೆ. ನದಿ ಬದಿಯಲ್ಲಿ ಹಾಗೂ ಕಾಡಿನಲ್ಲಿ ನಾಗರೀಕತೆ ಬೆಳೆಯಿತು. ನಾವು ಈಗ ನಗರಗಳಲ್ಲಿ ಇದ್ದೀವಿ. ಆರಂಭದಲ್ಲಿ ನಾವೆಲ್ಲರೂ ಕೂಡ ಬುಡಕಟ್ಟಿನ ಜನರೇ ಆಗಿದ್ದೆವು ಅಲ್ಲವೇ? ಈ ಚಿತ್ರದಲ್ಲಿ ಕೂಡ ಅದೇ ರೀತಿಯ ವಿಷಯಗಳಿವೆ. ಅಮೆರಿಕಾದಲ್ಲಿ ಕೂಡ ಕೂಡ ಇದೇ ರೀತಿಯ ಸಮಸ್ಯೆ, ಸಂಘರ್ಷ, ಬುಡಕಟ್ಟಿನ ಜನರ ಆಚರಣೆಯಿದೆ ಇದೆ ಎಂದು ಒಬ್ರು ಹೇಳಿದ್ರು. ಎಲ್ಲಾ ಕಡೆ ಇರುವ ಅದೇ ಎಮೋಷನ್ ಈ ಚಿತ್ರದಲ್ಲಿದೆ" ಎಂದಿದ್ದಾರೆ.
ನಮ್ಮನ್ನು ಬಿಟ್ಟು ಯಾವುದೋ ಶಕ್ತಿ ಇದೆ, ದೈವ ಇದೆ ಎಂದು ನಾವೆಲ್ಲಾ ನಂಬುತ್ತೇವೆ. ಅದನ್ನು ನಂಬದವರು ಕೂಡ ಯಾವುದೋ ಒಂದು ನಂಬಿಕೆ ಇರುತ್ತದೆ. ಯಾರೋ ನಮ್ಮನ್ನು ಕಾಯುತ್ತಾರೆ ಎಂದುಕೊಳ್ಳುತ್ತಾರೆ. "ಸೆಕ್ಯುಲರ್‌ಗಳಿಗೂ ಈ ಚಿತ್ರದಲ್ಲಿ ಒಂದು ವಿಷಯ ಇದೆ. ಇದು ಬಿಟ್ಟು ಅವ್ರು ಕೂಡ ಯಾವುದೋ ವಿಷಯವನ್ನು ನಂಬುತ್ತಾರೆ. ನನಗೆ ನಂಬಿಕೆಯಿದೆ. ನಾನು ಆರಾಧಿಸುತ್ತೇನೆ. ನಾನು ನಂಬಬೇಕು, ಆಗ ಮಾತ್ರ ಮಾಡುವುದಕ್ಕೆ ಸಾಧ್ಯ. ನನಗೆ ನಂಬಿಕೆ ಇಲ್ಲದೇ ಹೇಳುವುದು ಸುಳ್ಳಾಗುತ್ತದೆ" ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.

ಚಿತ್ರೀಕರಣದ ವೇಳೆ ಮಾಂಸಾಹಾರ ಸೇವಿಸಲಿಲ್ಲ, ಚಪ್ಪಲಿ ಧರಿಸಲಿಲ್ಲವಂತೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ರಿಷಬ್ ಶೆಟ್ಟಿ "ಎಲ್ಲಾ ಸಮಯದಲ್ಲಿ ಅಲ್ಲ. ಕೋಲದ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಮಾತ್ರ. ಇದನ್ನು ಬೇರೆ ಯಾವುದಕ್ಕೋ ಕನೆಕ್ಟ್ ಮಾಡಿಬಿಡುತ್ತಾರೆ, ಆ ರೀತಿ ಅಲ್ಲ. ನಾನು ಬಹಳ ನಂಬುವ ದೈವ. ಹಾಗಾಗಿ ಆ ದೃಶ್ಯಗಳನ್ನು ಸೆರೆಹಿಡಿಯುವಾಗ ಬಹಳ ಮುತುವರ್ಜಿ ವಹಿಸಿದ್ದೆವು" ಎಂದಿದ್ದಾರೆ.
ನೀವು ಮಹಾನ್ ಭಕ್ತರಂತೆ ಎನ್ನುವ ಪ್ರಶ್ನೆಗೆ "ಹೌದು. ನಾನು ಮಹಾನ್ ಭಕ್ತ. ಆದರೆ ಅದನ್ನು ಬೇರೆ ತೀವ್ರತೆಗೆ ಕನೆಕ್ಟ್ ಮಾಡಿಬಿಡುತ್ತಾರೆ. ನಾನು ಒಬ್ಬ ಭಕ್ತ. ನಾನು ದೇವರನ್ನು ನಂಬುತ್ತೇನೆ. ಅದರಲ್ಲಿ ತಪ್ಪೇನಿದೆ. ನಾನು ನಿಮ್ಮ ನಂಬಿಕೆಯನ್ನು ಗೌರವಿಸುತ್ತೇನೆ. ನೀವು ನನ್ನ ನಂಬಿಕೆಯನ್ನು ಗೌರವಿಸಿ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.


Click it and Unblock the Notifications











