ತೆರೆಗೆ ಬರಲಿದೆ ನಿಜ ಡಾನ್ ಕತೆ : ನಾಯಕ ಪಾತ್ರದಲ್ಲಿ ರಿಷಬ್ ಶೆಟ್ಟಿ
ಅಂಡರ್ವಲ್ಡ್ ಡಾನ್‌ಗಳ ಮೂಟೆಗಟ್ಟಲೆ ಕತೆಗಳು ಸಿನಿಮಾಗಳಾಗಿವೆ. ಆದರೂ ಡಾನ್ ಕತೆಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ.
Recommended Video
ನಿಜ ಜೀವನದಲ್ಲಿ ಡಾನ್ ಆಗಿ, ರೌಡಿಗಳಾಗಿ ಮೆರೆದವರ ಕತೆಗಳು ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಬಂದಿವೆ. ಇದಕ್ಕೆ ಹೊಸ ಸೇರ್ಪಡೆ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಚಿತ್ರ.
ಮಂಗಳೂರು, ಮುಂಬೈನಲ್ಲಿ ಹೆಸರು ಮಾಡಿದ್ದ ಡಾನ್ ಅಮರ್ ಆಳ್ವಾ ನಿಜ ಜೀವನ ಆಧರಿಸಿ ಸಿನಿಮಾ ನಿರ್ಮಿಸಲು ಯೋಜಿಸಿದ್ದು, ರಿಷಬ್ ಶೆಟ್ಟಿ ಅಮರ್ ಆಳ್ವಾ ಆಗಿ ಕಾಣಿಸಿಕೊಳ್ಳಲಿದ್ದಾರೆ.

90 ರ ದಶಕದಲ್ಲಿ ಹೆಸರಾಗಿದ್ದವರು
ಅಮರ್ ಆಳ್ವಾ 90 ರ ದಶಕದಲ್ಲಿ ಮಂಗಳೂರು, ಬೆಂಗಳೂರು, ಮುಂಬೈನಲ್ಲಿ ತಮ್ಮ ಪ್ರಭಾವ ಹೊಂದಿದ್ದ ಡಾನ್ ಆಗಿದ್ದರು. ಮುತ್ತಪ್ಪ ರೈ ಜೊತೆಗೂ ಆಳ್ವಾ ಗೆ ಸಂಬಂಧವಿತ್ತು. ಜಯರಾಜ್, ಆಯಿಲ್ ಕುಮಾರ್ ಕಾಲದಲ್ಲಿ ಇವರ ಹೆಸರೂ ಸಾಕಷ್ಟು ಚಾಲ್ತಿಯಲ್ಲಿತ್ತು.

1992 ರ ಜುಲೈ 14 ರಂದು ಕೊಲೆಯಾಗಿದ್ದರು
1992 ರ ಜುಲೈ 14 ರಂದು ಮಂಗಳೂರಿನ ಮಿಲಾಗ್ರೆಸ್ ಚರ್ಚ್ ಬಳಿ ಅಮರ್ ಆಳ್ವಾ ಮೇಲೆ ಗುಂಡಿನ ದಾಳಿ ನಡೆಸಿ ಕೊಲ್ಲಲಾಯಿತು. ಈ ಪ್ರಕರಣದಲ್ಲಿ ಅಶೋಕ್ ಶೆಟ್ಟಿ, ಉದಯ್ ಶೆಟ್ಟಿ ಹಾಗೂ ಇನ್ನೂ ಏಳು ಜನರ ಮೇಲೆ ಪ್ರಕರಣ ದಾಖಲಾಗಿತ್ತು. 2017 ರಲ್ಲಿ ಅಮರ್ ಆಳ್ವಾ ಕೊಲೆ ಕೇಸಿನ ತೀರ್ಪು ನೀಡಲಾಗಿ, ಎಲ್ಲಾ ಆರೋಪಿಗಳನ್ನೂ ಆರೋಪ ಮುಕ್ತ ಮಾಡಲಾಯಿತು.

ನಿತೇಶ್ ಗೆ ಮೊದಲ ಸಿನಿಮಾ
ಇದೀಗ ಅಮರ್ ಆಳ್ವಾ ಜೀವನವನ್ನೇ ಸಿನಿಮಾ ಮಾಡಲಾಗುತ್ತಿದ್ದು, ರಿಷಬ್ ಶೆಟ್ಟಿ ಬಳಿ ಅಸಿಸ್ಟೆಂಟ್ ಆಗಿದ್ದ ನಿತೇಶ್ ಅವರೇ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಕತೆಯನ್ನು ರಿಷಬ್ ಶೆಟ್ಟಿ ಹಾಗೂ ನಿತೇಶ್ ಒಟ್ಟಾಗಿ ರಚಿಸುತ್ತಿದ್ದಾರೆ.

ಬಹು ಬ್ಯುಸಿಯಾಗಿರುವ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಪ್ರಸ್ತುತ ಬಹು ಬ್ಯುಸಿಯಾಗಿದ್ದಾರೆ. ಅವರ ಗರುಡ ಗಮನ ವೃಷಭ ವಾಹನ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ರುದ್ರಪ್ರಯಾಗ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಹರಿ ಕತೆ ಅಲ್ಲ ಗಿರಿ ಕತೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.


Click it and Unblock the Notifications











