ಕನ್ನಡದ 'ದೊಡ್ಡ' ಕಲಾವಿದರಿಗೆ ಮಾದರಿಯಾದ ರಿಷಬ್ ಶೆಟ್ಟಿ; 'ಗಾರು' ಸಂಸ್ಕೃತಿಗೆ ಬ್ರೇಕ್ ಹಾಕಿದ ಡಿವೈನ್ ಸ್ಟಾರ್
ಕನ್ನಡ ಚಿತ್ರರಂಗ ಯಾವುದೇ ವಿಚಾರದಲ್ಲಿ ಕಮ್ಮಿಯಿಲ್ಲ. ಕನ್ನಡ ಕಲಾವಿದರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದ್ದಾರೆ. ಆದರೆ ಕನ್ನಡದ ಕೆಲ ನಟರಿಗೆ ಪರಭಾಷಿಕರನ್ನು ಮೆಚ್ಚಿಸುವ ಖಯಾಲಿ. ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳನ್ನು ಪ್ರಚಾರ ಮಾಡುತ್ತಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಬಂದಮೇಲೆ ಕೊಡುಕೊಳ್ಳುವಿಕೆ ಹೆಚ್ಚಾಗಿದೆ. ಹಾಗಾಗಿ ಪರವಾಗಿಲ್ಲ. ಆದರೆ ಅತಿಯಾದ ಓಲೈಸುವ ಅವಶ್ಯಕತೆ ಇಲ್ಲ.
ಉತ್ತರ ಭಾರತದವರನ್ನು 'ಜೀ' ಎಂದು ಗೌರವದಿಂದ ಸಂಭೋದಿಸುವುದು, ತೆಲುಗು ಕಲಾವಿದರಿಗೆ 'ಗಾರು' ಎಂದು ಮೆಚ್ಚಿಸುವ ಕೆಲಸ ಮಾಡುತ್ತಾರೆ. ಅಲ್ಲಿನ ಕಲಾವಿದರ ಸಿನಿಮಾ ಪೋಸ್ಟರ್, ಟೀಸರ್, ಟ್ರೈಲರ್ ಬಂದಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದು, ಮೆಚ್ಚುಗೆಯ ಮಾತನಾಡುವುದು ಮಾಡುತ್ತಿರುತ್ತಾರೆ. ಎಲ್ಲವೂ ಸರಿ ಆದರೆ 'ಜೀ' ಹಾಗೂ 'ಗಾರು' ಎನ್ನುವ ಅತಿಯಾದ ವಿನಯವಂತಿಕೆ ಬೇಡ ಎಂದು ಕನ್ನಡಿಗರು ಪದೇ ಪದೆ ಹೇಳುತ್ತಿರುತ್ತಾರೆ. ಆದರೆ ಅದನ್ನು ಕೇಳುವ ವ್ಯವಧಾನ ಯಾರಿಗೂ ಇಲ್ಲ. ಇಂಗ್ಲೀಷ್ ಭಾಷೆಯಲ್ಲಿ ಪೋಸ್ಟ್ ಮಾಡುವಾಗ 'ಸರ್' ಎಂದು ಬಳಸಿದರೆ ಸಾಕು. ತಮಗಿಂತ ವಯಸ್ಸಿನಲ್ಲಿ ಹಿರಿಯರು, ದೊಡ್ಡ ಸಾಧಕರಾಗಿದ್ದರೆ 'ಸರ್' ಎನ್ನುವುದು ಬರೆಯುವುದು ಉತ್ತಮ. ಆದರೆ ಅವರದ್ದೇ ಭಾಷೆಯಲ್ಲಿ ಗೌರವ ಸೂಚಿಸಿ ಮೆಚ್ಚಿಸುವ ಅವಶ್ಯಕತೆ ಇಲ್ಲ.

ಸ್ಯಾಂಡಲ್‌ವುಡ್ ಮಟ್ಟಿಗೆ ರಿಷಬ್ ಶೆಟ್ಟಿ ಮೊದಲಿನಿಂದಲೂ ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ಯಾರಿಗೂ 'ಗಾರು' ಎಂದು ರಿಷಬ್ ಗೌರವ ಸೂಚಿಸಿ ಟ್ವೀಟ್, ಪೋಸ್ಟ್ ಮಾಡಿಲ್ಲ. ಸದ್ಯ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಲಿಂಕ್ ಶೇರ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಟ್ರೈಲರ್ ಅದ್ಭುತವಾಗಿದೆ. ಪ್ರತಿಫ್ರೇಮ್‌ನಲ್ಲಿ ಮೆಗಾಪವರ್ ಸ್ಟಾರ್ ರಾಮ್‌ಚರಣ್ ಸಖತ್ತಾಗಿ ಕಾಣಿಸುತ್ತಿದ್ದಾರೆ. ಶಿವಣ್ಣನ ಸ್ಕ್ರೀನ್ ಪ್ರಸೆನ್ಸ್ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದೆ. ಜಾನ್ವಿ ಕಪೂರ್ ಚಿತ್ರಕ್ಕೆ ಕಳೆ ತಂದಿದ್ದಾರೆ, ಬುಚ್ಚಿಬಾಬು ಕೆಲಸ ಅದ್ಭುತವಾಗಿದೆ. ಇಡೀ ತಂಡಕ್ಕೆ ಶುಭಾಶಯ ಎಂದಿದ್ದಾರೆ.
ರಾಮ್‌ಚರಣ್ ಅವರಿಗೆ ಸರ್ ಎಂದು ಗೌರವ ಕೊಟ್ಟಿಲ್ಲ ಎನ್ನುವುದು ಕೆಲ ಅಭಿಮಾನಿಗಳ ಪ್ರಶ್ನೆ. ಅದು ರಿಷಬ್ ಹಾಗೂ ರಾಮ್‌ಚರಣ್ ನಡುವಿನ ಅನುಬಂಧಕ್ಕೆ ಬಿಟ್ಟ ವಿಚಾರ. ಆದರೆ 'ಗಾರು' ಎಂಬ ಪದ ಬಳಸದೇ ಡಿವೈನ್ ಸ್ಟಾರ್ ಗಮನ ಸೆಳೆದಿದ್ದಾರೆ. ಈ ಹಿಂದಿನ ತಮ್ಮ ಪೋಸ್ಟ್‌ಗಳಲ್ಲಿ ಕೂಡ ರಿಷಬ್ ಇದನ್ನು ಅನುಸರಿಸಿದ್ದಾರೆ. ತಮಗಿಂತ ಹಿರಿಯರಿಗೆ 'ಸರ್' ಎಂದು ಗೌರವ ಸೂಚಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಮ್ಮತನ ಬಿಟ್ಟುಕೊಟ್ಟಿಲ್ಲ. ಇದನ್ನು ಉಳಿದ ಕಲಾವಿದರು ಪಾಲಿಸಬೇಕಿದೆ.
ಕನ್ನಡ ಸಿನಿಮಾಗಳ ಬಗ್ಗೆ ಪೋಸ್ಟ್ ಮಾಡುವಾಗ ಬೇರೆ ಭಾಷೆಯ ಕಲಾವಿದರು ಇದೇ ರೀತಿ ಮೆಚ್ಚಿಸುವ ಪ್ರಯತ್ನ ಮಾಡುವುದಿಲ್ಲ. ನಮ್ಮವರು ಮಾತ್ರ ಯಾಕೆ ಹೀಗೆ? ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಗಾಗ್ಗೆ ಕೆಲವರು ಕಾಮೆಂಟ್ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಪ್ರಯೋಜನವಾಗುವುದಿಲ್ಲ.
'ಕಾಂತಾರ- 1' ಬಳಿಕ ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಜೊತೆ ಸೇರಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವುದಾಗಿ ಹೇಳಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ತಮ್ಮದೇ ಬ್ಯಾನರ್ ಅಡಿಯಲ್ಲಿ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ ರಿಷಬ್ ಶೆಟ್ಟಿ. ಇನ್ನು ನಿರ್ದೇಶಕರಾಗಿ ಒಂದು ಪೌರಾಣಿಕ ಸಿನಿಮಾ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ಕೂಡ ಹೇಳಿದ್ದಾರೆ. ಶೀಘ್ರದಲ್ಲೇ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.


Click it and Unblock the Notifications