"ನನ್ನ ಹೇಳಿಕೆ ಕೊಂಚ ಆಚೀಚೆ ಆಗ್ಬಿಟ್ಟಿದೆ"; ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಅಬುಧಾಬಿಯಲ್ಲಿ ಐಫಾ ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಯಾಗಿ ನೆರವೇರಿದೆ. ರಿಷಬ್ ಶೆಟ್ಟಿ, ರಾಕ್‌ಲೈನ್ ವೆಂಕಟೇಶ್, ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಸೇರಿದಂತೆ ಸಾಕಷ್ಟು ಜನ ಸ್ಯಾಂಡಲ್‌ವುಡ್ ತಾರೆಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದೇ ವೇಳೆ ಬಾಲಿವುಡ್ ಸಿನಿಮಾಗಳ ಬಗ್ಗೆ ರಿಷಬ್ ಶೆಟ್ಟಿ ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕೆಲ ದಿನಗಳ ಹಿಂದೆ ಬಾಲಿವುಡ್ ಸಿನಿಮಾಗಳ ಬಗ್ಗೆ ರಿಷಬ್ ಶೆಟ್ಟಿ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಸಾಕಷ್ಟು ಜನ ಅವರ ಹೇಳಿಕೆಯನ್ನು ಬೆಂಬಲಿಸಿದ್ದರು. ಆದರೆ ಬಾಲಿವುಡ್ ಅಭಿಮಾನಿಗಳು ಇದನ್ನು ಒಪ್ಪಲಿಲ್ಲ. ಐಫಾ ಅವಾರ್ಡ್ಸ್ ಕಾರ್ಯಕ್ರಮದ ಗ್ರೀನ್ ಕಾರ್ಪೆಟ್‌ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರಿಗೆ ಪ್ರಶ್ನೆ ಎದುರಾಗಿತ್ತು.

ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ರಿಷಬ್ ತಮ್ಮ ಹೇಳಿಕೆಯನ್ನು ಬೇರೆಯದ್ದೇ ಅರ್ಥದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. "ನಾನು ಹೇಳಿದ್ದನ್ನು ಸ್ವಲ್ಪ ತಿರಚಲಾಗಿದೆ. ನಾನು ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟನೆ ನೀಡುತ್ತೇನೆ. ಮುಂದೆ ಆ ಬಗ್ಗೆ ವಿವರವಾಗಿ ಮಾತನಾಡೋಣ" ಎಂದು ರಿಷಬ್ ಶೆಟ್ಟಿ ಹೇಳಿರುವುದು ವರದಿಯಾಗಿದೆ.
ಮೆಟ್ರೊ ಸಾಗ ಯೂಟ್ಯೂಬ್ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಮಾತನಾಡಿದ್ದರು. "ಇಂಡಿಯನ್ ಸಿನಿಮಾಗಳಲ್ಲಿ ಮುಖ್ಯವಾಗಿ ಬಾಲಿವುಡ್ ಸಿನಿಮಾಗಳಲ್ಲಿ ಇಂಡಿಯಾ ಬಗ್ಗೆ ತುಂಬಾ ಕೆಟ್ಟದಾಗಿ ಕೇವಲವಾಗಿ ತೋರಿಸಿ ಅದನ್ನು ಆರ್ಟ್ ಸಿನಿಮಾ ಎಂದು ಹೊರದೇಶದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದಿರುವುದನ್ನು ನೋಡಿದ್ದೇನೆ. ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ. ನನ್ನ ಭಾಷೆ ನನ್ನ ಹೆಮ್ಮೆ. ಹಾಗಾಗಿ ನಾನ್ಯಾಕೆ ಅದನ್ನು ಪಾಸಿಟಿವ್ ಆಗಿ ತೋರಿಸಬಾರದು" ಎಂದು ರಿಷಬ್ ಹೇಳಿದ್ದರು.
ರಿಷಬ್ ಶೆಟ್ಟಿ ಹೇಳಿರುವುದರಲ್ಲಿ ತಪ್ಪೇನು ಇಲ್ಲ ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದರು. 'ಮೇಯರ್ ಮುತ್ತಣ್ಣ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಭಾರತ ದೇಶದ ಬಗ್ಗೆ ಇದೇ ರೀತಿ ಮಾತನಾಡಿರುವ ವೀಡಿಯೋ ಕೂಡ ವೈರಲ್ ಆಗಿತ್ತು. ಇಲ್ಲಿ ರಿಷಬ್ ಬಾಲಿವುಡ್ ಸಿನಿಮಾ ಮೇಕರ್ಸ್ ಬಗ್ಗೆ ಮಾತನಾಡಿದ್ದರೆ ಆ ಚಿತ್ರದಲ್ಲಿ ಶ್ರೀಮಂತರ ಚಿತ್ರಕಲೆಯ ಬಗ್ಗೆ ಮುತ್ತಣ್ಣನ ಪಾತ್ರ ಮಾತನಾಡಿತ್ತು.
ಐಫಾ ಅವಾರ್ಡ್ಸ್ ವೇದಿಕೆಯಲ್ಲಿ ರಿಷಬ್ ಶೆಟ್ಟಿಗೆ 'ಔಟ್ ಸ್ಟ್ಯಾಂಡಿಂಗ್ ಎಕ್ಸಲೆನ್ಸ್ ಇನ್ ಕನ್ನಡ ಸಿನಿಮಾ' ಪ್ರಶಸ್ತಿ ಸಿಕ್ಕಿದೆ. 'ಸಪ್ತಸಾಗರದಾಚೆ ಎಲ್ಲೋ'-A ಚಿತ್ರದ ನಟನೆಗಾಗಿ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಚಿತ್ರದ ನಟನೆಗಾಗಿ ರುಕ್ಮಿಣಿ ವಸಂತ್ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇನ್ನುಳಿದಂತೆ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಖಳನಟ, ಪೋಷಕ ನಟಿ, ಸಂಗೀತ ನಿರ್ದೇಶನ ವಿಭಾಗಗಳಲ್ಲಿ 'ಕಾಟೇರ' ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ಬೆಸ್ಟ್ ಡೆಬ್ಯೂ ಅವಾರ್ಡ್ ಆರಾಧನಾಗೆ ಪಡೆದುಕೊಂಡಿದ್ದಾರೆ. ಹೀಗೆ 5 ವಿಭಾಗಳಲ್ಲಿ 'ಕಾಟೇರ' ಚಿತ್ರಕ್ಕೆ ಐಫಾ ಗೌರವ ಸಿಕ್ಕಿದೆ.
ಸದ್ಯ 'ಕಾಂತಾರ' ಚಾಪ್ಟರ್-1 ಕೆಲಸಗಳಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ತಮ್ಮ ಊರಿನಲ್ಲಿ ದೊಡ್ಡ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಬ್ಯಾನರ್‌ನಲ್ಲಿ 'ಲಾಫಿಂಗ್ ಬುದ್ಧ' ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡಿದ್ದರು. 'ಕಾಂತಾರ' ಪ್ರೀಕ್ವೆಲ್‌ಗಾಗಿ ಕಳರಿ ಪಯಟ್ಟು ಸಮರ ಕಲೆ ಕಲಿತು ನಟಿಸುತ್ತಿದ್ದಾರೆ. ಮುಂದಿನ ವರ್ಷ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











