IFFI: ಶಂಕರ್‌ನಾಗ್ ಬಳಿಕ 54ನೇ ಗೋವಾ ಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ಪ್ರೀಕ್ವೆಲ್ ಟೀಸರ್ ರಿಲೀಸ್ ಮಾಡಿ ಮುಹೂರ್ತ ನೆರವೇರಿಸಿದೆ ಚಿತ್ರತಂಡ. ಸದ್ಯ ಜಬರ್ದಸ್ತ್ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ 'ಕಾಂತಾರ' ಪ್ರತಿಷ್ಠಿತ IFFI ಪ್ರಶಸ್ತಿ ಸಿಕ್ಕಿದೆ.
ಕಳೆದ ವರ್ಷ ರಿಲೀಸ್ ಆಗಿದ್ದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕನ್ನಡದಲ್ಲಿ ಸಕ್ಸಸ್ ಕಂಡ ಸಿನಿಮಾ ಬಳಿಕ ಬೇರೆ ಭಾಷೆಗಳಿಗೂ ಡಬ್ ಆಗಿ ದಾಖಲೆ ಬರೆದಿತ್ತು. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಕೇವಲ 16 ಕೋಟಿ ರೂ.ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಹಲವು ಪಟ್ಟು ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು.

ಸದ್ಯ ಗೋವಾದಲ್ಲಿ 54ನೇ ಅಂತರಾಷ್ಟ್ರೀಯ ಚಿತ್ರೋತ್ಸವ ನಡೀತಿದೆ. ರಿಷಬ್ ಶೆಟ್ಟಿ ಕೂಡ ಈ ಸಿನಿಮಾ ಹಬ್ಬದಲ್ಲಿ ಭಾಗಿ ಆಗಿದ್ದಾರೆ. 'ಕಾಂತಾರ' ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಸಿಲ್ವರ್ ಪೀಕಾಕ್ ಸ್ಪೆಷಲ್ ಜ್ಯೂರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೇದಿಕೆ ಏರಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪಂಚೆ ಹಾಗೂ ಕಪ್ಪು ಅಂಗಿ ತೊಟ್ಟು ರಿಷಬ್ ಕಾಣಿಸಿಕೊಂಡಿದ್ದಾರೆ.
ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿ ಆಗೆ ಪ್ರಶಸ್ತಿ ವಿತರಿಸಿದ್ದಾರೆ. 'ಕಾಂತಾರ' ಚಿತ್ರದಲ್ಲಿನ ತಮ್ಮ ನಿರ್ದೇಶನ ಹಾಗೂ ನಟನೆಗಾಗಿ ರಿಷಬ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಪ್ರತಿಷ್ಠಿತ ಗೋಲ್ಡನ್ ಪೀಕಾಕ್‌ಗಾಗಿ ಪ್ರಶಸ್ತಿಗಾಗಿ 12 ಅಂತರರಾಷ್ಟ್ರೀಯ ಮತ್ತು 3 ಭಾರತೀಯ ಚಲನಚಿತ್ರಗಳನ್ನು ಒಳಗೊಂಡ ಒಟ್ಟು 15 ಚಿತ್ರಗಳು ಸ್ಪರ್ಧಿಸಿದ್ದವು. ಪ್ರಶಸ್ತಿ ಸಿಕ್ಕ ಬಗ್ಗೆ ಹೊಂಬಾಳೆ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 'ಕಾಂತಾರ' ಸಿನಿಮಾ ಹೊಸ ಇತಿಹಾಸ ನಿರ್ಮಿಸಿದೆ ಎಂದಿದೆ. ರಿಷಬ್ ಶೆಟ್ಟಿ ಕೂಡ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.
9 ದಿನಗಳ ಕಾಲ 54ನೇ ಅಂತರಾಷ್ಟ್ರೀಯ ಚಿತ್ರೋತ್ಸವ ನಡೀತು. 270ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಂಡಿವೆ. ಜರ್ಮನ್ ಚಿತ್ರ 'ಎಂಡ್ಲೆಸ್ ಬಾರ್ಡರ್ಸ್' ಗೋಲ್ಡನ್ ಪೀಕಾಕ್ ಪ್ರಶಸ್ತಿ ಪಡೆದರೆ ಮೈಕೆಲ್ ಡಗ್ಲಾಸ್ ಸತ್ಯಜಿತ್ ರೇ ಪ್ರಶಸ್ತಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇನ್ನು ದೀಪಕ್ ಕುಮಾರ್ ಮಿಶ್ರಾ ನಿರ್ದೇಶಿಸಿದ 'ಪಂಚಾಯತ್' ಸೀಸನ್ 2 ಅತ್ಯುತ್ತಮ OTT ಸೀರಿಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಚಿತ್ರೋತ್ಸವದಲ್ಲಿ ಪರಿಚಯಿಸಲಾಗಿದೆ. ಅಂದಹಾಗೆ 1978ರಲ್ಲಿ 'ಒಂದಾನೊಂದು ಕಾಲದಲ್ಲಿ' ಚಿತ್ರದ ನಟನೆಗಾಗಿ ನಟ, ನಿರ್ದೇಶಕ ಶಂಕರ್‌ನಾಗ್ ಅತ್ಯುತ್ತಮ ನಟ ಸಿಲ್ವರ್ ಪೀಕಾಕ್ ಪ್ರಶಸ್ತಿ ಪಡೆದಿದ್ದರು. ಅದು 7ನೇ ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವ ಆಗಿತ್ತು. ಬಳಿಕ ಈಗ ರಿಷಬ್ ಶೆಟ್ಟಿ ಆ ಸಾಧನೆ ಮಾಡಿದ್ದಾರೆ. ಈ ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿದೆ.
'ಕಾಂತಾರ' ಸಿನಿಮಾ ಸಕ್ಸಸ್‌ನಿಂದ ಪ್ರೇರಣೆಗೊಂಡಿರುವ ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ಪ್ರೀಕ್ವೆಲ್ ಪ್ಲ್ಯಾನ್ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಮಾಡಿ ಪೂಜೆ ನೆರವೇರಿಸಿದ್ದಾರೆ. ಜನವರಿಯಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿರುವ ರಿಷಭ್ ಶೆಟ್ಟಿ, "ಕಳೆದ ವರ್ಷ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೆವು. ಈ ಬಾರಿ ನಮ್ಮ ಚಿತ್ರ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಸ್ಪರ್ಧಿಸಿ, ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಗೆದ್ದಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ" ಎಂದು ಸಂತಸ ಹಂಚಿಕೊಂಡಿದ್ದಾರೆ.


Click it and Unblock the Notifications










