ಜ್ಯೂ. ಎನ್‌ಟಿಆರ್ ಎದುರು ದರ್ಶನ್ ಬಗ್ಗೆ ಪ್ರಶ್ನೆ; ರಿಷಬ್ ಶೆಟ್ಟಿ ಮಾಡಿದ್ದೇನು?
ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ತೆಲುಗು ನಟ ಜ್ಯೂ. ಎನ್‌ಟಿಆರ್ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ತಾರಕ್ ತಮ್ಮ ತಾಯಿ ಹಾಗೂ ಪತ್ನಿ ಸಮೇತರಾಗಿ ಕುಂದಾಪುರಕ್ಕೆ ಬಂದಿದ್ದರು. ಇನ್ನು ಪ್ರಮೋದ್ ಶೆಟ್ಟಿ ಜೊತೆಗೆ ಪ್ರಶಾಂತ್ ನೀಲ್ ದಂಪತಿ ಕೂಡ ಸಾಥ್ ಕೊಟ್ಟಿದ್ದಾರೆ.
ಜ್ಯೂ. ಎನ್‌ಟಿಆರ್ ತಾಯಿ ಕುಂದಾಪುರ ಮೂಲದವರು. ಹಾಗಾಗಿ ತಾರಕ್ ಕೂಡ ಕನ್ನಡ ಮಾತನಾಡಲು ಕಲಿತಿದ್ದಾರೆ. 'ಕಾಂತಾರ' ಸಿನಿಮಾ ನೋಡಿ ಜ್ಯೂ. ಎನ್‌ಟಿಆರ್ ಥ್ರಿಲ್ಲಾಗಿದ್ದರು. ರಿಷಬ್ ಶೆಟ್ಟಿಗೆ ಫೋನ್ ಮಾಡಿ ಅಭಿನಂದನೆ ತಿಳಿಸಿದ್ದರು. ಬಳಿಕ ಇಬ್ಬರ ನಡುವೆ ಆತ್ಮೀಯ ಒಡನಾಟ ಬೆಳೆದಿತ್ತು. ಕೆಲ ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಸದ್ಯ ರಿಷಬ್ ಶೆಟ್ಟಿ ಜೊತೆ ಜ್ಯೂ. ಎನ್‌ಟಿಆರ್ ಉಡುಪಿ ಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದಿದ್ದಾರೆ. ತಾಯಿ ಆಸೆಯಂತೆ ಕೃಷ್ಣಮಠಕ್ಕೆ ಬಂದಿದ್ದಾಗಿ ತಾರಕ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೆ ಕೂಡ ಭೇಟಿ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ.
'ಕಾಂತಾರ' ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಬಂದಿದ್ದಕ್ಕೆ ತಾರಕ್ ಅಭಿನಂದನೆ ತಿಳಿಸಿದ್ದರು. ಕೆಲ ದಿನಗಳ ಹಿಂದೆ ನಿರ್ದೇಶಕ ಪ್ರಶಾಂತ್ ನೀಲ್ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಯೂ. ಎನ್‌ಟಿಆರ್ ಭಾಗಿ ಆಗಿದ್ದರು. ಈ ವೇಳೆ ರಿಷಬ್ ಶೆಟ್ಟಿ ಕೂಡ ಜೊತೆಯಾಗಿದ್ದರು. ಆ ಫೋಟೊಗಳು ವೈರಲ್ ಆಗುತ್ತಿದೆ.

ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ನಟ ದರ್ಶನ್ ಈ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿ ಎರಡು ತಿಂಗಳಾಗಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿದ ಬಗ್ಗೆಯೂ ಭಾರೀ ವಿವಾದ ಉಂಟಾಗಿತ್ತು. ಅದು ಕೂಡ ದೇಶಾದ್ಯಂತ ಸದ್ದು ಮಾಡಿತ್ತು. ಆದರೆ ರಿಷಬ್ ಶೆಟ್ಟಿ ಈವರೆಗೆ ಈ ಬಗ್ಗೆ ಮಾತನಾಡಿಲ್ಲ.
ಕೊಲ್ಲೂರು ದೇವಸ್ಥಾನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ರಿಷಬ್ ಹಾಗೂ ತಾರಕ್ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಮಾಲಿವುಡ್ ಹೇಮಾ ಕಮಿಟಿ ವರದಿ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಬಳಿಕ ದರ್ಶನ್ ಬಗ್ಗೆ ಕೂಡ ಪ್ರಶ್ನೆ ಎದುರಾಗಿದೆ. ಆದರೆ ಅದಕ್ಕೆ ಉತ್ತರಿಸದೇ ರಿಷಬ್ ಶೆಟ್ಟಿ ಹೊರಟು ಹೋಗಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.
'ಕಾಂತಾರ' ಚಿತ್ರದಲ್ಲಿ ನೀವು ನಟಿಸುತ್ತೀರಾ ಎಂದು ತಾರಕ್ ಬಳಿ ಕೇಳಿದಾಗ ಅದನ್ನು ರಿಷಬ್ ಶೆಟ್ಟಿ ನಿರ್ಧರಿಸಬೇಕು ಎಂದಿದ್ದಾರೆ. ಇನ್ನು ಮಾಧ್ಯಮಗಳ ಪ್ರಶ್ನೆಗಳಿಗೆ ಜ್ಯೂ. ಎನ್‌ಟಿಆರ್ ಕನ್ನಡದಲ್ಲೇ ಉತ್ತರಿಸಿರುವುದು ಹಲವರ ಗಮನ ಸೆಳೆದಿದೆ.


Click it and Unblock the Notifications











