'ಕಾಂತಾರ- 1' ಕ್ಲೈಮ್ಯಾಕ್ಸ್ ಶೂಟ್ ನೋವಿನ ಕಥೆ ಬಿಚ್ಚಿಟ್ಟ ರಿಷಬ್ ಶೆಟ್ಟಿ
ಕಾಂತಾರ.. ಕಾಂತಾರ.. ಕಾಂತಾರ... ಸದ್ಯ ಎಲ್ಲೆಲ್ಲೂ ಹೆಸರು ಮಾರ್ದನಿಸುತ್ತಿದೆ. 'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ನೂರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ರಿಷಬ್ ಶೆಟ್ಟಿ ದೇಶದ ಮೂಲೆ ಮೂಲೆಗೆ ವಿಜಯಯಾತ್ರೆ ಕೈಗೊಂಡಿದ್ದಾರೆ. ಇದೆಲ್ಲದರ ನಡುವೆ ಕ್ಲೈಮ್ಯಾಕ್ಸ್ ಶೂಟ್ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
5 ವರ್ಷಗಳ ಕಾಲ 'ಕಾಂತಾರ' ಸರಣಿ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ಮುಳುಗಿಬಿಟ್ಟಿದ್ದರು. ಹೊರ ಜಗತ್ತಿನ ಸಂಪರ್ಕ ಇಲ್ಲದೇ ಸಿನಿಮಾ ಧ್ಯಾನ ಮಾಡಿದ್ದರು. ಕುಂದಾಪುರದ ಬಳಿ ಹತ್ತಾರು ಎಕರೆ ಜಾಗದಲ್ಲಿ ಸೆಟ್ ಹಾಕಲಾಗಿತ್ತು. 2 ವರ್ಷಗಳ ಕಾಲ ರಿಷಬ್ ಶೆಟ್ಟಿ ಪತ್ನಿ, ಮಕ್ಕಳ ಜೊತೆ ಬೀಡು ಬಿಟ್ಟಿದ್ದರು. ತನು, ಮನ ಅರ್ಪಿಸಿ ಚಿತ್ರಕ್ಕಾಗಿ ಕೆಲಸ ಮಾಡಿದ್ದರು. ಕಾಡು ಮೇಡಿನಂತಹ ಜಾಗಗಳಲ್ಲಿ ಚಿತ್ರೀಕರಣ ಅಷ್ಟು ಸುಲಭವಾಗಿರಲಿಲ್ಲ. ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ಮತ್ತಷ್ಟು ಕಷ್ಟವಾಗಿತ್ತು.

ಟ್ರೈಲರ್ ರಿಲೀಸ್ ಮಾಡುವವರೆಗೂ 'ಕಾಂತಾರ- 1' ಮೇಕಿಂಗ್ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿರಲಿಲ್ಲ. ಬಳಿಕ ಮಾತನಾಡಿದ್ದರು. ಸಿನಿಮಾ ಗೆಲುವಿನ ಸಂಭ್ರಮದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ಬಗ್ಗೆ ರಿಷಬ್ ಮೆಲುಕು ಹಾಕಿದ್ದಾರೆ. ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. "Climax shooting ನ ಸಮಯ ... ಊದಿಕೊಂಡಿದ್ದ ಕಾಲು , ನಿತ್ರಾಣವಾಗಿದ್ದ ದೇಹ.. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವಹಾಗೆ ಆಗಿದೆ.. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ .. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ದ್ವಿಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿರುವುದು ಸಾಕಷ್ಟು ಜನರಿಗೆ ಗೊತ್ತೇಯಿದೆ. ಬೆರ್ಮೆ ಆಗಿ ಮಾತ್ರವಲ್ಲ ಮಾಯಕಾರನ ಪಾತ್ರವನ್ನು ಕೂಡ ಅವರು ನಿಭಾಯಿಸಿದ್ದಾರೆ. ಅದಕ್ಕಾಗಿ ಏಳೆಂಟು ಗಂಟೆ ಮೇಕಪ್ ಹಾಕಿಕೊಂಡಿದ್ದರು. ಸಿಜಿಯಲ್ಲಿ ದೇಹ ತೆಳ್ಳಗೆ ಮಾಡಿ ತೋರಿಸಲಾಗಿದೆ. ಇನ್ನು ಕ್ಲೈಮ್ಯಾಕ್ಸ್ ಆಕ್ಷನ್ ಸೀಕ್ವೆನ್ಸ್ ಜೋರಾಗಿತ್ತು. ನೂರಾರು ಸಹ ಕಲಾವಿದರನ್ನು ಬಳಸಿಕೊಂಡು ವಾರ್ ಸೀಕ್ವೆನ್ಸ್ ಕಟ್ಟಿಕೊಡಲಾಗಿತ್ತು.
ರಿಷಬ್ ಶೆಟ್ಟಿ ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದು ಡಬಲ್ ಕೆಲಸ. ತಾವೇ ಕ್ಯಾಮರಾ ಹಿಂದೆ ಎಲ್ಲವನ್ನು ಫೈನಲ್ ಮಾಡಿ ಫ್ರೇಮ್ ರೆಡಿ ಮಾಡಿ ಬಳಿಕ ಕ್ಯಾಮರಾ ಮುಂದೆ ಹೋಗಿ ನಟಿಸಬೇಕಿತ್ತು. ಈಗಾಗಲೇ ಸಾಕಷ್ಟು ಜನ ಈ ಕೆಲಸ ಮಾಡಿದ್ದಾರೆ. ಆದರೆ ಇಷ್ಟು ದೊಡ್ಡ ಚಿತ್ರಕ್ಕಾಗಿ ಯಾವುದೇ ಸ್ಟಾರ್ ನಟ, ನಿರ್ದೇಶಕ ಈ ಸಾಹಸ ಮಾಡಿಲ್ಲ.
ಗುಳಿಗ ಹಾಗೂ ಚಾವುಂಡಿಯಾಗಿ ರಿಷಬ್ ಶೆಟ್ಟಿ ಆರ್ಭಟ ನೋಡುಗರ ಮೈಜುಮ್ ಎನ್ನುವಂತೆ ಮಾಡಿದೆ. ಅಷ್ಟು ಗಾಢವಾದ ಅಭಿನಯ ಆ ಸನ್ನಿವೇಶಗಳಲ್ಲಿ ನೋಡಬಹುದು. ರಿಷಬ್ ಶೆಟ್ಟಿ ಪೋಸ್ಟ್‌ಗೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ. "ಕೈ ಕೆಸರಾದರೆ ಬಾಯಿ ಮೊಸರು.. ಅದ್ಬುತ ಶ್ರಮ ...ಅದ್ಬುತ ನಟನೆ.. ಒಳ್ಳೆಯದಾಗಲಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನು 'ಕಾಂತಾರ-1' ಚಿತ್ರದ ಹೊಸ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸಿನಿಮಾ ಸಕ್ಸಸ್ ಟ್ರೈಲರ್ ಅಭಿಮಾನಿಗಳ ಮನಗೆದ್ದಿದೆ. ಹೊಸ ಹೊಸ ಸನ್ನಿವೇಶಗಳನ್ನು ಕಟ್ ಮಾಡಿರುವ ಟ್ರೈಲರ್, ಅದಕ್ಕೆ ಅಜನೀಶ್ ಬಿಜಿಎಂ ಸಖತ್ತಾಗಿದೆ. ಟ್ರೈಲರ್ ಬದಲು ಈ ಟೀಸರ್ ಮೊದಲೇ ಬಿಡಬೇಕಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಈಗಾಗಲೇ 'ಕಾಂತಾರ- 1' ಸಿನಿಮಾ 600 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸೆಕೆಂಡ್ ವೀಕೆಂಡ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಸಿನಿಮಾ ಗಳಿಕೆ 150 ಕೋಟಿ ರೂ. ಗಡಿಯಲ್ಲಿದೆ. ತೆಲುಗು, ತಮಿಳು, ಮಲಯಾಳಂ ವರ್ಷನ್‌ಗೂ ಒಳ್ಳೆ ರೆಸ್ಪಾನ್ಸ್ ಮುಂದುವರೆದಿದೆ.


Click it and Unblock the Notifications











