ಅಂದು ರಿಷಬ್ ತಲೆ ಮೇಲೆ ಹೊಡೆದಿದ್ದ ನಿರ್ದೇಶಕ; ಇಂದು ಮುಂಬೈನಲ್ಲಿ ಹೂಮಳೆ ಸ್ವಾಗತ
ಸಮಯ ಸಂದರ್ಭಗಳು ಹೇಗೆಲ್ಲಾ ಬದಲಾಗುತ್ತದೆ ಎಂದು ಹೇಳುವುದು ಕಷ್ಟ. ಕೆಳಗಿರುವವರು ಮೇಲೆರುವುದು, ಮೇಲಿದ್ದವರು ಕೆಳಗೆ ಬೀಳುವುದದನ್ನು ನೋಡುತ್ತಿರುತ್ತೇವೆ. ಒಂದ್ಕಾಲದಲ್ಲಿ ಸಾಕಷ್ಟು ಅವಮಾನ ಎದುರಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇವತ್ತು ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. ಹೋದ ಕಡೆಯೆಲ್ಲಾ ಭವ್ಯ ಸ್ವಾಗತ ಸಿಗುತ್ತಿದೆ.
ಸಹ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದಿದ್ದ ರಿಷಬ್ ಶೆಟ್ಟಿ ಆರಂಭದಲ್ಲಿ ಸಾಕಷ್ಟು ಸೋಲು, ಅವಮಾನ ಎದುರಿಸಿದ್ದರು. ಕೆಲವೊಮ್ಮೆ ಬಣ್ಣದಲೋಕದ ಸಹವಾಸವೇ ಬೇಡ ಎಂದುಕೊಂಡಿದ್ದು ಇದೆ. ಆದರೆ ಛಲಬಿಡದ ತ್ರಿವಿಕ್ರಮನಂತೆ ಚಿತ್ರರಂಗದಲ್ಲಿ ಸಾಧಿಸುವ ಪಣ ತೊಟ್ಟಿದ್ದರು. ಅದೇ ಛಲ ಅವರನ್ನು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದೆ. ತಮ್ಮ ಮೊದಲ ಚಿತ್ರದ ಒಂದೇ ಒಂದು ಶೋಗಾಗಿ ಅವರಿವರ ಕಾಲು ಹಿಡಿದಿದ್ದ ರಿಷಬ್ ಶೆಟ್ಟಿ ಸಿನಿಮಾ ಈಗ ಸಾವಿರಾರು ಸ್ಕ್ರೀನ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಮೊದಲ ವಾರದಲ್ಲೇ 'ಕಾಂತಾರ- 1' ಸಿನಿಮಾ 500 ಕೋಟಿ ರೂ. ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಸಿನಿಮಾ ಇಂತಾದೊಂದು ಸಾಧನೆ ಮಾಡುವ ಊಹೆ ಖುದ್ದು ಅವರಿಗೂ ಇರಲಿಲ್ಲ. ಕನ್ನಡ ಸಿನಿಮಾದಲ್ಲಿ ನಟಿಸಿದರೆ ಸಾಕು, ಕನ್ನಡ ಪ್ರೇಕ್ಷಕರು ನನ್ನನ್ನು ಗುರ್ತಿಸಿದರೆ ಸಾಕು ಎಂದುಕೊಂಡಿದ್ದ ರಿಷಬ್ ಶೆಟ್ಟಿ ಅವರನ್ನು ಇಂದು ಪರಭಾಷಿಕರು ಮೆಚ್ಚಿಕೊಂಡಿದ್ದಾರೆ. ಅವರ ಪ್ರತಿಭೆಗೆ ಬಹುಪರಾಕ್ ಎನ್ನುತ್ತಿದ್ದಾರೆ. ಉತ್ತರ ಭಾರತದಲ್ಲಿ ರಿಷಬ್ ಶೆಟ್ಟಿಗೆ ಅಭಿಮಾನಿ ಬಳಗ ಸೃಷ್ಟಿಯಾಗಿದೆ.
'ಕಾಂತಾರ- 1' ಸಕ್ಸಸ್ ಸಂಭ್ರಮದಲ್ಲಿ ಉತ್ತರ ಭಾರತದಲ್ಲಿ ವಿಜಯಯಾತ್ರೆ ಕೈಗೊಂಡಿದ್ದಾರೆ. ಮುಂಬೈನ ಗೈಟಿ ಗೆಲಕ್ಸಿ ಥಿಯೇಟರ್‌ನಲ್ಲಿ ಪ್ರೇಕ್ಷಕರ ಜೊತೆ ರಿಷಬ್ ಶೆಟ್ಟಿ ಸಿನಿಮಾ ವೀಕ್ಷಿಸಿದರು. ಥಿಯೇಟರ್ ಮುಂಭಾಗದಲ್ಲಿ ಹೂಮಳೆ ಸುರಿಸಿ ಅವರನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಕನ್ನಡದ ನಟನಿಗೆ ಇದಕ್ಕಿಂತ ಹೆಮ್ಮೆ ಬೇರೆ ಏನಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇವತ್ತು ರಿಷಬ್ ಶೆಟ್ಟಿ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು, ಆಟೋಗ್ರಾಫ್ ಪಡೆಯಲು, ಕೈ ಕುಲುಕಲು ದೇಶ ವಿದೇಶದಲ್ಲಿರುವ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಅಂದು ಸಿನಿಮಾ ಸೆಟ್‌ನಲ್ಲಿ ನಿರ್ದೇಶಕರೊಬ್ಬರು ಯಾರೋ ಮಾಡಿದ ತಪ್ಪಿಗೆ ರಿಷಬ್ ಶೆಟ್ಟಿ ಮೇಲೆ ಗರಂ ಆಗಿದ್ದರು. ತಲೆ ಮೇಲೆ ಹೊಡೆದುಬಿಟ್ಟಿದ್ದರು. ಅಂದು ಚಿತ್ರರಂಗದ ಸಹವಾಸವೇ ಬೇಡ ಎಂದು ರಿಷಬ್ ಶೆಟ್ಟಿ ಅಂದುಕೊಂಡಿದ್ದು ಇದೆ. ಆದರೆ ಸಿನಿಮಾ ಕನಸು ಅಷ್ಟು ಸುಲಭವಾಗಿ ಅವರನ್ನು ಇಲ್ಲಿಂದ ಬೇರೆ ಕಡೆ ಕರೆದುಕೊಂಡು ಹೋಗಲಿಲ್ಲ.
ರವಿ ಶ್ರೀವತ್ಸ ನಿರ್ದೇಶನದ 'ಗಂಡ ಹೆಂಡತಿ' ಚಿತ್ರದಲ್ಲಿ ರಿಷಬ್ ಶೆಟ್ಟಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವತ್ತು ಸೆಟ್‌ನಲ್ಲಿ ಯಾರೋ ಮಾಡಿದ ತಪ್ಪಿಗೆ ನಾನು ಏನು ಮಾಡಬೇಕೆಂದು ಗೊತ್ತಾಗದೇ ನಿಸ್ಸಾಹಯಕನಾಗಿ ನಿಂತಿದ್ದೆ. ಬಂದು ನನ್ನ ತಲೆಗೆ ಹೊಡೆದಿದ್ದರು. ಅವರು ಬೇಕು ಅಂತ ಹೊಡೆಯಲಿಲ್ಲ, ಆ ಒತ್ತಡ ಏನು ಎನ್ನುವುದು ನಿರ್ದೇಶಕನಾದ ಬಳಿಕ ನನಗೂ ಅರ್ಥ ಆಗುತ್ತೆ ಎಂದು ಅನುಶ್ರೀ ಯೂಟ್ಯೂಬ್ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಹೇಳಿಕೊಂಡಿದ್ದರು.
ಅದೇ ಸಮಯದಲ್ಲಿ ಹೋಟೆಲ್ ಆರಂಭಿಸಿ ರಿಷಬ್ ಶೆಟ್ಟಿ ನಷ್ಟ ಅನುಭವಿಸಿದ್ದರು. ಮಿನರಲ್ ವಾಟರ್ ಸಪ್ಲೇ ಮಾಡಿ ದುಡಿದು ಕೂಡಿಟ್ಟಿದ್ದ ಹಣವನ್ನು ಹೋಟೆಲ್ ವ್ಯಾಪಾರಕ್ಕೆ ಹಾಕಿ ಕೈಸುಟ್ಟುಕೊಂಡಿದ್ದರು. ಜೊತೆಗೆ ಸಾಲ ಮಾಡಿ ಹಣ ಹಾಕಿ ಕಳೆದುಕೊಂಡಿದ್ದರು. ಆ ಸಮಯದಲ್ಲಿ ಹಣ ಕೇಳುತ್ತಾನೆ ಎಂದು ಸಂಬಂಧಿಕರು ಕೂಡ ಮಾತನಾಡಿಸಲು ಹಿಂದು ಮುಂದು ನೋಡುತ್ತಿದ್ದರಂತೆ. ಅಂತಹ ಸಮಯದಲ್ಲೂ ರಿಷಬ್ ಶೆಟ್ಟಿ ಹಿಂದಡಿ ಇಡಲಿಲ್ಲ.
ಅದೇ ಸಮಯದಲ್ಲಿ ಪ್ರಶಾಂತ್ ಶೆಟ್ಟಿ ಎಂಬ ತಮ್ಮ ಹೆಸರನ್ನು ರಿಷಬ್ ಶೆಟ್ಟಿ ಎಂದು ಬದಲಿಸಿಕೊಳ್ಳಲು ಮುಂದಾಗಿದ್ದರು. ತಂದೆ ಸಲಹೆಯಂತೆ 'R' ಅಕ್ಷರದಿಂದ ಶುರುವಾಗುವ ರಿಷಬ್ ಶೆಟ್ಟಿ ಎಂದು ಹೆಸರು ಬದಲಿಸಿಕೊಂಡರು. ಅದೇ ಸಮಯದಲ್ಲಿ 'ತುಘಲಕ್' ಚಿತ್ರದಲ್ಲಿ ಸಣ್ಣ ಪಾತ್ರ ಸಿಗುತ್ತದೆ. ಅದೇ ಸಿನಿಮಾದಿಂದ ರಕ್ಷಿತ್ ಶೆಟ್ಟಿ ಪರಿಚಯವಾಗುತ್ತದೆ. ಮುಂದೆ ನಿಧಾನವಾಗಿ ಮತ್ತೆ ಗೆಲುವಿನ ಕಡೆ ರಿಷಬ್ ಶೆಟ್ಟಿ ಪಯಣ ಶುರುವಾಗುತ್ತದೆ.


Click it and Unblock the Notifications











