ಪಿತೃಪಕ್ಷ ಕಳೆದ ಮೇಲೆ 'ಕಾಂತಾರ'-1 ದರ್ಬಾರ್; ಟ್ರೈಲರ್ ಅಪ್‌ಡೇಟ್ ಬಂದೇಬಿಡ್ತು
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ-1' ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಹೊಂಬಾಳೆ ಸಂಸ್ಥೆ ಯಾಕೆ ಪ್ರಮೋಷನ್ ಶುರು ಮಾಡ್ತಿಲ್ಲ ಎಂದು ಸಿನಿರಸಿಕರು ಬೇಸರಗೊಂಡಿದ್ದರು. ಅದಕ್ಕೆ ಕಾರಣ ಏನು ಎನ್ನುವುದನ್ನು ಫಿಲ್ಮಿಬೀಟ್ ಕನ್ನಡ ಇತ್ತೀಚೆಗೆ ರಿವೀಲ್ ಮಾಡಿತ್ತು. ಅಂತೂ ಇಂತೂ ಅಭಿಮಾನಿಗಳು ಕಾಯ್ತಿದ್ದ ಆ ಬಿಗ್ ಅಪ್‌ಡೇಟ್ ಬಂದೇಬಿಟ್ಟಿದೆ.
ಹೊಂಬಾಳೆ ಸಿನಿಮಾ ಬಿಡುಗಡೆಗೆ ಇನ್ನು 14 ದಿನ ಮಾತ್ರ ಬಾಕಿಯಿದೆ. 10 ದಿನಗಳ ಮುನ್ನ ಪ್ರಮೋಷನ್ ಶುರುವಾಗ್ತಿದೆ. ಸೆಪ್ಟೆಂಬರ್ 22ರಂದು ಟ್ರೈಲರ್ ಅನಾವರಣ ಆಗಲಿದೆ. ದೊಡ್ಡ ಮಟ್ಟದಲ್ಲಿ ಈವೆಂಟ್ ಮಾಡಿ ಝಲಕ್ ತೋರಿಸುವ ಪ್ರಯತ್ನ ಶುರುವಾಗಿದೆ. ಪಿತೃಪಕ್ಷ, ಸೂರ್ಯಗ್ರಹಣ ಕಳೆದ ಮೇಲೆ ನವರಾತ್ರಿ ಸಂಭ್ರಮದಲ್ಲೇ 'ಕಾಂತಾರ'-1 ಪ್ರಪಂಚದ ಸಣ್ಣ ಝಲಕ್ ಬರಲಿದೆ.

ಭರ್ಜರಿಯಾಗಿ ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ ನಡೆದಿದೆ. 7 ಭಾಷೆಗಳಿಗೆ ಡಬ್ ಆಗಿ ಏಕಕಾಲಕ್ಕೆ 30 ದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಸೆಟ್ಟೇರಿದ ಸಮಯದಲ್ಲಿ ಸಣ್ಣ ಗ್ಲಿಂಪ್ಸ್ ಮಾತ್ರ ಬಂದಿತ್ತು. ಬಳಿಕ ಒಂದೆರಡು ಪೋಸ್ಟರ್‌ಗಳು ಬಂದಿದ್ದವು. ಆದರೂ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣ 3 ವರ್ಷಗಳ ಹಿಂದೆ ಬಂದು ಹಿಟ್ ಆಗಿದ್ದ 'ಕಾಂತಾರ' ಸಿನಿಮಾ. ಇದೀಗ ಅದರ ಪ್ರೀಕ್ವೆಲ್ ಬರ್ತಿದೆ ಅಂದ್ರೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗುತ್ತದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣವಾಗಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಸಾವಿರಾರು ಜನ ಸಹ ಕಲಾವಿದರನ್ನು ಬಳಸಿಕೊಂಡು ಬಹಳ ಅದ್ಧೂರಿಯಾಗಿ ಆಕ್ಷನ್ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.
ಬರೀ ಮೇಕಿಂಗ್ ವೀಡಿಯೋ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದರು. ರಿಷಬ್ ಶೆಟ್ಟಿ ಅಂಡ್ ಟೀಮ್ ತನು ಮನ ಧನ ಅರ್ಪಿಸಿ ಸಿನಿಮಾ ಕಟ್ಟಿಕೊಟ್ಟಿದೆ. ದೊಡ್ಡ ಮಟ್ಟದಲ್ಲಿ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ. ಐಮ್ಯಾಕ್ಸ್ ವರ್ಷನ್‌ನಲ್ಲಿ ಕೂಡ 'ಕಾಂತಾರ'-1 ಸಿನಿಮಾ ತೆರೆಗಪ್ಪಳಿಸಲಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಗುಲ್ಶನ್ ದೇವಯ್ಯ ಮುಖ್ಯವಾದ ಪಾತ್ರದಲ್ಲಿ ಮಿಂಚಿದ್ದಾರೆ. ಮೊದಲಿನಿಂದಲೂ ಹೊಂಬಾಳೆ ಸಂಸ್ಥೆ ದೈವವನ್ನು ನಂಬಿಕೊಂಡು ಬರ್ತಿದೆ. ಸಂಪ್ರದಾಯ, ಆಚಾರಗಳನ್ನು ಪಾಲಿಸಿಸುತ್ತಿದೆ. ಅದೇ ಕಾರಣಕ್ಕೆ ಪಿತೃಪಕ್ಷದ ಸಮಯದಲ್ಲಿ ಶುಭ ಕಾರ್ಯ ಬೇಡ ಎಂದು ತೀರ್ಮಾನಿಸಿತ್ತು.
ಭಾನುವಾರ ಅಮಾವಾಸ್ಯೆ ಕಳೆದು ಪಿತೃಪಕ್ಷ ಮುಗಿಯಲಿದೆ. ಅಂದೇ ಗ್ರಹಣ ಕೂಡ ಇದೆ. ಅದೆಲ್ಲಾ ಮುಗಿದ ಬಳಿಕ ನವರಾತ್ರಿ ಶುರುವಾಗುತ್ತಿದೆ. ನವರಾತ್ರಿಯ ಮೊದಲ ದಿನ ಸೆಪ್ಟೆಂಬರ್ 22(ಸೋಮವಾರ)ರಂದು ಮಧ್ಯಾಹ್ನ 12 ಗಂಟೆ 45 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಅಲ್ಲಿಂದ ಮುಂದೆ ಅಸಲಿ ಪ್ರಮೋಷನ್ ಏನು ಎನ್ನುವುದನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತೋರಿಸಲಿದೆ.
1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ 'ಕಾಂತಾರ- 1' ಸಿನಿಮಾ ತೆರೆಗೆ ತರಲಾಗ್ತಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್, ಮಾರ್ಕೆಂಟಿಂಗ್, ರಿಲೀಸ್ ಪ್ಲ್ಯಾನ್ ನಡೀತಿದೆ. 'ಕೆಜಿಎಫ್- 2' ಬಳಿಕ ಐಮ್ಯಾಕ್ಸ್‌ನಲ್ಲಿ ಬಿಡುಗಡೆ ಆಗುತ್ತಿರುವ ಎರಡನೇ ಕನ್ನಡ ಸಿನಿಮಾ ಇದಾಗಿದೆ. ವಿದೇಶಗಳಲ್ಲಿ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕದಂಬರ ಕಾಲದ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದ್ದು ನಾಗಸಾಧು ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ ಎನ್ನಲಾಗ್ತಿದೆ.
ಚಿತ್ರದ ಕಥೆ, ಕಲಾವಿದರ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಕೊಟ್ಟಿಲ್ಲ. ಸೆಪ್ಟೆಂಬರ್ 22ರಂದು ಟ್ರೈಲರ್‌ನಲ್ಲೇ ಎಲ್ಲಾ ಕುತೂಹಲಕ್ಕೂ ತೆರೆ ಬೀಳಲಿದೆ. 3 ವರ್ಷಗಳಿಂದ ಇದೊಂದು ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಶ್ರಮಿಸಿದ್ದಾರೆ. ಸಿನಿಮಾ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗ್ತಿದೆ.


Click it and Unblock the Notifications











