ಅಕ್ಟೋಬರ್ 2ಕ್ಕೆ 'ಕಾಂತಾರ-1' ರಿಲೀಸ್ ಆಗಲ್ವಾ? ಬಿಗ್ ಅಪ್‌ಡೇಟ್ ಕೊಟ್ಟ ರವಿಯಣ್ಣ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ ಚಾಪ್ಟರ್-1' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಕಾಂತಾರ ಚಾಪ್ಟರ್-1' ಸಿನಿಮಾ ನಿರ್ಮಾಣವಾಗಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ಮೂಡಿ ಬರ್ತಿದೆ. ಆಂಧ್ರ, ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್ 100 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ. ಪೃಥ್ವಿರಾಜ್ ಸುಕುಮಾರನ್ ಕೇರಳ ರೈಟ್ಸ್ ಕೊಂಡುಕೊಂಡಿದ್ದಾರೆ. ಒಟ್ಟಾರೆ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿದೆ.

ಕೇವಲ 15 ಕೋಟಿ ರೂ. ಬಜೆಟ್ ಸಿನಿಮಾ 'ಕಾಂತಾರ' ಬರೋಬ್ಬರಿ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಆದರೆ ಪ್ರೀಕ್ವೆಲ್ ಬಜೆಟ್ 100 ಕೋಟಿ ರೂ. ದಾಟಿದೆ ಎನ್ನಲಾಗ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಬರೀ ಮೇಕಿಂಗ್ ವೀಡಿಯೋ ನೋಡಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎನ್ನುವ ಚರ್ಚೆ ನಡೀತಿದೆ. ಅಷ್ಟರಮಟ್ಟಿಗೆ ಸಿನಿಮಾ ಹೈಪ್ ಕ್ರಿಯೇಟ್ ಮಾಡ್ತಿದೆ.
'ಕಾಂತಾರ-1' ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಗುಲ್ಷನ್ ದೇವಯ್ಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಾವಿರಾರು ಸಹ ಕಲಾವಿದರನ್ನು ಬಳಸಿಕೊಂಡು ಚಿತ್ರದ ಕೆಲ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ. ಚಿತ್ರೀಕರಣದ ವೇಳೆ ಚಿತ್ರತಂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತ್ತು. ಅದನ್ನೆಲ್ಲಾ ಮೀರಿ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತಂಡ ನಿರತವಾಗಿದೆ.
ಅಕ್ಟೋಬರ್ 2ಕ್ಕೆ ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಆದರೆ ಈವರೆಗೆ ಚಿತ್ರತಂಡ ಪ್ರಮೋಷನ್ ಆರಂಭಿಸಿಲ್ಲ. ಇದು ಸಹಜವಾಗಿಯೇ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಅನುಮಾನ ಮೂಡಿಸಿದೆ. ಸಿನಿಮಾ ತೆರೆಗೆ ಬರೋದು ಮತ್ತಷ್ಟು ತಡವಾಗುತ್ತಾ ಎನ್ನುವ ಊಹಾಪೋಹಕ್ಕೆ ಕಾರಣವಾಗಿದೆ. ಇತ್ತೀಚೆಗೆ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ ಬಿಡುಗಡೆಗಿಂತ ತಿಂಗಳ ಮುನ್ನ ಟ್ರೈಲರ್ ರಿಲೀಸ್ ಮಾಡುತ್ತಾರೆ. ಆದರೆ 'ಕಾಂತಾರ'-1 ಚಿತ್ರದ ಯಾವುದೇ ಹಾಡು ಕೂಡ ಇನ್ನು ಹೊರ ಬಂದಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬೇಗ ಪ್ರಮೋಷನ್ ಶುರು ಮಾಡಿ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸಿನಿಮಾ ರಿಲೀಸ್ ಮಾಡ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಚಿತ್ರತಂಡ ಮೌನ ವಹಿಸಿದೆ. ಪ್ರಮೋಷನ್ ವಿಚಾರದಲ್ಲಿ ಹೊಂಬಾಳೆ ಫಿಲ್ಮ್ಸ್ ಸದಾ ಮುಂದಿರುತ್ತದೆ. ಭಿನ್ನ ವಿಭಿನ್ನ ರೀತಿಯ ಪ್ರಮೋಷನ್ ಮೂಲಕ ಗಮನ ಸೆಳೆಯುತ್ತ ಬಂದಿದೆ. 'ಕಾಂತಾರ'-1 ಸಿನಿಮಾ ವಿಚಾರದಲ್ಲೂ ಏನೋ ದೊಡ್ಡದಾಗಿ ಪ್ಲ್ಯಾನ್ ಮಾಡಿರುವಂತೆ ಕಾಣ್ತಿದೆ.
'ಸು ಫ್ರಮ್ ಸೋ' ಚಿತ್ರದಲ್ಲಿ ರವಿಯಣ್ಣ ಪಾತ್ರ ಮಾಡಿ ಶನೀಲ್ ಗೌತಮ್ ಗೆದ್ದಿದ್ದಾರೆ. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ರಿಷಬ್ ಶೆಟ್ಟಿ ಸಿನಿಮಾಗಳಲ್ಲಿ ಶನೀಲ್ ಗೌತಮ್ ಕೆಲಸ ಮಾಡುತ್ತಾ ಬರ್ತಿದ್ದಾರೆ. ಮುಖ್ಯವಾಗಿ ಕಥೆ, ಚಿತ್ರಕಥೆ ಬರೆಯಲು ತಂಡದ ಜೊತೆ ಗುರ್ತಿಸಿಕೊಂಡಿದ್ದಾರೆ. 'ಕಾಂತಾರ'-1 ಚಿತ್ರದಲ್ಲೂ ರಿಷಬ್ ಜೊತೆ ಬೆಂಬಲವಾಗಿ ನಿಂತಿದ್ದಾರೆ. ಸದ್ಯ ಸಿನಿಮಾ ಬಗ್ಗೆ ಫೋಟೊ ಸಮೇತ ಒಂದು ಅಪ್‌ಡೇಟ್ ಕೊಟ್ಟಿದ್ದಾರೆ.
'ಕಾಂತಾರ-1' ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದ್ದು ಫೈನಲ್ ಕಾಪಿ ಶೀಘ್ರದಲ್ಲೇ ಸಿಗಲಿದೆ. ಸಿನಿಮಾ ಬಿಡುಗಡೆಗೆ ಇನ್ನು 28 ದಿನಗಳು ಮಾತ್ರ ಬಾಕಿ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಿಷಬ್, ಅನಿರುದ್ಧ ಹಾಗೂ ಅರವಿಂದ್ ಕಶ್ಯಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ ಬರೋದು ಖಚಿತ ಎನ್ನುವುದು ಅರ್ಥವಾಗ್ತಿದೆ.


Click it and Unblock the Notifications











