ಕನ್ನಡದಲ್ಲಿ ಅಬ್ಬರಿಸುತ್ತಿರುವ ನಡುವೆಯೇ ಹಿಂದಿಗೂ 'ಕಾಂತಾರ' ಡಬ್; ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆ
ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಚಿತ್ರ ಇತಿಹಾಸ ಸೃಷ್ಟಿಸುತ್ತಿದೆ. ಕಳೆದ ಶುಕ್ರವಾರ ( ಸೆಪ್ಟೆಂಬರ್ 30 ) ಬಿಡುಗಡೆಗೊಂಡ ಕಾಂತಾರ ಚಿತ್ರ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ರಾಜ್ಯದ ಕರಾವಳಿ ಭಾಗದ ಆಚರಣೆಗಳನ್ನು ಅಚ್ಚುಕಟ್ಟಾಗಿ ತೋರಿಸುವುದರ ಜೊತೆಗೆ ಕಾಡು ಮತ್ತು ಮನುಷ್ಯನ ನಡುವಿನ ಸಂಘರ್ಷವನ್ನೂ ಸಹ ತೆರೆ ಮೇಲೆ ತರಲಾಗಿತ್ತು.
ರಿಷಬ್ ಶೆಟ್ಟಿ ಅವರ ನೂತನ ಶೈಲಿಯ ಚಿತ್ರಕತೆಗೆ ಮನಸೋತ ಸಿನಿ ಪ್ರೇಕ್ಷಕರು ನಟ ರಿಷಬ್ ಶೆಟ್ಟಿಯ ನಟನೆಗೂ ಸಹ ಜೈ ಎಂದಿದ್ದಾರೆ. ಇನ್ನು ಕಾಂತಾರ ಚಿತ್ರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು, ಸತತವಾಗಿ ಬಹುತೇಕ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ದಸರಾ ಹಬ್ಬಕ್ಕೂ ಹಿಂದೆ ಕಾಂತಾರ ಬಿಡುಗಡೆಯಾದ ಕಾರಣ ಸಾಲು ಸಾಲು ರಜೆ ಇದ್ದದ್ದು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿ ಒಳ್ಳೆ ಗಳಿಕೆ ಕಂಡಿದೆ. ಇನ್ನು ಚಿತ್ರ ಈಗಾಗಲೇ ಐವತ್ತು ಕೋಟಿ ಕ್ಲಬ್‌ನ ಸನಿಹಕ್ಕೆ ಬಂದಿದ್ದು, ಕೇವಲ ಕರ್ನಾಟಕ ಮಾತ್ರವಲ್ಲದೇ ಚಿತ್ರದ ಯಶಸ್ಸಿನ ಕುರಿತಾಗಿ ಇತರೆ ರಾಜ್ಯಗಳ ಸಿನಿ ಪ್ರೇಕ್ಷಕರೂ ಸಹ ಮಾತನಾಡಿಕೊಳ್ಳುತ್ತಿದ್ದಾರೆ ಹಾಗೂ ಇಂತ ಒಳ್ಳೆ ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡಿದ್ದರೆ ಎಲ್ಲಾ ಭಾಷೆಯ ಪ್ರೇಕ್ಷಕರೂ ಸಹ ನೋಡಬಹುದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಹೀಗೆ ಪರಭಾಷೆಯ ಪ್ರೇಕ್ಷಕರ ಒತ್ತಾಯಕ್ಕೆ ಹೊಂಬಾಳೆ ಫಿಲ್ಮ್ಸ್ ಗ್ರೀನ್ ಸಿಗ್ನಲ್ ನೀಡಿದಂತಿದ್ದು, ಕಾಂತಾರ ಚಿತ್ರವನ್ನು ಮೊದಲಿಗೆ ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಪೋಸ್ಟ್ ಮಾಡಿದ್ದು, ಕಾಂತಾರ ಚಿತ್ರದ ಹಿಂದಿ ಅವತರಣಿಕೆಯ ಟ್ರೈಲರ್ ಅಕ್ಟೋಬರ್ 9ರಂದು ಬೆಳಗ್ಗೆ 9.10ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ. ಕಾಂತಾರ ಹಿಂದಿ ಯಾವಾಗ ಬಿಡುಗಡೆಯಾಗಲಿದೆ ಎಂಬ ವಿಷಯವನ್ನು ಈ ಟ್ರೈಲರ್ ಮೂಲಕವೇ ತಿಳಿಸುವ ನಿರೀಕ್ಷೆಯಿದ್ದು, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿಯೂ ಕಾಂತಾರ ಅತಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.


Click it and Unblock the Notifications











