ವಿಶ್ವಸಂಸ್ಥೆಯಲ್ಲಿ 'ಕಾಂತಾರ' ಕಿಚ್ಚು: ಅಪ್ಪು ಹುಟ್ಟುಹಬ್ಬದ ದಿನ ಮತ್ತೊಂದು ದಾಖಲೆ.. ಕನ್ನಡದಲ್ಲೇ ರಿಷಬ್ ಮಾತು
ಕಳೆದ ವರ್ಷ ಬಿಡುಗಡೆಯಾದ 'ಕಾಂತಾರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗಪ್ಪಳಿಸಿ ಸಂಚಲನ ಸೃಷ್ಟಿಸಿತ್ತು. ಪರಭಾಷಿಕರು ಕೂಡ ಸಿನಿಮಾ ನೋಡಿ ಫಿದಾ ಆಗಿದ್ದರು. ಇದೀಗ ಕನ್ನಡದ ಹೆಮ್ಮೆಯ 'ಕಾಂತಾರ' ಚಿತ್ರಕ್ಕೆ ಮತ್ತೊಂದು ಗೌರವ ಸಿಗುತ್ತಿದೆ. ಕಾಂತಾರ ಸಿನಿಮಾ ಸಮೇತ ರಿಷಬ್ ಶೆಟ್ಟಿ ವಿಶ್ವಸಂಸ್ಥೆ ಕಛೇರಿ ತಲುಪಿದ್ದಾರೆ. ಕಾಡಂಚಿನ ಜನರ ಸಮಸ್ಯೆಗಳ ಕುರಿತು ವಿಶ್ವಸಂಸ್ಥೆಯಲ್ಲಿ ರಿಷಬ್ ಮಾತನಾಡಲಿದ್ದಾರೆ.
ಕೆಲ ದಿನಗಳಿಂದ ಜಾಗತಿಕ ಸಮಸ್ಯೆಗಳ ಕುರಿತು ವಿಶ್ವಸಂಸ್ಥೆ ತನ್ನ ವಾರ್ಷಿಕ ಸಭೆಯಲ್ಲಿ ಚರ್ಚಿಸುತ್ತಿದೆ. ವಿವಿಧ ದೇಶಗಳ ನಾಯಕರು ಈ ಸಭೆಯಲ್ಲಿ ಭಾಗಿ ಆಗಿದ್ದಾರೆ. ಜಾಗತಿಕ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಡುತ್ತಿದ್ದಾರೆ. ಅದೇ ರೀತಿ ಕರ್ನಾಟಕದಿಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ಈ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ರಿಷಬ್ ಶೆಟ್ಟಿ ಜಿನಿವಾ ತಲುಪಿದ್ದಾರೆ. ಅಂದಗಾಗೆ ವಿಶ್ವಸಂಸ್ಥೆಯಲ್ಲಿ ರಿಷಬ್ ಕನ್ನಡದಲ್ಲೇ ಮಾತನಾಡುತ್ತಾರೆ, ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಿದ್ದಾರೆ.

'ಕಾಂತಾರ' ಚಿತ್ರದ ಮುಖ್ಯ ತಿರುಳು ಅದೇ ಆಗಿತ್ತು. ಕಾಡಿನ ಜನರ ಮತ್ತು ಸಂಸ್ಕೃತಿಯ ಬಗ್ಗೆ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೇಳಿದ್ದರು. ಕಾಡಂಚಿನ ಜನರು ಮತ್ತು ಅರಣ್ಯ ರಕ್ಷಣೆಯಲ್ಲಿ ಅರಣ್ಯ ಇಲಾಖೆ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಇತ್ತೀಚೆಗೆ ರಿಷಬ್ ಶೆಟ್ಟಿ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆದೇಶಿಸುವ ಭರಸೆಯನ್ನು ನೀಡಿದ್ದರು.
"ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು." ಎಂದು ರಿಷಬ್ ಶೆಟ್ಟಿ ಕೂಡ ಟ್ವೀಟ್ ಮಾಡಿದ್ದಾರೆ. ಇದೀಗ ರಿಷಬ್ ಶೆಟ್ಟಿ ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಇನ್ನು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವೇ(ಮಾರ್ಚ್ 17) ವಿಶ್ವಸಂಸ್ಥೆಯ ಕಛೇರಿಯಲ್ಲಿ 'ಕಾಂತಾರ' ಸಿನಿಮಾ ಪ್ರದರ್ಶನ ಕೂಡ ಆಗಲಿದೆಯಂತೆ. "ಕರ್ನಾಟಕದ ಸುಪುತ್ರ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕನ್ನಡದಲ್ಲೇ ಮಾತಾಡುತ್ತಾರೆ" ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.
ಇತ್ತೀಚೆಗೆ ಆಸ್ಕರ್ ವೇದಿಕೆಯಲ್ಲಿ ತೆಲುಗಿನ 'RRR' ಸಿನಿಮಾ ದಾಖಲೆ ಬರೆದಿತ್ತು. ಇದೀಗ ಕನ್ನಡದ ಹೆಮ್ಮೆ 'ಕಾಂತಾರ' ಸಿನಿಮಾ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ. ಕಳೆದ ವರ್ಷ ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.


Click it and Unblock the Notifications











