ಉದ್ದ ಕೂದಲಿಗೆ ಕತ್ತರಿ ಹಾಕಿದ ರಿಷಬ್ ಶೆಟ್ಟಿ; ಸ್ಟೈಲಿಶ್ ಲುಕ್‌ನಲ್ಲಿ ಡಿವೈನ್ ಸ್ಟಾರ್
ಕಳೆದ 5 ವರ್ಷಗಳಿಂದ ರಿಷಬ್ ಶೆಟ್ಟಿ 'ಕಾಂತಾರ' ಸರಣಿ ಸಿನಿಮಾಗಳಲ್ಲಿ ಮುಳುಗಿ ಹೋಗಿದ್ದರು. ಪಾತ್ರಕ್ಕಾಗಿ ಲುಕ್ ಬದಲಿಸಿ ಉದ್ದನೆಯ ಕೂದಲು, ಗಡ್ಡ ಬಿಟ್ಟು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಪಾತ್ರಕ್ಕಾಗಿ ನೈಜವಾಗಿ ಕೂದಲು ಬೆಳೆಸಿ ನಟಿಸಿದ್ದರು. 'ಕಾಂತಾರ- 1' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಮುಂದಿನ ಸಿನಿಮಾಗಳತ್ತ ರಿಷಬ್ ಮುಖ ಮಾಡಿದ್ದಾರೆ. ಸದ್ಯ ಉದ್ದನೆಯ ಕೂದಲಿಗೆ ಕತ್ತರಿ ಹಾಕಿದ್ದಾರೆ.
ಹೌದು ಕಳೆದರಡು ದಿನಗಳಿಂದ ರಿಷಬ್ ಶೆಟ್ಟಿ ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ. 'ಕಾಂತಾರ- 1' ಸಿನಿಮಾ ಟಿವಿಯಲ್ಲಿ ಪ್ರಸಾರವಾಗಿ ಸದ್ದು ಮಾಡ್ತಿದೆ. 10 ವರ್ಷಗಳ ಹಿಂದೆ ಪತ್ನಿ ಪ್ರಗತಿ ಶೆಟ್ಟಿ ಅವರನ್ನು ಭೇಟಿ ಮಾಡಿ ಪ್ರೀತಿಸಲು ಆರಂಭಿಸಿದ ನೆನಪು ಮಾಡಿಕೊಂಡು ರಿಷಬ್ ಪೋಸ್ಟ್ ಮಾಡಿದ್ದಾರೆ. ಕೇಕ್ ಕತ್ತರಿಸಿ ಮಡದಿ ಜೊತೆ ಸಂಭ್ರಮಿಸಿದ್ದಾರೆ. ಆ ಫೋಟೊಗಳಲ್ಲಿ ರಿಷಬ್ ಹೊಸ ಲುಕ್ ಹೈಲೆಟ್ ಆಗಿದೆ.

ಕೂದಲು, ಗಡ್ಡವನ್ನು ಟ್ರಿಮ್ ಮಾಡಿ ಸ್ಟೈಲಿಶ್ ಲುಕ್‌ನಲ್ಲಿ ರಿಷಬ್ ಕಂಡಿದ್ದಾರೆ. ಇದು 'ಟಾಕ್ಸಿಕ್' ಚಿತ್ರದ ರಾಯ ಯಶ್ ಲುಕ್ ಅನ್ನು ನೆನಪಿಸುವಂತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಪ್ಪಿ ತಪ್ಪಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದೀರಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಕಾಂತಾರ- 1' ಬಳಿಕ ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ನಟಿಸುವುದಾಗಿ ರಿಷಬ್ ಈಗಾಗಲೇ ಹೇಳಿದ್ದಾರೆ.
ಈಗಾಗಲೇ ಆ ಚಿತ್ರದ ಫೋಟೊಶೂಟ್ ಮಾಡಿ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅದರಲ್ಲಿ ಕೂಡ ಉದ್ದನೆಯ ಗಡ್ಡ, ಕೂದಲಿನ ಲುಕ್‌ನಲ್ಲೇ ರಿಷಬ್ ಕಾಣಿಸಿಕೊಂಡಿದ್ದರು. ಹಾಗಾಗಿ 'ಜೈ ಹನುಮಾನ್' ಸಿನಿಮಾ ಮುಗಿಯುವರೆಗೂ ಇದೇ ಲುಕ್ ಮುಂದುವರೆಸುತ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಇದೀಗ ದಿಢೀರನೆ ಟ್ರಿಮ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ.
'ಕಾಂತಾರ' ಸಕ್ಸಸ್ ಬಳಿಕ ಅದಾಗಲೇ ಒಪ್ಪಿಕೊಂಡಿದ್ದ ಸಿನಿಮಾಗಳನ್ನೆಲ್ಲಾ ಬಿಟ್ಟು ಪ್ರೀಕ್ವೆಲ್ ಚಿತ್ರದಲ್ಲಿ ತಮ್ಮನ್ನು ರಿಷಬ್ ಶೆಟ್ಟಿ ತೊಡಗಿಸಿಕೊಂಡಿದ್ದರು. ಪತ್ನಿ ಪ್ರಗತಿ ಕೂಡ ಸಾಥ್ ಕೊಟ್ಟಿದ್ದರು. ಎರಡು ವರ್ಷಗಳ ಕಾಲ ಕುಂದಾಪುರಕ್ಕೆ ತಮ್ಮ ವಾಸ್ತವ್ಯವನ್ನು ಬದಲಿಸಿಬಿಟ್ಟಿದ್ದರು. ಹೊರಗಿನ ಪ್ರಪಂಚದ ಪರಿವೇ ಇಲ್ಲದೇ ಸಿನಿಮಾ ಕೆಲಸಗಳಲ್ಲಿ ಮಗ್ನರಾಗಿದ್ದರು. ನಿರ್ದೇಶನದ ಜೊತೆಗೆ ನಾಯಕ ನಟನಾಗಿ ರಿಷಬ್ ನಟಿಸಿದ್ದರು. ಮಾಯಕಾರನಾಗಿ ಮತ್ತೊಂದು ಪಾತ್ರದಲ್ಲಿ ಅಚ್ಚರಿ ಮೂಡಿಸಿದ್ದರು. ಕಳರಿಪಯಟ್ಟು, ಕುದುರೆ ಸವಾರಿ ಕಲಿತು ಪಾತ್ರಕ್ಕಾಗಿ ತಯಾರಿ ನಡೆಸಿದ್ದರು.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ -1' ಸಿನಿಮಾ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಪರಭಾಷಿಕರು ಸಿನಿಮಾ ನೋಡಿ ರಿಷಬ್ ಪ್ರಯತ್ನಕ್ಕೆ ಬಹುಪರಾಕ್ ಎಂದಿದ್ದಾರೆ. ಮುಂದೆ ರಿಷಬ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸುವುದು ಪಕ್ಕಾ ಆಗಿದೆ. ಅದಾಗಲೇ ಒಪ್ಪಿಕೊಂಡಿದ್ದ 'ಬೆಲ್‌ಬಾಟಂ'-2 ಸಿನಿಮಾ ಶುರುವಾಗುವುದು ಅನುಮಾನ ಎನ್ನುವಂತಾಗಿದೆ.
'ಜೈ ಹನುಮಾನ್' ಜೊತೆಗೆ ಶಿವಾಜಿ ಬಯೋಪಿಕ್‌ನಲ್ಲಿ ಕೂಡ ರಿಷಬ್ ಶೆಟ್ಟಿ ನಟಿಸಬೇಕಿದೆ. ಆ ಸಿನಿಮಾ ಕೂಡ ಘೋಷಣೆ ಆಗಿದೆ. ಸದ್ಯ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮುಂದೆ 'ಕಾಂತಾರ- 2' ಸಿನಿಮಾ ಮಾಡುವುದಾಗಿ ಕೂಡ ಹೇಳಿದ್ದು ಯಾವ ಕಾಲಕ್ಕೆ ಎನ್ನುವ ಗ್ಯಾರಂಟಿ ಇಲ್ಲ. ಇನ್ನುಳಿದಂತೆ ಯಾವೆಲ್ಲಾ ಸಿನಿಮಾಗಳಲ್ಲಿ ರಿಷಬ್ ಮುಂದೆ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಕನ್ನಡದಲ್ಲೇ ಹೆಚ್ಚು ಸಿನಿಮಾ ಮಾಡಿ, ಪರಭಾಷೆಗೆ ಹೋಗಬೇಡಿ ಎನ್ನುವ ಆಗ್ರಹ ಕೂಡ ಹೆಚ್ಚಾಗಿದೆ.


Click it and Unblock the Notifications











