ರಿಷಬ್ ಶೆಟ್ಟಿ to ಧನಂಜಯ್; ಯುವ ಟೀಸರ್ ನೋಡಿದ ಸೆಲೆಬ್ರಿಟೀಸ್ ಹೇಳಿದ್ದಿಷ್ಟು
ದೊಡ್ಮನೆಯ ಮೂರನೇ ತಲೆಮಾರಿನ ಮತ್ತೊಂದು ಕುಡಿ ಯುವ ರಾಜ್‌ಕುಮಾರ್ ಆಗಮನಕ್ಕೆ ಕಾದು ಕುಳಿತಿದ್ದ ಅಭಿಮಾನಿ ಬಳಗಕ್ಕೆ ಸಂತೋಷ್ ಆನಂದ್ ರಾಮ್ ಹಾಗೂ ತಂಡ ದೊಡ್ಡ ಸರ್‌ಪ್ರೈಸ್ ಅನ್ನೇ ನೀಡಿದೆ. ಹೌದು, ಅಪ್ಪು ಅಕಾಲಿಕ ಮರಣ ಹೊಂದಿದ ಬಳಿಕ ಅಪ್ಪುವಿನ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿದ್ದ ಯುವ ರಾಜ್‌ಕುಮಾರ್ ಮೊದಲ ಚಿತ್ರದ ಅಪ್‌ಡೇಟ್‌ಗಾಗಿ ದೊಡ್ಮನೆ ಅಭಿಮಾನಿಗಳು ಕಾದಿದ್ದರು. ಕಳೆದ ವರ್ಷವೇ ಘೋಷಣೆಯಾಗಿದ್ದ ಚಿತ್ರದ ಬಗ್ಗೆ ಮಾಹಿತಿ ನೀಡಿ ಎಂದು ಕೆಲ ದಿನಗಳಿಂದ ತುಸು ದೊಡ್ಡ ಮಟ್ಟದಲ್ಲಿಯೇ ಪಟ್ಟು ಹಿಡಿದಿದ್ದರು.
ಕೊನೆಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಯುವ ರಾಜ್‌ಕುಮಾರ್ ಮೊದಲ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವುದಾಗಿ ಘೋಷಣೆಯನ್ನು ಮಾಡಿತು. ಯುವ ಅಭಿನಯಿಸಲಿರುವ ಮೊದಲ ಚಿತ್ರದ ಶೀರ್ಷಿಕೆ ಏನಿರಬಹುದು ಎಂಬ ಊಹೆಗಳು ಸಹ ಜೋರಾಗಿಯೇ ನಡೆದವು. ಜ್ವಾಲಾಮುಖಿ ಹಾಗೂ ಅಶ್ವಮೇಧ ಎಂಬ ಶೀರ್ಷಿಕೆಗಳನ್ನು ಇಡಬಹುದು ಎಂಬ ಸುದ್ದಿಯೂ ಸಹ ಹರಿದಾಡಿದ್ದವು. ಅಂತಿಮವಾಗಿ ಚಿತ್ರತಂಡ ಚಿತ್ರಕ್ಕೆ ಯುವ ಎಂಬ ಶೀರ್ಷಿಕೆ ಇಟ್ಟಿದ್ದು, ಪೋಸ್ಟರ್ ಹಾಗೂ ವಿಶೇಷ ಟೀಸರ್ ಒಂದನ್ನೂ ಸಹ ಬಿಡುಗಡೆ ಮಾಡಿದೆ.

ಡಾರ್ಕ್ ಶೇಡ್ ದೃಶ್ಯಗಳಿರುವ, ಖಡಕ್ ಡೈಲಾಗ್‌ಳನ್ನೊಳಗೊಂಡ ರಗಡ್ ಟೀಸರ್ ಅನ್ನು ಬಿಡುಗಡೆಗೊಳಿಸಿದ ಹೊಂಬಾಳೆ ಫಿಲ್ಮ್ಸ್ ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ. ಇನ್ನು ಈ ಟೀಸರ್ ಬಿಡುಗಡೆಯಾದ ಕೂಡಲೇ ವೈರಲ್ ಆಗಿದ್ದು, ಟೀಸರ್ ನೋಡಿದ ರಾಜ್ ಫ್ಯಾಮಿಲಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೇವಲ ರಾಜ್ ಫ್ಯಾಮಿಲಿ ಅಭಿಮಾನಿಗಳು ಮಾತ್ರವಲ್ಲದೇ ಚಂದನವನದ ಉಳಿದ ಸ್ಟಾರ್ ನಟರ ಅಭಿಮಾನಿಗಳೂ ಸಹ ಟೀಸರ್ ಸಖತ್ತಾಗಿ ಮೂಡಿ ಬಂದಿದೆ ಎಂದು ಮೆಚ್ಚಿಕೊಂಡಿದ್ದಾರೆ.
ಇನ್ನು ಅಭಿಮಾನಿಗಳಷ್ಟೇ ಅಲ್ಲದೇ ಚಿತ್ರರಂಗದ ಹಲವು ಸ್ಟಾರ್ ನಟರು, ನಿರ್ದೇಶಕರು, ನಟಿಯರು ಸೇರಿದಂತೆ ಹಲವಾರು ಕಲಾವಿದರು ಯುವ ರಾಜ್‌ಕುಮಾರ್ ನಟನೆಯ ಯುವ ಚಿತ್ರದ ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕೆಳಕಂಡಂತೆ ತಮ್ಮ ಪಾಲಿನ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಜತೆ ಕೈ ಜೋಡಿಸಿ ಕಾಂತಾರ ಚಿತ್ರ ಮಾಡಿ ಭಾರತ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದ ರಿಷಬ್ ಶೆಟ್ಟಿ ಯುವ ಚಿತ್ರದ ಟೀಸರ್ ಲಿಂಕ್ ಅನ್ನು ಹಂಚಿಕೊಂಡು "ಯುವ ಪರ್ವ ಆರಂಭ. ಯುವ ಚಿತ್ರತಂಡಕ್ಕೆ ಶುಭವಾಗಲಿ" ಎಂದು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಟೀಸರ್ ಲಿಂಕ್ ಜತೆಗೆ ಯುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನೂ ಸಹ ಹಂಚಿಕೊಂಡಿದ್ದಾರೆ. ಇನ್ನು ಯುವ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿರುವ ಅಜನೀಶ್ ಬಿ ಲೋಕನಾಥ್ ಸಹ ಇದೇ ರೀತಿ ಟೀಸರ್ ಲಿಂಕ್ ಹಾಗೂ ಪೋಸ್ಟರ್ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಕಾಂತಾರದಲ್ಲಿ ಲೀಲಾ ಆಗಿ ಮಿಂಚಿದ್ದ ಸಪ್ತಮಿ ಗೌಡ ಸಹ ಯುವ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದು, ಯುವ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಯುವ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಲಿಂಕ್ ಹಂಚಿಕೊಂಡು ಶುಭ ಕೋರಿದ್ದಾರೆ.
ಡಾಲಿ ಧನಂಜಯ್ ಸಹ ಸಹ ಯುವ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಲಿಂಕ್ ಹಂಚಿಕೊಂಡಿದ್ದು, ಯುವ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಸಹ ಯುವ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದು, "ಖಡಕ್ಕಾಗಿದೆ" ಯುವ ಪರ್ವ ಶುರು. ಯುವ ನಿಮಗೆ ಒಳ್ಳೆಯದಾಗಲಿ. ಸಂತೋಷ್ ಆನಂದ್‌ರಾಮ್ ಬ್ರದರ್ ಟೀಸರ್ ಸಖತ್ತಾಗಿದೆ" ಎಂದು ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ಚಿತ್ರರಂಗದ ಇನ್ನೂ ಹಲವಾರು ಸೆಲೆಬ್ರಿಟಿಗಳು ಯುವ ಚಿತ್ರದ ಬಗ್ಗೆ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.


Click it and Unblock the Notifications











