ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸ್ತೀನಿ, ರಣ್ವೀರ್‌ಗೆ ದೈವದ ಶಾಪ ಅನ್ನೋದೆಲ್ಲಾ ಅತಿಯಾಯ್ತು; ರಿಷಬ್
ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. 'ಜೈಹನುಮಾನ್' ಸಿನಿಮಾ ಚಿತ್ರೀಕರಣದ ಭರದಿಂದ ಸಾಗುತ್ತಿದೆ. ಮುಂದೆ ಶಿವಾಜಿ ಬಯೋಪಿಕ್ ಹಾಗೂ 'ಕಾಂತಾರ- 2' ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಇನ್ನು ಕನ್ನಡ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ದ ರಿಷಬ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
'ಜೈಹನುಮಾನ್' ಹಾಗೂ ಶಿವಾಜಿ ಸಿನಿಮಾಗಳ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. 'ಜೈಹನುಮಾನ್' ಚಿತ್ರದಲ್ಲಿ ರಿಷಬ್ ಲುಕ್ ಬಗ್ಗೆ ಆಕ್ರೋಶ ವ್ಯಕ್ತವಾಗಿ ದೂರ ಸಹ ದಾಖಲಾಗಿತ್ತು. ರಿಷಬ್ ಶೆಟ್ಟಿ ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗಿದ್ದಾರೆ. ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದಿಲ್ಲವೇ? ಬೆಳೆಯುವರೆಗೂ ಮಾತ್ರ ಕನ್ನಡ ಬೇಕು, ಬೆಳೆದ ಮೇಲೆ ದುಡ್ಡು ಮಾತ್ರ ಬೇಕಾ? ಎಂದು ಟೀಕೆ ವ್ಯಕ್ತವಾಗಿತ್ತು. ಎಲ್ಲದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟೀಕೆಗಳನ್ನು ನಾನು ಮುಖ್ಯವಾಗಿ ಸ್ವಾಗತಿಸುತ್ತೀನಿ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. "ಸಾವಿಂಧಾನಿಕವಾಗಿ ಪ್ರತಿಯೊಬ್ಬರಿಗೂ ಅವರದ್ದೇ ಹಕ್ಕುಗಳಿವೆ. ಸಮಾಜದ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಲು ಒಬ್ಬರಿಗೂ ಹಕ್ಕು ಇದೆ ಅಂದ್ರೆ, ಕಥೆಗಾರನಾಗಿ ಕಲಾವಿದನಾಗಿ ನನಗೂ ಹಕ್ಕು ಇದ್ದೇ ಇರುತ್ತೆ. ಅವ್ರು ಕೇಳೋದ್ರಲ್ಲಿ ತಪ್ಪಿಲ್ಲ. ಅನ್ನಿಸಿದ್ದು ಕೇಳ್ತಾರೆ, ಅದಕ್ಕೆ ಸ್ಪಷ್ಟನೆ ಕೊಡಬೇಕು. ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲದ್ದಕ್ಕೂ ಉತ್ತರ ಕೊಡುತ್ತಾ ಕೂರಲು ಸಾಧ್ಯವಿಲ್ಲ. ಕೆಲ ಪ್ರಶ್ನೆಗಳಿಗೆ ಉತ್ತರ ಇರಲ್ಲ. ನಮ್ಮ ಕೆಲಸ ಮಾಡ್ತಾ ಹೋಗಬೇಕು" ಎಂದಿದ್ದಾರೆ.
ಇದೇ ವೇಳೆ ಬಾಲಿವುಡ್ ನಟ ರಣ್‌ವೀರ್ ಸಿಂಗ್ 'ಕಾಂತಾರ' ವಿವಾದದ ಬಗ್ಗೆ ಕೂಡ ಪ್ರಶ್ನೆ ಎದುರಾಗಿತ್ತು. ರಣ್ವೀರ್ ಸಿಂಗ್ ಕರಾವಳಿ ದೈವದ ಪಾತ್ರವನ್ನ ಮಿಮಿಕ್ರಿ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ವಿವಾದ ಸೃಷ್ಟಿಯಾಗಿತ್ತು. ಭಾರೀ ಟೀಕೆ ವ್ಯಕ್ತವಾಗಿ ದೂರು ಸಹ ದಾಖಲಾಗಿತ್ತು. ಗೋವಾದಲ್ಲಿ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ರಣ್ವೀರ್ ಆ ರೀತಿ ಮಾಡಿದಾಗ ಅದು ತಪ್ಪು ಎಂದು ರಿಷಬ್ ಶೆಟ್ಟಿ ಅಲ್ಲೇ ಹೇಳಿದ್ದರು. ವಿವಾದದ ಬಳಿಕ ರಣ್ವೀರ್ ಕ್ಷಮೆ ಕೇಳಿದ್ದರು. ಇತ್ತೀಚೆಗೆ ಮೈಸೂರು ಬೆಟ್ಟಕ್ಕೂ ಭೇಟಿ ನೀಡಿ ಕ್ಷಮೆ ಯಾಚಿಸಿದ್ದರು.
ರಿಷಬ್ ಶೆಟ್ಟಿ ಮಾತನಾಡಿ "ಎಲ್ಲವೂ ನಮ್ಮ ಕೈಯಲ್ಲಿ ಇರಲ್ಲ, ಏನು ಮಾಡೋದು ಹೇಳಿ.. ಉದ್ದೇಶಪೂರ್ವಕವಾಗಿ ಅವ್ರು ಮಾಡಲಿಲ್ಲ. ಇರದ ಸೂಕ್ಷ್ಮತೆ ಅವ್ರಿಗೆ ಗೊತ್ತಾಗಲಿಲ್ಲ. ಅದು ನಮಗೆ ಗೊತ್ತಿರುತ್ತದೆ. ಅವರಿಗೆ ಅವರ ಊರಿನ ದೇವರ ಬಗ್ಗೆ ಗೊತ್ತಿರುತ್ತೆ. ನಮಗೆ ಗೊತ್ತಿರುವಂತೆ ಅವರಿಗೆ ಗೊತ್ತಿರುವುದಿಲ್ಲ" ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನಿಂದ ರಣ್ವೀರ್ ಸಿಂಗ್ ಬ್ಯಾನ್ ಮಾಡಿದ್ದಾರೆ ಎನ್ನಲಾಗಿತ್ತು. ಇದು ದೈವದ ಶಾಪ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಕೇಳಿದ್ದಕ್ಕೆ "ಅದೆಲ್ಲಾ ಅತಿಯಾಯ್ತು.. ಅದರ ಬಗ್ಗೆ ನಾನು ಮಾತಾಡಲ್ಲ, ನೋ ಕಾಮೆಂಟ್ಸ್" ಎಂದಿದ್ದಾರೆ.
'ಕಾಂತಾರ' ಬಳಿಕ ಕರಾವಳಿ ದೈವಗಳ ಸುತ್ತಾ ಸಿನಿಮಾ ನಿರ್ಮಾಣ ಹೆಚ್ಚುತ್ತಿದೆ. ಇದಕ್ಕೆ ನೀವು ಸ್ಫೂರ್ತಿ ಎನ್ನುವ ಮಾತಿಗೆ ಖಂಡಿತ ಇಲ್ಲ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ. "ಚೋಮನ ದುಡಿ ಸೇರಿದಂತೆ ಎಷ್ಟೋ ಸಿನಿಮಾಗಳಿಂದ ನಾನು ಪ್ರೇರಣೆಗೊಂಡು ಸಿನಿಮಾ ಮಾಡಿದ್ದೀನಿ. ನಾನೇ ಅದಕ್ಕೆ ಹೊಸಬನಲ್ಲ.. 60-70ರ ದಶಕದಲ್ಲೇ ಅಂತಹ ಪ್ರಯತ್ನಗಳು ನಡೆದಿತ್ತು. 'ಕಾಂತಾರ' ಸರಣಿ ಸಕ್ಸಸ್ ಬಳಿಕ ಕೂಡ ಮೊದಲ ಚಿತ್ರಕ್ಕೆ ಕೆಲಸ ಮಾಡಿದಂತೆ ಮಾಡ್ತಿದ್ದೀನಿ. ಯಾವುದೇ ಬದಲಾವಣೆ ಇಲ್ಲ. 'ಕಾಂತಾರ-2' ಯಾವಾಗ ಗೊತ್ತಿಲ್ಲ, ಮುಂದೆ ನೋಡೋಣ" ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.


Click it and Unblock the Notifications