ಕಹಿ ಸುದ್ದಿಗಳ ನಡುವೆ 'ಕಾಂತಾರ'-1 ಬಗ್ಗೆ ಅಭಿಮಾನಿಗಳಿಗೆ ಒಂದು ಸಿಹಿಸುದ್ದಿ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಚಾಪ್ಟರ್-1 ಸಿನಿಮಾ ಪದೇ ಪದೆ ಸುದ್ದಿ ಆಗುತ್ತಲೇ ಇದೆ. ಅದಕ್ಕೆ ಕಾರಣ ಚಿತ್ರಕ್ಕೆ ಎದುರಾಗುತ್ತಿರುವ ವಿಘ್ನಗಳು. ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ ಸಹ ಕಲಾವಿದರು ನಾನಾ ಕಾರಣಕ್ಕೆ ಸಾವನ್ನಪ್ಪಿದ್ದು ಬೇಸರದ ಸಂಗತಿ. ಇದೀಗ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸರ್‌ಪ್ರೈಸ್ ಸಿದ್ಧವಾಗ್ತಿದೆ.
ಅಕ್ಟೋಬರ್ 2ರಂದು 'ಕಾಂತಾರ'-1 ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ತೆರೆಗಪ್ಪಳಿಸಲಿದೆ. ಚಿತ್ರವನ್ನು ಆಸ್ಕರ್ ರೇಸ್‌ಗೆ ತೆಗೆದುಕೊಂಡು ಹೋಗಲು ನಿರ್ಮಾಪಕರು ಮುಂದಾಗಿದ್ದಾರೆ. ಚಿತ್ರದ ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ಪ್ರೀಕ್ವೆಲ್ ಬಗ್ಗೆ ಚರ್ಚೆ ನಡೆದಿತ್ತು. ಕೊನೆಗೂ ರಿಷಬ್ ಶೆಟ್ಟಿ ಆ ಸಾಹಸಕ್ಕೆ ಕೈ ಹಾಕಿದ್ದರು. ಕೊಂಚ ತಡವಾಗಿಯೇ ಸಿನಿಮಾ ಶುರುವಾಗಿತ್ತು. ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಆನೆಗುಡ್ಡೆ ದೇವಸ್ಥಾನದಲ್ಲಿ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು.
ಹಾಲಿವುಡ್ ಸಿನಿಮಾಗಳಿಗೆ ಸೆಟ್ ಹಾಕುವಂತೆ ಬಹಳ ಅದ್ಧೂರಿಯಾಗಿ ಸೆಟ್ ಹಾಕಿ 'ಕಾಂತಾರ'- 1 ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ನೂರಾರು ಸಹಕಲಾವಿದರನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು ಕೈ ಜೋಡಿಸಿದ್ದಾರೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ರಿಷಬ್ ಶೆಟ್ಟಿ ಹುಟ್ಟೂರಿನಲ್ಲೇ ಬೀಡು ಬಿಟ್ಟು ಸಿನಿಮಾ ಕೆಲಸಗಳಲ್ಲಿ ಮಗ್ನರಾಗಿದ್ದಾರೆ.
'ಕಾಂತಾರ'-1 ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಒಂದೆರಡು ಪೋಸ್ಟರ್ ಹಾಗೂ ಅನೌನ್ಸ್‌ಮೆಂಟ್ ಟೀಸರ್ ಬಿಟ್ಟರೆ ಚಿತ್ರದ ಯಾವುದೇ ಗ್ಲಿಂಪ್ಸ್ ಇನ್ನು ಹೊರಬಿದ್ದಿಲ್ಲ. ಇದೀಗ ಅದಕ್ಕೆ ಸಮಯ ಹತ್ತಿರವಾಗುತ್ತಿದೆ. ಜುಲೈ 7ರಂದು ರಿಷಬ್ ಶೆಟ್ಟಿ ಹುಟ್ಟುಹಬ್ಬ. ಅದೇ ದಿನ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗುವ ನಿರೀಕ್ಷೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಚರ್ಚೆ ಹುಟ್ಟಾಕ್ಕಿದೆ.
ಸಾಮಾನ್ಯವಾಗಿ ಸ್ಟಾರ್ ನಟರ ಹುಟ್ಟುಹಬ್ಬದಕ್ಕೆ ಅವರ ನಟಿಸುತ್ತಿರುವ ಸಿನಿಮಾ ಟೀಸರ್, ಪೋಸ್ಟರ್ ರಿಲೀಸ್ ಮಾಡುವುದು ವಾಡಿಕೆ. ಈ ಬಾರಿ ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ 'ಕಾಂತಾರ'-1 ಟೀಸರ್ ಗಿಫ್ಟ್ ಸಿಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲೇ ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಸಿಗಲಿದೆ. 'ಕಾಂತಾರ' ಚಿತ್ರದಲ್ಲಿ ಕಾಡು ಹಾಗೂ ಕರಾವಳಿ ದೈವಗಳ ಕಥೆಯನ್ನು ರಿಷಬ್ ಹೇಳಿದ್ದರು. ಸೀಕ್ವೆಲ್‌ನಲ್ಲಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಹೊಸ ಪಾತ್ರದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಚಿತ್ರದಲ್ಲಿ ನಟಿಸುತ್ತಿದ್ದ ಸಹ ಕಲಾವಿದರ ಅಗಲಿಕೆ ತಂಡವನ್ನು ಕುಗ್ಗಿಸಿರುವುದು ಸುಳ್ಳಲ್ಲ. ಅದನ್ನೆಲ್ಲಾ ಮೀರಿ ಒಳ್ಳೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ರಿಷಬ್ ಶೆಟ್ಟಿಗೆ ಬಾರೆಬೈಲ್ ಪಂಜುರ್ಲಿ ದೈವ ನೀಡಿದ ಎಚ್ಚರಿಕೆ ಗೊತ್ತೇಯಿದೆ. ಅದರ ಬೆನ್ನಲ್ಲೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ಸಹ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಪಲ್ಟಿ ಆಗಿತ್ತು. ಇತ್ತೀಚೆಗೆ ಚಿತ್ರೀಕರಣದ ವೇಳೆ ದೋಣಿ ಮುಗುಚಿಬಿದ್ದಿತ್ತು. ಒಟ್ಟಾರೆ ಒಂದಿಲ್ಲೊಂದು ಕಾರಣಕ್ಕೆ ಚಿತ್ರ ಸದ್ದು ಮಾಡ್ತಾ ಬರುವಂತಾಗಿದೆ.
'ಕಾಂತಾರ'-1 ಚಿತ್ರದಲ್ಲಿ ನಟಿಸಲು ಬಂದಿದ್ದ ಕೇರಳ ಮೂಲದ ಸಹ ನಟ ಕಪಿಲ್ ಎಂಬಾತ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಮುಳುಗು ಸಾವನ್ನಪಿದ್ದರು. ಬಳಿಕ ಚಿತ್ರದಲ್ಲಿ ನಟಿಸುತ್ತಿದ್ದ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇನ್ನು ಚಿತ್ರೀಕರಣಕ್ಕಾಗಿ ಬಂದಿದ್ದ ಕೇರಳ ಮೂಲದ ಮತ್ತೊಬ್ಬ ನಟ ವಿಜು ಹೋಂಸ್ಟೇನಲ್ಲಿ ಹೃದಯಾಘಾತದಿಂದ ಜೀವ ಬಿಟ್ಟಿದ್ದರು.


Click it and Unblock the Notifications











