ದೇಶವನ್ನು ಕೆಟ್ಟದಾಗಿ ತೋರ್ಸಿ ಪ್ರಶಸ್ತಿ ಪಡೆಯೋದಲ್ಲ, ಪಾಸಿಟಿವ್ ಆಗಿ ತೋರ್ಸಿ ಅಂತ ಅವತ್ತೇ ಹೇಳಿದ್ರು ಅಣ್ಣಾವ್ರು
ಬಾಲಿವುಡ್ ಸಿನಿಮಾಗಳ ಬಗ್ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿಕೆ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಚರ್ಚೆ ಹುಟ್ಟಾಕ್ಕಿದೆ. 'ಕಾಂತಾರ' ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಬೆನ್ನಲ್ಲೇ ರಿಷಬ್ ಮಾತುಗಳು ವೈರಲ್ ಆಗುತ್ತಿದೆ. ಕೆಲವರು ಈ ಹೇಳಿಕೆ ಬಗ್ಗೆ ಚಕಾರ ಎತ್ತಿದ್ದಾರೆ.
ಯಶಸ್ಸು ಸಿಗುತ್ತಿದ್ದಂತೆ ರಿಷಬ್ ಶೆಟ್ಟಿ ಏನೇನೋ ಮಾತನಾಡುತ್ತಿದ್ದಾರೆ. ಹಿಂಗೆಲ್ಲಾ ಮಾತನಾಡಿದ ಮೇಲೆ ಹಿಂದಿ ಬೆಲ್ಟ್‌ನಲ್ಲಿ ಅವರ ಸಿನಿಮಾಗಳು ಓಡಲ್ಲ. ಪ್ಯಾನ್ ಇಂಡಿಯಾ ಹೀರೊ ಅನ್ನುವುದನ್ನು ಅವರು ಮರೆತುಬಿಟ್ಟಿದ್ದಾರೆ, ಮುಂದೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ರಿಷಬ್ ಶೆಟ್ಟಿ ಹೇಳಿದ ಮಾತುಗಳಲ್ಲಿ ಯಾವುದೇ ತಪ್ಪಿಲ್ಲ.

ಸಾಕಷ್ಟು ಜನ ರಿಷಬ್ ಶೆಟ್ಟಿ ಪರ ನಿಂತಿದ್ದಾರೆ. ಇರುವುದನ್ನೇ ಅವರು ಹೇಳಿದ್ದಾರೆ ಎಂದು ಕೆಲ ಉತ್ತರ ಭಾರತದವರು ಮಾತನಾಡುತ್ತಿದ್ದಾರೆ. ಅಚ್ಚರಿ ಎಂದರೆ ರಿಷಬ್ ಶೆಟ್ಟಿ ಹೇಳಿದ ಮಾತುಗಳನ್ನು 55 ವರ್ಷಗಳ ಹಿಂದೆ ಡಾ. ರಾಜ್‌ಕುಮಾರ್ ಹೇಳಿದ್ದರು. ಪ್ರತಿ ಪದ, ಹೇಳಿಕೆ ಸಾರ ನೂರಕ್ಕೆ ನೂರರಷ್ಟು ಒಂದೇ ಆಗಿದೆ. ಸದ್ಯ ಆ ವೀಡಿಯೋ ಈಗ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಬಾಲಿವುಡ್ ಸಿನಿಮಾಗಳ ಬಗ್ಗೆ ರಿಷಬ್ ಶೆಟ್ಟಿ ಏನು ಹೇಳಿದ್ದರು ಎನ್ನುವುದನ್ನು ಮೊದಲು ನೋಡೋಣ. "ಬಾಲಿವುಡ್ ಚಿತ್ರಗಳಲ್ಲಿ ದೇಶದ ಬಗ್ಗೆ ತುಂಬಾ ಕೆಟ್ಟದಾಗಿ ತೋರಿಸಿ ಹೊರ ದೇಶಗಳ ಚಿತ್ರೋತ್ಸವಗಳಲ್ಲಿ ಅವಾರ್ಡ್ ಗೆದ್ದು ಬಂದಿರುವುದು ನೋಡಿದ್ದೇನೆ. ಆದರೆ ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ. ನನ್ನ ಭಾಷೆ ನನ್ನ ಹೆಮ್ಮೆ. ಹಾಗಾಗಿ ನಾನ್ಯಾಕೆ ಅದನ್ನು ಪಾಸಿಟಿವ್ ಆಗಿ ತೋರಿಸಬಾರದು. ನಮ್ಮಲ್ಲಿರುವ ವಿಚಾರಗಳನ್ನು ಪಾಸಿಟಿವ್ ಆಗಿಯೇ ತೋರಿಸಬಹುದಲ್ಲ ಎಂದುಕೊಳ್ಳುತ್ತೇನೆ" ಎಂದಿದ್ದರು.
ನಿಮಗೆ ಗೊತ್ತಾ 'ಮೇಯರ್ ಮುತ್ತಣ್ಣ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಇದೇ ಮಾತುಗಳು ಹೇಳಿದ್ದರು. ಆ ಚಿತ್ರದಲ್ಲಿ ಒಂದು ಸನ್ನಿವೇಶ ಇದೆ. ಹುಟ್ಟೂರಿನಲ್ಲಿ ಮಾಡದ ತಪ್ಪಿಗೆ ಅಪವಾದ ಹೊತ್ತು ಬೆಂಗಳೂರು ಸೇರುವ ಮುತ್ತಣ್ಣ ಮುಂದೆ ನಗರದ ಮೇಯರ್ ಆಗುವ ಕಥೆ ಆ ಚಿತ್ರದಲ್ಲಿತ್ತು. ಚಿತ್ರದಲ್ಲಿ ನಾಯಕಿ ಗೀತಾ ಪಾತ್ರದಲ್ಲಿ ಭಾರತಿ ವಿಷ್ಣುವರ್ಧನ್ ನಟಿಸಿದ್ದರು.
ಸನ್ನಿವೇಶವೊಂದರಲ್ಲಿ ಗೀತಾ ತನ್ನ ಚಿತ್ರಕಲೆಗೆ ಪ್ರಶಸ್ತಿ ಬಂದಿರುವ ಬಗ್ಗೆ ಮುತ್ತಣ್ಣನ ಬಳಿ ಕೊಚ್ಚಿಕೊಳ್ಳುತ್ತಾಳೆ. ನಮ್ಮ ಊರಿನ ಬಗ್ಗೆ ನೈಜ ಚಿತ್ರಣವನ್ನು ಚಿತ್ರಕಲೆಯಲ್ಲಿ ತೋರಿಸಿದ್ದೇನೆ. ಇದು ವಿದೇಶಗಳಲ್ಲಿ ಸುದ್ದಿಯಾಗಿದೆ ಎಂದು ಹೇಳುತ್ತಾಳೆ. ರಿಷಬ್ ಶೆಟ್ಟಿ ಈಗ ಹೇಳಿದ ಮಾತನ್ನೇ ಗೀತಾಗೆ ಮುತ್ತಣ್ಣ ಹೇಳುತ್ತಾನೆ. ನಮ್ಮ ದೇಶವನ್ನು ಕೆಟ್ಟದಾಗಿ ತೋರಿಸಿ ಪ್ರಶಸ್ತಿ ಪಡೆಯೋದಲ್ಲ ಎಂದು ತಿಳಿ ಹೇಳುತ್ತಾನೆ.
"ನಾಚಿಕೆ ಆಗಲ್ವಾ ನಿನಗೆ ಇಂತಹ ಮಾತು ಆಡುವುದಕ್ಕೆ. ನಮ್ಮ ದೇಶದಲ್ಲಿ ಇಂತಹ ದರಿದ್ರ ಇದೆ ಅಂತ ತಿಳಿಯದೇ ಇರುವ ನಮ್ಮ ಜನಕ್ಕೆ ತೋರಿಸಿ ನಮ್ಮ ಜನಗಳು ಎಚ್ಚೆತ್ತುಕೊಳ್ಳುವಂತೆ ಮಾಡಬೇಕು. ಅದು ಬಿಟ್ಟು ನಮ್ಮಲ್ಲಿರುವ ದರಿದ್ರಕ್ಕೆ ಇನ್ನಷ್ಟು ಬಣ್ಣ ಹಚ್ಚಿ ಅದನ್ನು ಹೊರ ದೇಶಕ್ಕೆ ಕಳುಹಿಸಿ ಅಲ್ಲಿ ಮೆರವಣಿಗೆ ಮಾಡಿಸಿ ಬಹುಮಾನ ಪಡೆಯುವ ನೀವು ಚಿತ್ರಗಾರರು, ಇದು ಚಿತ್ರ ಕಲೆನಾ? ತಿಪ್ಪೆಗೆ ಬಿಸಾಕು"
"ನಮ್ಮ ದೇಶದಲ್ಲಿ ಸುಂದರವಾಗಿರುವುದು ಬೇರೆ ಏನು ಇಲ್ಲ ಅಲ್ವಾ? ತೋರ್ಸೋಕೆ. ಚಾಮುಂಡಮ್ಮನ ಬೆಟ್ಟ ಇಲ್ವಾ? ಮೈಸೂರು ಅರಮನೆ ಇಲ್ವಾ? ಜೋಗದ ಜಲಪಾತ ಇಲ್ವಾ? ಮಲೆನಾಡು ಇಲ್ವಾ? ಬೇಲೂರು ಶಿಲಾಬಾಲಿಕೆ ಇಲ್ವಾ? ಇಂಥದ್ದನ್ನೆಲ್ಲಾ ಬರೆದು ಇದು ನಮ್ಮ ದೇಶ, ಇದು ನಮ್ಮ ಕಲೆ ಎಂದು ಹೊರದೇಶದವರಿಗೆ ಎದೆ ತಟ್ಟಿಕೊಂಡು ಹೇಳು" ಎಂದು ಅಣ್ಣಾವ್ರು(ಮುತ್ತಣ್ಣ) ಹೇಳಿದ್ದ ಮಾತುಗಳು ನಿಜಕ್ಕೂ ಎಲ್ಲರೂ ಒಪ್ಪುವಂಥದ್ದು.
ಬೇಲೂರಿನಲ್ಲಿ ಕೆತ್ತಿರುವುದನ್ನು ಕಾಗದದಲ್ಲಿ ಬರೆಯಲು ಜನ್ಮ ಸಾಲದು. ನಿಮ್ಮಂಥಹ ದುಡ್ಡು ಇರುವವರು, ಶ್ರೀಮಂತರು ಸುತ್ತಾಮುತ್ತಾ ಇರುವ ಬಡತನ ಕಂಡು ಕನಿಕರ ತೋರಿಸಿ ಬಡವರನ್ನು ಉದ್ಧಾರ ಮಾಡಬೇಕು, ಅದು ಬಿಟ್ಟು ಹಣ, ಹೆಸರಿಗಾಗಿ ಈ ಇಂತದ್ದನ್ನು ಹೊರದೇಶಕ್ಕೆ ಕಳುಹಿಸ್ತೀರಾ? ನಾವು ಮಾಡುವ ಕೆಲಸದಿಂದ ನಾಲ್ಕು ಜನಕ್ಕೆ ಒಳ್ಳೆಯದಾಗಬೇಕು, ಆಗಲೇ ಅದು ಕಲೆ, ಇಲ್ಲ ಕೊಲೆ ಎಂದು ಮುತ್ತಣ್ಣ ಹೇಳುವ ಮಾತುಗಳು ಇವತ್ತಿಗೂ ಪ್ರಸ್ತುತ.
'ಮೇಯರ್ ಮುತ್ತಣ್ಣ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಚಿತ್ರಕಲೆ ಬಗ್ಗೆ ಹೇಳಿದ್ದ ಮಾತುಗಳನ್ನೇ ಈಗ ರಿಷಬ್ ಶೆಟ್ಟಿ ಬಾಲಿವುಡ್ ಸಿನಿಮಾಗಳ ಬಗ್ಗೆ ಹೇಳಿದ್ದಾರೆ. ಮುತ್ತಣ್ಣ ಶ್ರೀಮಂತರ ಚಿತ್ರಕಲೆ ಬಗ್ಗೆ ಮಾತನಾಡಿದರೆ ರಿಷಬ್ ಕೆಲ ಹಿಂದಿ ಚಿತ್ರಗಳ ಕುರಿತು ಮಾತನಾಡಿದ್ದಾರೆ. 'ಮೇಯರ್ ಮುತ್ತಣ್ಣ'ನಿಂದ ಅರ್ಥಾತ್ ಅಣ್ಣಾವ್ರರಿಂದ ನಿರ್ದೇಶಕ ಸಿದ್ಧಲಿಂಗಯ್ಯ ಇದನ್ನು ಅವತ್ತೇ ಹೇಳಿಸಿದ್ದರು ಎನ್ನುವುದು ವಿಶೇಷ. ಇವತ್ತಿಗೂ ಕೆಲವರು ದೇಶದ ಬಗ್ಗೆ ನೆಗೆಟಿವ್ ಆಗಿಯೇ ಮಾತನಾಡುತ್ತಿದ್ದಾರೆ.


Click it and Unblock the Notifications











