ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದ ಹೊಂಬಾಳೆ; ಕೆಜಿಎಫ್ ದಾಖಲೆ ಹೊಡೆದುರುಳಿಸಿದ 'ಕಾಂತಾರ'!
ರಿಷಬ್ ಶೆಟ್ಟಿ ನಟಿಸಿರುವ ಹಾಗೂ ನಿರ್ದೇಶಿಸಿರುವ ಕಾಂತಾರ ಚಿತ್ರ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಕಾಂತಾರ ಚಿತ್ರ ಈಗ ತೆಲುಗು, ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗುವುದರ ಮೂಲಕ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿದೆ.
ಚಿತ್ರವನ್ನು ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಸಿನಿಪ್ರೇಕ್ಷಕರು ಸಹ ವೀಕ್ಷಿಸಿ ಕೊಂಡಾಡುತ್ತಿದ್ದಾರೆ. ಕೇವಲ ಸಿನಿಪ್ರೇಕ್ಷಕರು ಮಾತ್ರವಲ್ಲದೆ ಸ್ಞಾರ್ ನಟರು ಹಾಗೂ ನಟಿಯರು ಚಿತ್ರವನ್ನು ವೀಕ್ಷಿಸಿ ರಿಶಬ್ ಶೆಟ್ಟಿಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಹೀಗೆ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಕಾಂತಾರ ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಸಹ ಅಬ್ಬರಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕಾಂತಾರ ಅಬ್ಬರ ಜೋರಾಗಿದೆ. ಚಿತ್ರ ಎಲ್ಲೆಡೆ ಉತ್ತಮ ಗಳಿಕೆ ಕಾಣುತ್ತಿದ್ದು, ಹಳೆಯ ದಾಖಲೆಗಳನ್ನು ಹೊಡೆದುರುಳಿಸಿದೆ. ಇನ್ನೂರು ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಡುತ್ತಿರುವ ಕಾಂತಾರ ಚಿತ್ರ ಅಮೇರಿಕಾದಲ್ಲಿಯೂ ದೊಡ್ಡ ಕಲೆಕ್ಷನ್ ಮಾಡುತ್ತಿದೆ.
ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ ಕೆಜಿಎಫ್ 1 ದಾಖಲೆ ಮುರಿದ ಕಾಂತಾರ
ಅಮೇರಿಕಾದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಾಂತಾರ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಯುಎಸ್ ನೆಲದಲ್ಲಿ ನೆಲೆಗೊಂಡಿರುವ ಕನ್ನಡಿಗರು ಕಾಂತಾರ ಚಿತ್ರವನ್ನು ಪದೇಪದೇ ವೀಕ್ಷಿಸುತ್ತಿದ್ದಾರೆ. ಹೀಗೆ ದೊಡ್ಡ ಮಟ್ಟದ ಗೆಲುವು ಕಂಡಿರುವ ಕಾಂತಾರ ಅಮೇರಿಕ ಗಲ್ಲಾಪೆಟ್ಟಿಗೆಯಲ್ಲಿ 1 ಮಿಲಿಯನ್ ಡಾಲರ್ ಕಲೆಕ್ಷನ್ ಅನ್ನು ಮಾಡಿದೆ. ಅಂದರೆ 8.2 ಕೋಟಿ ರೂಪಾಯಿಗಳನ್ನು ಕಾಂತಾರ ಅಮೆರಿಕಾ ನೆಲದಲ್ಲಿ ಸಂಪಾದಿಸಿದೆ. ಈ ಮೂಲಕ ಕಾಂತಾರ ಕೆಜಿಎಫ್ ಚಾಪ್ಟರ್ 1 ಗಳಿಕೆಯನ್ನು ಹಿಂದಿಕ್ಕಿದೆ.

ಕೆಜಿಎಫ್ 1 ಎಷ್ಟು ಗಳಿಸಿತ್ತು?
ಅಮೆರಿಕ ನೆಲದಲ್ಲಿ ಯಶ್ ಅಭಿನಯದ ಹಾಗೂ ಇದೇ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ ಕೆಜಿಎಫ್ ಚಾಪ್ಟರ್ 1 805637 ಡಾಲರ್ ಗಳಿಸಿತ್ತು. ಇದೀಗ ಕಾಂತಾರ ಹತ್ತು ಲಕ್ಷ ಡಾಲರ್ ಗಳಿಸಿದೆ. ಇನ್ನೂ ಸಹ ಪ್ರದರ್ಶನಗೊಳ್ಳುತ್ತಿರುವ ಕಾಂತಾರ ಡಬ್ ಆಗಿ ಇತರೆ ಭಾಷೆಗಳಲ್ಲಿಯೂ ಅಮೆರಿಕಾ ನೆಲದಲ್ಲಿ ಬಿಡುಗಡೆಯಾದ ನಂತರ ಕಲೆಕ್ಷನ್ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಸದ್ಯ ಅಮೆರಿಕಾ ನೆಲದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರಗಳ ಪೈಕಿ ಕಾಂತಾರ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ಅಮೆರಿಕಾದಲ್ಲಿ ಅತಿಹೆಚ್ಚು ಗಳಿಸಿದ ಟಾಪ್ 10 ಚಿತ್ರಗಳು
ಕೆಜಿಎಫ್ ಚಾಪ್ಟರ್ 2: 7,418,131 ಡಾಲರ್
ಕಾಂತಾರ : 1 ಮಿಲಿಯನ್ ಡಾಲರ್
ಕೆಜಿಎಫ್ ಚಾಪ್ಟರ್ 1: 805,637 ಡಾಲರ್
ರಂಗಿತರಂಗ: 315,098 ಡಾಲರ್
ಕಿರಿಕ್ ಪಾರ್ಟಿ: 270,568 ಡಾಲರ್
ವಿಕ್ರಾಂತ್ ರೋಣ: 182,091 777 ಡಾಲರ್
ಚಾರ್ಲಿ: 171,417 ಡಾಲರ್
ಗೋಧಿ ಬಣ್ಣ ಸಾಧಾರಣ ಮೈಕಟ್ಟು: 170,863 ಡಾಲರ್
ಜೇಮ್ಸ್: 126,118 ಡಾಲರ್
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: 120,697 ಡಾಲರ್

ಚಿನ್ನದ ಬೆಳೆ ಬೆಳೆದ ಹೊಂಬಾಳೆ
ಇನ್ನು ಅಮೆರಿಕಾ ನೆಲದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರಗಳ ಟಾಪ್ 10 ಪಟ್ಟಿಯ ಮೊದಲ 3 ಸ್ಥಾನಗಳನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರಗಳೇ ಪಡೆದುಕೊಂಡಿವೆ. ಅದರಲ್ಲಿಯೂ ಕೆಜಿಎಫ್ ಚಾಪ್ಟರ್ 2 ಮುರಿಯಲು ಬಲು ಕಠಿಣವಾದಂತ ದಾಖಲೆಯನ್ನು ಅಮೇರಿಕಾ ಗಲ್ಲಾಪೆಟ್ಟಿಗೆಯಲ್ಲಿ ಬರೆದಿದೆ. ಹೀಗೆ ತನ್ನ ನಿರ್ಮಾಣದ ಸಂಸ್ಥೆಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದ್ದು ಹೊಂಬಾಳೆ ಫಿಲ್ಮ್ಸ್ ಚಿನ್ನದ ಬೆಲೆ ಬೆಳೆದಿದೆ.


Click it and Unblock the Notifications











