ಆರೇಳು ವರ್ಷಗಳ ಹಿಂದೆ ಇದೇ ಉದ್ಯೋಗ ಮಾಡುತ್ತಿದ್ದರಂತೆ ನಿರ್ದೇಶಕ ರಿಷಬ್ ಶೆಟ್ಟಿ
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಸದ್ಯ ನಟನೆ ಮತ್ತು ನಿರ್ದೇಶನ ಅಂತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶನಕ್ಕಿಂತ ಹೆಚ್ಚಾಗಿ ನಟನೆಯಲ್ಲಿ ತೊಡಗಿಕೊಂಡಿರುವ ರಿಷಬ್ ಸದ್ಯ 2019ರ ಸೂಪರ್ ಹಿಟ್ ಬೆಲ್ ಬಾಟಂ ಸಿನಿಮಾದ ಸೀಕ್ವೆಲ್ ನಲ್ಲಿ ಬ್ಯುಸಿಯಾಗಲಿದ್ದಾರೆ.
ಈ ನಡುವೆ ರಿಷಬ್ ಶೆಟ್ಟಿ ತಮ್ಮ ಹಳೆಯ ಉದ್ಯೋವನ್ನು ನೆನಪಿಸಿಕೊಂಡಿದ್ದಾರೆ. ಹೌದು ರಿಷಬ್ ಶೆಟ್ಟಿ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸುವ ಮೊದಲು ವಾಟರ್ ಕ್ಯಾನ್ ಸಪ್ಲೈ ಉದ್ಯೋಗ ಮಾಡುತ್ತಿದ್ದರಂತೆ. ವಾಟರ್ ಕ್ಯಾನ್ ಭುಜದ ಮೇಲೆ ಹೊತ್ತುಕೊಂಡು ತನ್ನ ಹಳೆಯ ಉದ್ಯೋಗವಿದು, ಎಂದು ರಿಷಬ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಸದ್ಯ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರೀಕರಣದಲ್ಲಿ ಸೆಟ್ ನಲ್ಲಿ ರಿಷಬ್ ವಾಟರ್ ಕ್ಯಾನ್ ಹೊತ್ತಿದ್ದಾರೆ. 'ಈಗೊಂದು ಆರೇಳು ವರ್ಷದ ಹಿಂದೆ ಇದೇ ನಮ್ ಉದ್ಯೋಗವಾಗಿತ್ತು' ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ.

ರಿಷಬ್ ಶೆಟ್ಟಿ ಪೋಸ್ಟ್ ಗೆ ನಿರ್ಮಾಪಕ ಕಾರ್ತಿಕ್ ಗೌಡ ಪ್ರತಿಕ್ರಿಯೆ ನೀಡಿ, ನಮಗೊಂದು 50 ಕೇಸ್ ಹಾಕಿ ಎಂದು ತಮಾಷೆ ಮಾಡಿದ್ದಾರೆ. ಕಾರ್ತಿಕ್ ಗೌಡಗೆ ಉತ್ತರ ನೀಡಿರುವ ರಿಷಬ್ ದಯವಿಟ್ಟು ವಿಳಾಸ ತಿಳಿಸಿ ಎಂದಿದ್ದಾರೆ. ಇಬ್ಬರ ಸಾಮಾಜಿಕ ಜಾಲತಾಣದಲ್ಲಿ ವಾಟರ್ ಸಪ್ಲೈ ಬಗ್ಗೆ ಮಾತನಾಡಿದ್ದು ನೋಡಿ ಅಭಿಮಾನಿಗಳು ಸಹ ಕೇಳುತ್ತಿದ್ದಾರೆ.
ಅಲ್ಲದೆ ಅಂದು ಪಟ್ಟ, ಕಷ್ಟ, ಶ್ರಮಕ್ಕೆ ಇಂದು ಉತ್ತಮ ಪ್ರತಿಫಲ ಸಿಕ್ಕಿದೆ ಎಂದು ಕಾಮೆಂಟ್ ಮಾಡಿ, ರಿಷಬ್ ಶೆಟ್ಟಿಯನ್ನು ಹಾಡಿಹೊಗಳುತ್ತಿದ್ದಾರೆ. ಅಂದಹಾಗೆ ರಿಷಬ್ ಶೆಟ್ಟಿ ಕೊನೆಯದಾಗಿ ಕಥಾ ಸಂಗಮ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ 8 ರಿಂದ 10 ಸಿನಿಮಾಗಳು ರಿಷಬ್ ಶೆಟ್ಟಿ ಬಳಿ ಇವೆ. ಅಭಿನಯದ ಜೊತೆಗೆ ರುದ್ರಪ್ರಯಾಗ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.


Click it and Unblock the Notifications











