ರಕ್ಷಿತ್ ಚಿತ್ರದಿಂದ ಹೊರನಡೆದ ರಿಷಬ್ ಶೆಟ್ಟಿ 'ಕಾಂತಾರ 2' ಚಿತ್ರದಲ್ಲಿ ಬ್ಯುಸಿ ಕಣ್ರಿ ಎಂದ ದಿಗಂತ್!
ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಹಲವು ವರ್ಷಗಳ ಗೆಳೆಯರು. ಸದ್ಯ ಚಂದನವನದ ಸ್ಟಾರ್ ನಟರಾಗಿ ಹಾಗೂ ಬಹು ಬೇಡಿಕೆಯ ನಿರ್ದೇಶಕರಾಗಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ಈ ಇಬ್ಬರೂ ಹೆಸರು ಮಾಡುವುದಕ್ಕೂ ಮುಂಚಿನಿಂದಲೂ ಕುಚಿಕುಗಳಾಗಿದ್ದವರು.
2010ರಲ್ಲಿ ತೆರೆಕಂಡಿದ್ದ 'ನಮ್ ಏರಿಯಾಲ್ ಒಂದ್ ದಿನ' ಎಂಬ ಚಿತ್ರದ ಮೂಲಕ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರೂ ಸಹ ಚಿತ್ರರಂಗ ಪ್ರವೇಶಿಸಿದ್ದರು. ನಂತರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ನಟಿಸಿ ಬ್ರೇಕ್ ಪಡೆದ ರಕ್ಷಿತ್ ಶೆಟ್ಟಿ ತಾವೇ ನಿರ್ದೇಶಿಸಿ ನಟಿಸಿದ್ದ ಉಳಿದವರು ಕಂಡಂತೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನೀಡಿದ್ದರು.
ಇದಾದ ಬಳಿಕ ನಿರ್ದೇಶಕನಾಗಿ ಮೊದಲ ಚಿತ್ರ ಮಾಡಿದ ರಿಷಬ್ ಶೆಟ್ಟಿ ರಿಕ್ಕಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯನ್ನು ನಾಯಕನ್ನಾಗಿ ಆಯ್ಕೆ ಮಾಡಿಕೊಂಡರು. ಅಷ್ಟೇ ಅಲ್ಲದೇ ಇದೇ ಕಾಂಬಿನೇಷನ್‌ನಲ್ಲಿ ಮೂಡಿಬಂದ ಮತ್ತೊಂದು ಚಿತ್ರ ಕಿರಿಕ್ ಪಾರ್ಟಿ ಐವತ್ತು ಕೋಟಿ ಕ್ಲಬ್ ಸೇರಿ ಗಲ್ಲಾಪೆಟ್ಟಿಗೆ ಲೂಟಿ ಮಾಡಿತ್ತು. ಹೀಗೆ ತಾವು ಕೆಲಸ ನಿರ್ವಹಿಸಿದ ಬಹುತೇಕ ಎಲ್ಲಾ ಯೋಜನೆಗಳಲ್ಲೂ ಒಬ್ಬರನ್ನೊಬ್ಬರು ಆಯ್ಕೆ ಮಾಡಿಕೊಳ್ಳುತ್ತಿದ್ದ ಈ ಜೋಡಿ ಬ್ಯಾಚುಲರ್ ಪಾರ್ಟಿ ಎಂಬ ಮತ್ತೊಂದು ಚಿತ್ರಕ್ಕೆ ಕೈ ಜೋಡಿಸಿತ್ತು. ಹೌದು, ರಕ್ಷಿತ್ ಶೆಟ್ಟಿ ನಿರ್ಮಾಣದ ಮುಂದಿನ ಚಿತ್ರ ಬ್ಯಾಚುಲರ್ ಪಾರ್ಟಿಯಲ್ಲಿ ರಿಷಬ್ ಶೆಟ್ಟಿ ಅಭಿನಯಿಸಲಿದ್ದಾರೆ ಎಂದು ಚಿತ್ರದ ಪೋಸ್ಟರ್ ಕೂಡ ಘೋಷಣೆಯಾಗಿತ್ತು. ಆದರೆ ಇದೀಗ ದಿಗಂತ್ ನೀಡಿರುವ ಹೇಳಿಕೆ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿದೆ.

ರಿಷಬ್ ಬ್ಯಾಚುಲರ್ ಪಾರ್ಟಿ ಮಾಡ್ತಾ ಇಲ್ಲ
'ನೇಮ್ ಈಸ್ ಮಧು' ಎಂಬ ಕನ್ನಡದ ಯುಟ್ಯೂಬರ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದ ನಟ ದಿಗಂತ್ ಮಂಚಾಲೆ ತಮ್ಮ ಮುಂದಿನ ಚಿತ್ರ ಬ್ಯಾಚುಲರ್ ಪಾರ್ಟಿ ಬಗ್ಗೆ ಮಾತನಾಡಿದರು. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆ ಕೂಡ ಎದುರಾಯಿತು. ಇದಕ್ಕೆ ಉತ್ತರಿಸಿದ ದಿಗಂತ್ ಮಂಚಾಲೆ "ಇಲ್ಲಪ್ಪ, ರಿಷಬ್ ಮಾಡ್ತಾ ಇಲ್ಲಪ್ಪ. ಎಲ್ಲಿದ್ದಾರೆ ಗೊತ್ತಿಲ್ಲ. ಬ್ಯಾಚುಲರ್ ಪಾರ್ಟಿ ಮಾಡಬೇಕಿತ್ತು. ಆದರೆ ಇವಾಗ ಎಲ್ಲಿ ರಿಷಬ್ ಅವರು ಕಾಣಿಸ್ತಾನೇ ಇಲ್ಲ" ಎಂದು ಹೇಳಿಕೆ ನೀಡಿ ರಿಷಬ್ ಶೆಟ್ಟಿ ಬ್ಯಾಚುಲರ್ ಪಾರ್ಟಿಯಲ್ಲಿ ನಟಿಸುತ್ತಿಲ್ಲ ಎಂಬುದನ್ನು ತಿಳಿಸಿದರು.

ಕಾಂತಾರ 2 ಚಿತ್ರದಲ್ಲಿ ರಿಷಬ್ ಬ್ಯುಸಿ
ಇನ್ನೂ ಮುಂದುವರಿದು ಮಾತನಾಡಿದ ದಿಗಂತ್ ಕಾಂತಾರ ನಂತರ ಸದ್ಯ ಕಾಂತಾರ 2 ಚಿತ್ರದಲ್ಲಿ ರಿಷಬ್ ಶೆಟ್ಟಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಚಿತ್ರಕತೆಯನ್ನೂ ಸಹ ಬರೆಯಲು ಆರಂಭಿಸಿದ್ದಾರೆ ಹೀಗಾಗಿ ಅವರು ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ತಿಳಸಿದರು ಹಾಗೂ ರಿಷಬ್ ಶೆಟ್ಟಿ ಬದಲಾಗಿ ಬೇರೆ ನಟನನ್ನು ಆಯ್ಕೆ ಮಾಡಿಕೊಳ್ಳುವ ಕೆಲಸಗಳೂ ಸಹ ಶುರುವಾಗಿವೆ ಎಂದು ದಿಗಂತ್ ತಿಳಿಸಿದರು.

ಕಾಂತಾರ ಹೊಗಳಿದ ದಿಗಂತ್
ಇನ್ನು ಇದೇ ಸಂದರ್ಭದಲ್ಲಿ ಕಾಂತಾರ ಚಿತ್ರ ವೀಕ್ಷಿಸಿದ್ದರ ಕುರಿತು ಮಾತನಾಡಿದ ದಿಗಂತ್ ಚಿತ್ರ ತುಂಬಾ ಚೆನ್ನಾಗಿದೆ, ಇಡೀ ಭಾರತವೇ ಮಾತನಾಡುವಂತಹ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದಾರೆ ಎಂದು ಹೊಗಳಿದರು.

ಗೊಂದಲ ಮೂಡಿಸಿದ ಸುದ್ದಿ
ಇನ್ನು ರಿಷಬ್ ಶೆಟ್ಟಿ ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿಯಿಂದ ಹೊರನಡೆದಿರುವ ಸುದ್ದಿ ಕೇಳಿ ವೀಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ 2 ಚಿತ್ರಕ್ಕಾಗಿ ಕೆಲಸ ಆರಂಭಿಸಿದ್ದಾರೆ ಎಂದು ಖುಷಿ ಪಡಬೇಕಾ ಅಥವಾ ಈ ಚಿತ್ರದಿಂದ ಹೊರನಡೆದು ಬೇಸರ ಮಾಡಿದರು ಎಂದುಕೊಳ್ಳಬೇಕಾ ಎಂದುಕೊಳ್ಳುತ್ತಿದ್ದಾರೆ. ಇದೆಲ್ಲದ್ದರ ನಡುವೆ ರಿಷಬ್ ಅವರ ಈ ನಡೆ ರಕ್ಷಿತ್ ಶೆಟ್ಟಿ ಜತೆಗಿನ ಸ್ನೇಹಕ್ಕೆ ಮುಳುವಾಗದಿರಲಿ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











