ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್
ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗಿರುವ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್‌ನಲ್ಲಿ ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಪ್ರಶಸ್ತಿಯೊಂದಕ್ಕೆ ಭಾಜನರಾಗಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಕಾಡೆಮಿ ಭಾರತ ಚಿತ್ರರಂಗದ ಒಳ್ಳೊಳ್ಳೆ ಚಿತ್ರಗಳು, ಒಳ್ಳೆಯ ನಟರನ್ನು, ಚಿತ್ರ ತಂತ್ರಜ್ಞರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಅವರ ಕೆಲಸಕ್ಕೆ ಶ್ಲಾಘನೆ ನೀಡಲು ನಡೆಸುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದಾಗಿದೆ.
ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮ ಇದೇ ತಿಂಗಳ 20ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೊಟೇಲ್‌ನಲ್ಲಿ ನಡೆಯಲಿದೆ. ಇದರಲ್ಲಿ ರಿಷಬ್ ಶೆಟ್ಟಿ ಅವರಿಗೆ 'ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್' ಎಂಬ ಪ್ರಶಸ್ತಿ ಲಭಿಸಿದೆ. ಈ ಮೂಲಕ ರಿಷಬ್ ಶೆಟ್ಟಿ ಅತಿಹೆಚ್ಚು ಭರವಸೆ ಮೂಡಿಸಿದ ನಟ ಎಂಬ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಅದ್ಭುತ ನಟನೆಗೆ ಈ ಪ್ರಶಸ್ತಿ ಲಭಿಸಿದ್ದು, ರಿಷಬ್ ಶೆಟ್ಟಿ ಶ್ರಮಕ್ಕೆ ಮತ್ತೊಂದು ಮಹಾ ಮನ್ನಣೆ ಸಿಕ್ಕಂತಾಗಿದೆ. ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್ ಪ್ರಶಸ್ತಿ ರಿಷಬ್ ಶೆಟ್ಟಿ ಪಾಲಾಗಿದ್ದು, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ನಟಿ, ಅತ್ಯುತ್ತಮ ಚಿತ್ರಗಳ ಕೆಟಗರಿ ಅಡಿಯಲ್ಲಿ ಯಾರು ಪ್ರಶಸ್ತಿಗಳನ್ನು ಪಡೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಅಣ್ಣಾವ್ರಿಗೆ ಬಂದಿದ್ದ ಪ್ರಶಸ್ತಿಯಲ್ಲ, ಗೊಂದಲ ಬೇಡ
ಇನ್ನು ಕನ್ನಡ ಚಲನಚಿತ್ರರಂಗದ ವರನಟ ಡಾ ರಾಜ್‌ಕುಮಾರ್ ಅವರಿಗೆ ನೀಡಲಾಗಿದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಚಿತ್ರರಂಗದ ಕಲಾವಿದರ ಶ್ರಮವನ್ನು ಗುರುತಿಸಿ ಹುರಿದುಂಬಿಸಲು ನೀಡುವ ಈ ಪ್ರಶಸ್ತಿಗಳಿಗೂ ಬೃಹತ್ ವ್ಯತ್ಯಾಸವಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಹಾ ಸಾಧನೆ ಮಾಡಿದ ಸಾಧಕರಿಗೆ ವರ್ಷಕ್ಕೊಮ್ಮೆ ನೀಡಿದರೆ, ಈ ದಾದಾ ಸಾಹೇಬ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಅನ್ನು ಅಕಾಡೆಮಿ ಆಯಾ ವರ್ಷ ತಮ್ಮ ಉತ್ತಮ ಚಿತ್ರಗಳ ಮೂಲಕ ಮಿಂಚಿದ ಕಲಾವಿದರಿಗೆ ನೀಡಲಾಗುತ್ತದೆ.

ಯಶ್‌ಗೂ ಬಂದಿತ್ತು ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್
ಇನ್ನು ಇದೇ ರೀತಿ 2019ರಲ್ಲಿ ದಾದಾ ಸಾಹೇಬ್ ಸೌತ್ ಫೌಂಡೇಷನ್ ಅವಾರ್ಡ್ ಎಂಬ ಕಾರ್ಯಕ್ರಮವನ್ನು ನಡೆಸಿದ್ದಾಗ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದರು. ಬಳಿಕ ಸೈಮಾ, ಫಿಲ್ಮ್‌ಫೇರ್ ಅವಾರ್ಡ್ಸ್ ರೀತಿ ದಾದಾ ಸಾಹೇಬ್ ಪ್ರಶಸ್ತಿಯನ್ನು ದಕ್ಷಿಣ ಭಾರತದ ಎಲ್ಲಾ ಇಂಡಸ್ಟ್ರಿಗಳಿಗೂ ಪ್ರತ್ಯೇಕವಾಗಿ ನೀಡಿದ್ದಾಗ ನಟ ಶಿವ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ ಸಹ ಉತ್ತಮ ನಟರು ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ದಾದಾ ಸಾಹೇಬ್ ಪಡೆದಿರುವುದು ಇಬ್ಬರೇ ಕನ್ನಡಿಗರು
ಮೇಲೆ ಹೇಳಿದಂತೆ ತಮ್ಮ ಸಾಧನೆಯನ್ನು ಗುರುತಿಸಿ ಪ್ರತಿ ವರ್ಷ ಒಬ್ಬೊಬ್ಬ ಕಲಾವಿದನಿಗೆ ನೀಡಲಾಗುವ ಪ್ರತಿಷ್ಠಿತ ದಾದಾ ಸಾಹೇಬ್ ಪ್ರಶಸ್ತಿಯನ್ನು ಇಲ್ಲಿಯವರೆಗೂ ಇಬ್ಬರು ಸಾಧಕರು ಪಡೆದುಕೊಂಡಿದ್ದಾರೆ. 1995ರಲ್ಲಿ ಡಾ ರಾಜ್‌ಕುಮಾರ್ ಈ ಪ್ರಶಸ್ತಿಯನ್ನು ಪಡೆದುಕೊಂಡರೆ, 2008ರಲ್ಲಿ ಕರ್ನಾಟಕ ಮೂಲದ ಛಾಯಾಗ್ರಾಹಕ ವಿ ಕೆ ಮೂರ್ತಿ ಹಿಂದಿ ಚಿತ್ರರಂಗದಲ್ಲಿನ ತಮ್ಮ ಸಾಧನೆಗಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.


Click it and Unblock the Notifications











