Kantara-1 Advance Booking: 'ಕಾಂತಾರ-1' ಟಿಕೆಟ್ ಬುಕ್ಕಿಂಗ್ ಶುರು; ಎಲ್ಲೆಲ್ಲಿ ದರ ಎಷ್ಟಿದೆ?
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ-1' ಸಿನಿಮಾ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಸದ್ಯಕ್ಕೆ ಮೊದಲ ದಿನ(ಅಕ್ಟೋಬರ್ 2)ದ ಶೋಗಳ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಬೆಳಗಿನ ಜಾವ 6 ಗಂಟೆಗೆ ಮೊದಲ ಪ್ರದರ್ಶನ ಶುರುವಾಗಲಿದೆ. ಸಿನಿರಸಿಕರು ಟಿಕೆಟ್ ಬುಕ್ ಮಾಡಲು ಮುಗಿ ಬಿದ್ದಿದ್ದಾರೆ.
ಸಿಂಗಲ್ ಸ್ಕ್ರೀನ್ಸ್ ಜೊತೆಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಊಹಿಸಿದಂತೆ ಟಿಕೆಟ್ ದರ ಹೆಚ್ಚಿಸಲಾಗಿದೆ. 200 ರೂ.ನಿಂದ 1000 ರೂ.ವರೆಗೆ ಟಿಕೆಟ್ ದರ ಫಿಕ್ಸ್ ಆಗಿರುವುದನ್ನು ನೋಡಬಹುದು. ಇನ್ನು ಅಕ್ಟೋಬರ್ 1ರಂದು ರಾತ್ರಿಯೇ ಪೇಯ್ಡ್ ಪ್ರೀಮಿಯರ್ ಶೋಗಳು ಆರಂಭವಾಗುವ ನಿರೀಕ್ಷೆಯಿದೆ. ಅದರ ಬುಕ್ಕಿಂಗ್ ಕೂಡ ಸದ್ಯಕ್ಕೆ ಶುರುವಾಗಿಲ್ಲ. ಇದಕ್ಕಿಂತಲೂ ಹೆಚ್ಚು ದರಕ್ಕೆ ಪ್ರೀಮಿಯರ್ ಶೋ ಟಿಕೆಟ್ ರೇಟ್ ಫಿಕ್ಸ್ ಆಗುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರಿನಲ್ಲಿ ಜೆಪಿ ನಗರದ ಸಿದ್ದೇಶ್ವರ- ಸಿದ್ದಲಿಂಗೇಶ್ವರ, ವೆಗಾ ಸಿಟಿ ಮಾಲ್, ಒರಾಯನ್ ಮಾಲ್, ಮಾಗಡಿ ರಸ್ತೆಯ ವೀರೇಶ್, ಎಂಜಿ ರಸ್ತೆಯ ಸ್ವಾಗತ್ ಶಂಕರ್ ನಾಗ್ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 400 ರಿಂದ 500 ರೂ.ವರೆಗೆ ಟಿಕೆಟ್ ದರ ಇದೆ. ಮಲ್ಟಿಪ್ಲೆಕ್ಸ್ ಗೋಲ್ಡ್ ಕ್ಲಾಸ್ ಸ್ಕ್ರೀನ್‌ಗಳಲ್ಲಿ 900 ರೂ. ಹಾಗೂ 1000 ರೂ. ಕೊಟ್ಟು ಟಿಕೆಟ್ ಬುಕ್ ಮಾಡಬಹುದು.
ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ 6 ಗಂಟೆ ಶೋ ಟಿಕೆಟ್ ದರ ಮಾತ್ರ ಜಾಸ್ತಿಯಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಇಡೀ ದಿನದ ಟಿಕೆಟ್ ದರ ಹೆಚ್ಚಾಗಿದೆ. ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಾಗಿದೆ. ಇದು ಪ್ರೇಕ್ಷಕರಿಗೆ ಭಾರೀ ಹೊರೆಯಾಗಿದೆ ಎನ್ನುವ ಕೂಗು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಟಿಕೆಟ್ ದರ ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಆದರೆ ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಗೋಲ್ಡ್ ಕ್ಲಾಸ್ ಬಿಟ್ಟು ಇನ್ನುಳಿದ ಸ್ಕ್ರೀನ್‌ಗಳಲ್ಲಿ ಟಿಕೆಟ್ ದರ 200 ರೂ. ಮೀರಬಾರದು ಎಂದು ಸರ್ಕಾರ ಮಿತಿ ಹೇರಿತ್ತು.

ಸೆಪ್ಟೆಂಬರ್ 13ರಂದು ಸರ್ಕಾರದ ನಿಯಮ ಜಾರಿಗೆ ಬಂದಿತ್ತು. ಆದರೆ 10 ದಿನಗಳ ಬಳಿಕ ಹೈಕೋರ್ಟ್ ಅದಕ್ಕೆ ತಡೆ ಬ್ರೇಕ್ ಹಾಕಿತ್ತು. ಹಾಗಾಗಿ ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಟಿಕೆಟ್ ದರ ಹೆಚ್ಚಿಸಿದ್ದರು. ಈಗ 'ಕಾಂತಾರ -1' ಚಿತ್ರಕ್ಕೂ ಅದರ ಲಾಭ ಸಿಗುತ್ತಿದೆ. ಟಿಕೆಟ್ ಬುಕ್ಕಿಂಗ್ ಜೋರಾಗಿದ್ದು ಬರೀ ಬೆಂಗಳೂರಿನಲ್ಲೇ ಕೇವಲ 35 ನಿಮಿಷಗಳಲ್ಲಿ 10 ಸಾವಿರ ಟಿಕೆಟ್ ಮಾರಾಟವಾಗಿತ್ತು. ಇದಕ್ಕೂ ಮುನ್ನ ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ 10 ಸಾವಿರ ಟಿಕೆಟ್ 37 ನಿಮಿಷಗಳಲ್ಲಿ ಬುಕ್ ಆಗಿತ್ತು.
ಸಾಕಷ್ಟು ಜನ ಬುಧವಾರ ರಾತ್ರಿ ಪೇಯ್ಡ್ ಪ್ರೀಮಿಯರ್ ಶೋಗಳ ಟಿಕೆಟ್ ಬುಕ್ಕಿಂಗ್‌ಗಾಗಿ ಕಾಯುತ್ತಿದ್ದಾರೆ. ಹಾಗಾಗಿ ಟ್ರೆಂಡ್ ಕೊಂಚ ಕಮ್ಮಿ ಇರುವಂತೆ ಕಾಣುತ್ತಿದೆ. ಟಿಕೆಟ್ ದರ ಹೆಚ್ಚಿರುವುದು ಕೂಡ ಕೆಲವರು ಮೀನಾಮೇಷ ಎಣಿಸುವಂತಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಮುಖ್ಯವಾಗಿ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಶೀಘ್ರದಲ್ಲೇ ಬೇರೆ ಕಡೆಗಳಲ್ಲಿ ಓಪನ್ ಆಗಲಿದೆ. ಬೇರೆ ರಾಜ್ಯಗಳಲ್ಲಿ ಕೂಡ ಸದ್ಯಕ್ಕೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿಲ್ಲ. ಪರಭಾಷಿಕರು ಕೂಡ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಸಿನಿಮಾ ಪ್ರಚಾರದಲ್ಲಿ ಮುಳುಗಿದ್ದಾರೆ. ನಿನ್ನೆ(ಸೆಪ್ಟೆಂಬರ್ 25) ಕೊಚ್ಚಿಯಲ್ಲಿ ರಿಷಬ್ ಶೆಟ್ಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು. ಮುಂದೆ ಚೆನ್ನೈ, ಹೈದರಾಬಾದ್, ಮುಂಬೈ ಸುತ್ತಾಡಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗಲಿದ್ದಾರೆ. ಚಿತ್ರದ ಹಾಡು ಬಿಡುಗಡೆ ಆಗುತ್ತಾ ಎಂದು ಅಭಿಮಾನಿಗಳು ಕಾಯುವಂತಾಗಿದೆ.


Click it and Unblock the Notifications











