ಭಾನುವಾರ 'ಕಾಂತಾರ-1' ಕರಾಮತ್ತು; ಬುಕ್‌ಮೈ ಶೋನಲ್ಲಿ 11 ದಿನಕ್ಕೆ ಬುಕ್ ಆದ ಟಿಕೆಟ್ ಎಷ್ಟು? ಹಿಂದಿ ವರ್ಷನ್ ಕಥೆಯೇನು?
ಬಾಕ್ಸಾಫೀಸ್‌ನಲ್ಲಿ 'ಕಾಂತಾರ- 1' ಸಿನಿಮಾ ಕಾರುಬಾರು ಜೋರಾಗಿದೆ. ಬೇರೆ ಯಾವುದೇ ಸಿನಿಮಾ ಪೈಪೋಟಿ ಇಲ್ಲದೇ ರಿಷಬ್ ಶೆಟ್ಟಿ ಚಿತ್ರಕ್ಕೆ ರಾಜಮಾರ್ಗ ಸಿಕ್ಕಿದೆ. ಧನುಷ್ ನಟನೆಯ 'ಇಡ್ಲಿ ಕಡೇ', ಪವನ್ ಕಲ್ಯಾಣ್ ಅಭಿನಯದ 'OG', ಬಾಲಿವುಡ್ ಸಿನಿಮಾ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ಹವಾ ಕಮ್ಮಿ ಆಗಿದೆ. ಈಗ ಎಲ್ಲೆಲ್ಲೂ 'ಕಾಂತಾರ- 1' ದರ್ಬಾರ್ ನಡೀತಿದೆ.
ಪ್ರೀಮಿಯರ್ ಶೋಗಳಿಂದಲೇ 'ಕಾಂತಾರ- 1' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ದಿನ 70ರಿಂ 80 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ ಬಳಿಕ ಗೆಲುವಿನ ಓಟ ಮುಂದುವರೆಸಿತ್ತು. ಆರಂಭದಲ್ಲಿ ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ- 1' ಆರ್ಭಟ ಕಮ್ಮಿ ಇತ್ತು. ಆದರೆ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ಸಿನಿಮಾ ಸದ್ದು ಕಮ್ಮಿ ಆದಮೇಲೆ ರಿಷಬ್ ಶೆಟ್ಟಿ ಕಮಾಲ್ ಶುರುವಾಗಿದೆ. ಸೆಕೆಂಡ್ ವೀಕೆಂಡ್‌ನಲ್ಲಿ 'ಕಾಂತಾರ- 1' ಹಿಂದಿ ವರ್ಷನ್ ಭರ್ಜರಿ ಕಲೆಕ್ಷನ್ ಮಾಡಿರುವುದು ಅದಕ್ಕೆ ಸಾಕ್ಷಿ. ಇನ್ನು ತಮಿಳು, ತೆಲುಗು, ಮಲಯಾಳಂ ವರ್ಷನ್ ಕೂಡ ಹಿಟ್ ಆಗಿದೆ.

2ನೇ ವಾರವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕೆಲವೆಡೆ ಬೆಳಗಿನ ಜಾವ ಹೆಚ್ಚಿನ ಶೋಗಳನ್ನು ಆಯೋಜಿಸಲಾಗುತ್ತಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದು ಮತ್ತಷ್ಟು ಜನರನ್ನು ಸಿನಿಮಾ ನೋಡುವಂತೆ ಪ್ರೇರೇಪಿಸುತ್ತಿದೆ. ಈಗಾಗಲೇ 'ಕೂಲಿ', 'ಸಯ್ಯಾರ' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ದಾಖಲೆಯನ್ನು 'ಕಾಂತಾರ -1' ಹಿಂದಿಕ್ಕಿದೆ.
600 ಕೋಟಿ ರೂ. ಗಳಿಕೆ
12 ದಿನಕ್ಕೆ 'ಕಾಂತಾರ- 1' ಸಿನಿಮಾ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಮೊದಲ ವಾರ 509 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿತ್ತು. ಸೆಕೆಂಡ್ ವೀಕೆಂಡ್‌ನಲ್ಲಿ ಕಲೆಕ್ಷನ್ ಹೆಚ್ಚಾಗಿತ್ತು. ಹಾಗಾಗಿ 3 ದಿನಕ್ಕೆ 100 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಅಂದಾಜಿಸುತ್ತಿದ್ದಾರೆ.

ಹಿಂದಿ ವರ್ಷನ್ ಕಲೆಕ್ಷನ್
ಉತ್ತರ ಭಾರತದಲ್ಲಿ ನಿಧಾನವಾಗಿ 'ಕಾಂತಾರ- 1' ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿತು. ಇದೀಗ 12 ದಿನಕ್ಕೆ ಹಿಂದಿ ವರ್ಷನ್ 146.22 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ತರಣ್ ಆದರ್ಶ್ ಲೆಕ್ಕ ಕೊಟ್ಟಿದ್ದಾರೆ. ಫಸ್ಟ್ ವೀಕ್ 110.10 ಕೋಟಿ ರೂ. ಗಳಿಕೆ ಕಂಡಿತ್ತು. ಶನಿವಾರ 14.37 ಕೋಟಿ ರೂ. ಹಾಗೂ ಭಾನುವಾರ 14.65 ರೂ. ಕಲೆ ಹಾಕಿದೆ.
1 ಕೋಟಿ ಟಿಕೆಟ್ ಬುಕ್ಕಿಂಗ್
ಬುಕ್‌ಮೈ ಶೋ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೆಬ್‌ಸೈಟ್ ಟಿಕೆಟ್ ಬುಕ್ಕಿಂಗ್ ಲೆಕ್ಕ ಕೊಡ್ತಿದೆ. 11 ದಿನಕ್ಕೆ 'ಕಾಂತಾರ- 1' ಚಿತ್ರಕ್ಕಾಗಿ 1 ಕೋಟಿ ರೂ.ಗೂ ಅಧಿಕ ಟಿಕೆಟ್ ಬುಕ್ ಆಗಿರುವ ಲೆಕ್ಕ ಸಿಕ್ಕಿದೆ. ಈ ಮೂಲಕ ಮತ್ತೊಂದು ದಾಖಲೆ ರಿಷಬ್ ಶೆಟ್ಟಿ ಸಿನಿಮಾ ಪಾಲಾಗಿದೆ.
ದೀಪಾವಳಿ ಲೆಕ್ಕಾಚಾರ
ಸಹಜವಾಗಿಯೇ 'ಕಾಂತಾರ- 1' ಸಿನಿಮಾ ನೋಡುವವರ ಸಂಖ್ಯೆ ಕಮ್ಮಿ ಆಗುತ್ತಿದೆ. ಆದರೆ ಮುಂದಿನ ವೀಕೆಂಡ್ ವೇಳೆಗೆ ದೀಪಾವಳಿ ಸಂಭ್ರಮ ಶುರುವಾಗಲಿದೆ. ಈ ಬಾರಿ ಪಟಾಕಿ ಹಬ್ಬಕ್ಕೆ ಬೇರೆ ಯಾವುದೇ ದೊಡ್ಡ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿಲ್ಲ. ಹಾಗಾಗಿ ಅಲ್ಲಿಯವರೆಗೆ 'ಕಾಂತಾರ- 1' ಕ್ರೇಜ್ ಮುಂದುವರೆದರೆ ಮತ್ತಷ್ಟು ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. 'ಛಾವ' ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ದಾಖಲೆ ಬರೆದಿದೆ. 797 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಈ ದಾಖಲೆ ಮುರಿಯಲು 'ಕಾಂತಾರ- 1' ಚಿತ್ರ ಇನ್ನು 200 ಕೋಟಿ ರೂ. ಗಳಿಸಬೇಕಿದೆ.


Click it and Unblock the Notifications











