1 Year Of Kantara: ಕೆಜಿಎಫ್-2 ಮೀರಿ ದಾಖಲೆ ಬರೆದ ಮಾಸ್ಟರ್‌ಪೀಸ್ 'ಕಾಂತಾರ'ಗೆ ವರ್ಷದ ಹರ್ಷ
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ವಿಶ್ವದಾದ್ಯಂತ ಸಿನಿಪ್ರೇಕ್ಷಕರಿಗೆ ಅದ್ಭುತ ಅನುಭವ ಕೊಟ್ಟ ಚಿತ್ರ 'ಕಾಂತಾರ'. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಬರೆದ ದಾಖಲೆಗಳು ಒಂದೆರಡಲ್ಲ. ಕೆಲ ವಿಚಾರಗಳಲ್ಲಿ 'KGF'-2 ಚಿತ್ರವನ್ನು ಮೀರಿ 'ಕಾಂತಾರ' ಸದ್ದು ಮಾಡಿತ್ತು.
ಸರಿಯಾಗಿ ವರ್ಷದ ಹಿಂದೆ ದಸರಾ ಹಬ್ಬದ ಸಂಭ್ರಮದಲ್ಲಿ ತೆರೆಗಪ್ಪಳಿಸಿದ ಆಕ್ಷನ್ ಥ್ರಿಲ್ಲರ್ ಸಿನಿಮಾ ನೋಡ ನೋಡುತ್ತಲೇ ಹೊಸ ಅಧ್ಯಾಯ ಬರೆಯಿತು. ಪ್ರೇಕ್ಷರು ಮುಗಿಬಿದ್ದು ಸಿನಿಮಾ ನೋಡಿದರು. ಫ್ಯಾಮಿಲಿ ಆಡಿಯನ್ಸ್ ದೊಡ್ಡಮಟ್ಟದಲ್ಲಿ ಸಿನಿಮಾ ನೀಡಲು ಬಂದರು. ಪರಭಾಷಿಕರು ಒತ್ತಡ ಹೇರಿ ಸಿನಿಮಾ ಡಬ್ ಮಾಡಿಸಿಕೊಂಡು ನೋಡಿದರು. ಪ್ರೇಕ್ಷಕರು ಮಾತ್ರವಲ್ಲ ಅಕ್ಕ ಪಕ್ಕದ ರಾಜ್ಯದ ಸ್ಟಾರ್ ನಟರು, ಫಿಲ್ಮ್ ಮೇಕರ್ ಸಿನಿಮಾ ನೋಡಿ ಕೊಂಡಾಡಿದರು.

ಅಂದಾಜು 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ 350 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ರಿಷಬ್ ಶೆಟ್ಟಿ ಕತೆ, ಚಿತ್ರಕತೆ ಬರೆದು ನಿರ್ದೇಶಿಸಿ ನಟಿಸಿದ್ದರು. ಸಪ್ತಮಿ ಗೌಡ ಗೌಡ ನಾಯಕಿಯಾಗಿ ಮಿಂಚಿದ್ದರು. ಕಿಶೋರ್ ಫಾರೆಸ್ಟ್ ಆಫಿಸರ್ ಆಗಿ ಸಖಕ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಮೊದಲಿಗೆ ಇದು ರಿಷಬ್ ವರ್ಸಸ್ ಕಿಶೋರ್ ಪೈಪೋಟಿ ಸಿನಿಮಾ ಅಂತ್ಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಆ ಬಳಿಕ ಇದು ಒಂದು ಭಕ್ತಪ್ರಧಾನ ಸಿನಿಮಾದಂತಾಗಿಬಿಡ್ತು.
ಕರಾವಳಿ ಜನ ಆರಾಧಿಸುವ ಪಂಜರ್ಲಿ ಹಾಗೂ ಗುಳಿಗ ದೈವದ ಮಹಿಮೆಯನ್ನು ಕತೆಯಲ್ಲಿ ಸೇರಿಸಿ ರಿಷಬ್ ಶೆಟ್ಟಿ ಮ್ಯಾಜಿಕ್ ಮಾಡಿದ್ದರು. ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು. ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು. ವರಾಹ ರೂಪಂ ಸಾಂಗ್ ಕನ್ನಡದ ಎವರ್‌ಗ್ರೀನ್ ಸಾಂಗ್ಸ್ ಲಿಸ್ಟ್ ಸೇರಿದೆ. ಮೊದಲಿಗೆ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತ್ರ ಸಿನಿಮಾ ರಿಲೀಸ್ ಮಾಡಬೇಕು ಎಂದುಕೊಂಡಿದ್ದರು. ಆದರೆ ಪರಭಾಷಿಕರು ಬಿಡಲಿಲ್ಲ. ಪಟ್ಟು ಹಿಡಿದು ಸಿನಿಮಾ ಡಬ್ ಆಗುವಂತೆ ಮಾಡಿದ್ದರು.
'ಕಾಂತಾರ' ಇಂಗ್ಲೀಷ್, ತುಳು ಸೇರಿದಂತೆ ಕನ್ನಡ ಬಿಟ್ಟು 6 ಭಾಷೆಗಳಿಗೆ ಡಬ್ ಆಗಿತ್ತು. ಇಟಲಿ ಸ್ಪ್ಯಾನಿಷ್ ಭಾಷೆಗಳಿಗೂ ಚಿತ್ರವನ್ನು ಡಬ್ ಮಾಡಲು ಹೊಂಬಾಳೆ ಸಂಸ್ಥೆ ಮುಂದಾಗಿದೆ. ಕೆಲವು ಕಡೆಗಳಲ್ಲಿ 'KGF'-2 ಬಾಕ್ಸಾಫೀಸ್ ದಾಖಲೆ ಅಳಿಸಿ 'ಕಾಂತಾರ' ಸಿನಿಮಾ ದಾಖಲೆ ಬರೆದಿತ್ತು. 1250 ಕೋಟಿ ರೂ. ಗಳಿಸಿದ KGF - 2 ಹಾಗೂ 350 ಕೋಟಿ ರೂ. ಗಳಿಸಿದ 'ಕಾಂತಾರ' ನಡುವೆ ಹೋಲಿಕೆ ಮಾಡೋದು ತಪ್ಪು ಎನಿಸಬಹುದು. ಆದರೆ ಸಾಕಷ್ಟು ವಿಚಾರಗಳಲ್ಲಿ 'ಕಾಂತಾರ' ದೊಡ್ಡ ಸಿನಿಮಾ ಆಗಿ ಹೊರಹೊಮ್ಮಿತ್ತು.
KGF-2 ಚಿತ್ರಕ್ಕೆ ಮೊದಲ ಭಾಗದ ಸಕ್ಸಸ್ ಬೆಂಬಲವಿತ್ತು. ಆದರೆ 'ಕಾಂತಾರ' ಚಿತ್ರ ಯಾವುದೇ ನಿರೀಕ್ಷೆ ಇಲ್ಲದೇ ಬಂದು ಗೆದ್ದಿತ್ತು. ಗುಳಿಗ ಹಾಗೂ ಪಂಜುರ್ಲಿ ದೈವ ಆವಾಹನೆಯಾದಾಗ ರಿಷಬ್ ಶೆಟ್ಟಿ ಅಭಿನಯ ಬಹುತೇಕರಿಗೆ ವರ್ಣಿಸಲಾಗದಂತಹ ವಿಶಿಷ್ಟ ಅನುಭವ ನೀಡಿತ್ತು. ಬುಕ್ ಮೈ ಶೋ, IMDbಯಲ್ಲಿ'ಕಾಂತಾರ' ಚಿತ್ರಕ್ಕೆ ಸಿಕ್ಕ ರೇಟಿಂಗ್ ಮತ್ತ್ಯಾವುದೇ ಚಿತ್ರಕ್ಕೂ ಸಿಕ್ಕಿರಲಿಲ್ಲ. ಇನ್ನು 'KGF' ಸಿನಿಮಾ ಬಜೆಟ್‌ಗೆ ಹೋಲಿಸಿದರೂ ಕೂಡ 'ಕಾಂತಾರ' ಸಣ್ಣ ಸಿನಿಮಾ ಆಗಿತ್ತು. ಆಧರೆ ಫಲಿತಾಂಶ ಅದಕ್ಕಿಂತ ದೊಡ್ಡದಾಗಿತ್ತು.
ಕರ್ನಾಟಕದ ಮಟ್ಟಿಗೆ ಅತಿಹೆಚ್ಚು ಟಿಕೆಟ್ ಮಾರಾಟವಾದ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಕಾಂತಾರ' ಪಾತ್ರವಾಗಿತ್ತು. ಇದನ್ನು ಅಧಿಕೃತವಾಗಿ ಹೊಂಬಾಳೆ ಸಂಸ್ಥೆಯೇ ಘೋಷಿಸಿತ್ತು. ಬರೀ ಕರ್ನಾಟಕದಲ್ಲೇ 1 ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗಿತ್ತು. ಸದ್ಯ ರಿಲೀಸ್ ಶೆಟ್ಟಿ ಈ ಸಿನಿಮ್ಯಾಟಿಕ್ ಮಾಸ್ಟರ್ ಪೀಸ್ ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೇ ತಂಡ ಮತ್ತೊಂದು ಸಿನಿಮಾ ಕಟ್ಟಿಕೊಡಲು ಶ್ರಮಿಸುತ್ತಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.
'ಕಾಂತಾರ' ಚಿತ್ರ ವರ್ಷ ಪೂರೈಸಿದ ಸಂಭ್ರಮವನ್ನು ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿ ಚಿತ್ರತಂಡ ಹಂಚಿಕೊಂಡಿದೆ. 'ಕಾಂತಾರ' ಚಿತ್ರದ ಸ್ಪೆಷಲ್ ಝಲಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಆದಷ್ಟು ಬೇಗ ಪ್ರೀಕ್ವೆಲ್ ನೋಡೋಕೆ ಕಾಯುತ್ತಿದ್ದಾರೆ. ಮೊದಲ ಭಾಗಕ್ಕಿಂತ ಹಲವುಪಟ್ಟು ದೊಡ್ಡದಾಗಿ ಈ ಸಿನಿಮಾ ತೆರೆಗೆ ತರಲಾಗುತ್ತಿದೆ.


Click it and Unblock the Notifications










