ರಿಷಬ್ ಶೆಟ್ಟಿಯ 'ಕಾಂತಾರ'ಗೆ ವಿಘ್ನಗಳ ಮೇಲೆ ವಿಘ್ನ, ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ ಗ್ರಾಮಸ್ಥರು..!
ಹಾಸನ ; ಅರಣ್ಯ ಎಂದರೆ ಅದು ಸಸ್ಯ ಸಂಪತ್ತು. ಸಾವಿರಾರು ಜಾತಿ ಮರಗಳು ಪ್ರಾಕೃತಿಕವಾಗಿ ಬೆಳೆದು ಲಕ್ಷಾಂತರ ಜೀವ ವೈವಿಧ್ಯ ಸೂಕ್ಷ್ಮಾಣುಗಳೊಂದಿಗೆ ರೂಪಗೊಂಡಿರುವ ತಾಣ. ಇಂಥಾ ಅರಣ್ಯಕ್ಕೆ ಚಿತ್ರೀಕರಣದ ನೆಪದಲ್ಲಿ ಬೆಂಕಿ ಹಚ್ಚಿದ್ದಾರೆ ಎನ್ನುವ ಆರೋಪ ಕಾಂತಾರ ಚಿತ್ರತಂಡದ ಮೇಲೆ ಮಾಡಲಾಗಿದೆ.
ಹೌದು, ಅಸಲಿಗೆ ಕುಂದಾಪುರದಲ್ಲಿ ಚಿತ್ರದ ಚಿತ್ರೀಕರಣಕ್ಕೆ ಬಿಡಾರ ಹೂಡಿದ್ದ ರಿಷಬ್ ಮೊನ್ನೆ ಜನವರಿ ಮೊದಲ ವಾರದಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಮುಂದಾಗಿದ್ದರು. ಆದರೆ, ರಿಷಬ್ ಇನ್ನೂ ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆದಿರಲಿಲ್ಲ. ಆಗಲೇ ಚಿತ್ರೀಕರಣದ ಉಪಕರಣವನ್ನು ತಂದಿಡಲಾಗಿತ್ತು.

ಈ ಹಿನ್ನೆಲೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳು 50 ಸಾವಿರ ದಂಡವನ್ನು ವಿಧಿಸಿದ್ದರು. ಆ ನಂತರ ಜನವರಿ 5ಕ್ಕೆ ಚಿತ್ರದ ಚಿತ್ರೀಕರಣಕ್ಕೆ ಅನುಮತಿಯನ್ನು ನೀಡಿದ್ದರು. ಹೀಗಾಗಿ ಚಿತ್ರದ ಚಿತ್ರೀಕರಣವನ್ನು ಚಿತ್ರತಂಡ ಮಾಡುತ್ತಿದೆ. ಆದರೆ ಇದೇ ಸಮಯದಲ್ಲಿ ಅರಣ್ಯ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.
ಇನ್ನು ಈ ಕುರಿತು ಪ್ರಶ್ನೆ ಮಾಡಲು ಹೋದವರ ಮೇಲೆ ಚಿತ್ರತಂಡ ಹಲ್ಲೆ ಮಾಡಿದೆ ಎಂದು ಕೂಡ ವರದಿಯಾಗಿದ್ದು ಚಿತ್ರೀಕರಣಕ್ಕೆ ಯಾವೆಲ್ಲ ಪರವಾನಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ಅರಣ್ಯ, ಕಂದಾಯ ಇಲಾಖೆಯವರು ಬಹಿರಂಗಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಡಿನಲ್ಲಿ ಬೆಂಕಿ ಹಚ್ಚಿದ ಕಾರಣದಿಂದ ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ, ವನ್ಯಜೀವಿಗಳಿರುವ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬಾರದು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಈಗಲೇ ಚಿತ್ರದ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಪರಿಸರ ಉಳಿಸಿ ಇಲ್ಲವಾದರೆ ಡಿಸಿ ಕಚೇರಿ ಮುಂದೆ ಧರಣಿ ನಡೆಸುವ ಎಚ್ಚರಿಕೆಯನ್ನು ಕೂಡ ಗ್ರಾಮಸ್ಥರು ನೀಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಅಧಿಕಾರಿಗಳು ಭಾನುವಾರ ಸ್ಥಳ ಪರಿಶೀಲನೆ ಮಾಡಿದ್ದೇವೆ, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಯಾವ ನಿಯಮ ಕೂಡ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾರೆ. ಜನವರಿ 15ರಿಂದ ಜನವರಿ 25ರವರೆಗೆ ಚಿತ್ರೀಕರಣಕ್ಕೆ ಅನುಮತಿಯನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಕಾಂತಾರ ಚಿತ್ರದ ಪ್ರಿಕ್ವೆಲ್‌ನ ರಿಷಬ್ ಶುರು ಮಾಡಿದ ದಿನದಿಂದ ಚಿತ್ರಕ್ಕೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಕಳೆದ ವರ್ಷ ಈ ಚಿತ್ರದ ಚಿತ್ರೀಕರಣಕ್ಕೆ ಜೂನಿಯರ್ ಆರ್ಟಿಸ್ಟ್‌ಗಳನ್ನು ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕೊಲ್ಲೂರಿನ ಹತ್ತಿರ ಮಿನಿ ಬಸ್ ಪಲ್ಟಿ ಹೊಡೆದಿತ್ತು. ಈ ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯವಾಗಿತ್ತು. ಗಾಯಾಳುಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಇದಕ್ಕೂ ಮುನ್ನ ಜೂನಿಯರ್ ಆರ್ಟಿಸ್ಟ್ ಗುಂಪು ತಮಗೆ ಸರಿಯಾದ ಸೌಲಭ್ಯ ನೀಡುತ್ತಿಲ್ಲವೆಂದು ಕೋ ಆರ್ಟಿನೆಟರ್‌ಗಳ ವಿರುದ್ಧ ಕಿಡಿಕಾರಿತ್ತು. ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಿದ್ದ ಹೊಂಬಾಳೆ ಸಂಸ್ಥೆಗೆ ಇದರಿಂದ ಭಾರೀ ಮುಜುಗರ ಕೂಡ ಆಗಿತ್ತು. ಆ ನಂತರ ಹೊಂಬಾಳೆ ತಂಡ ಇದು ಜೂನಿಯರ್ ಆರ್ಟಿಸ್ಟ್‌ಗಳನ್ನು ಸಪ್ಲೈ ಮಾಡುವ ತಂಡದಿಂದ ಆದ ತಪ್ಪು. ತಮ್ಮಿಂದ ತಪ್ಪುಗಳಾಗಿಲ್ಲ ಎಂದು ಹೇಳಿತ್ತು. ಬಳಿಕ ಮತ್ತೆ ಶೂಟಿಂಗ್ ಮುಂದುವರೆದಿತ್ತು.
ಈಗ ಅರಣ್ಯಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಕಾಂತಾರ ತಂಡದ ಮೇಲೆ ಮಾಡಲಾಗಿದೆ. ಇನ್ನುಳಿದಂತೆ 07 ಭಾಷೆಗಳಲ್ಲಿ ಈ ಸಲ ಚಿತ್ರ ತೆರೆಗೆ ಬರಲಿದ್ದು ಈ ವರ್ಷದ ಅಕ್ಟೋಬರ್ 2ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತಿದೆ.


Click it and Unblock the Notifications











