ಗೆಲುವು.. ಈಗೋ.. ಆತ್ಮಾಭಿಮಾನ; ರಿಷಬ್ ಶೆಟ್ಟಿ-ಹೊಂಬಾಳೆ ದೂರಾದೂರ.. ಅಷ್ಟಕ್ಕೂ ಏನಾಯ್ತು?
ಸೋಲು ಮಾತ್ರವಲ್ಲ ಕೆಲವೊಮ್ಮೆ ಗೆಲುವು ಕೂಡ ವ್ಯಕ್ತಿಗಳ ನಡುವೆ ಕಂದಕ ಸೃಷ್ಟಿಸಿಬಿಡುತ್ತದೆ. ಈಗೋ ಅಡ್ಡ ಬಂದು ಸಹೋದರರಂತೆ ಇದ್ದವರು ದೂರಾಗಿಬಿಡುತ್ತಾರೆ. ಕಳೆದ ಕೆಲ ದಿನಗಳಿಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಪ್ತವಲಯದಲ್ಲಿ ಏನಾಗ್ತಿದೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೊಂಬಾಳೆ ಫಿಲ್ಮ್ಸ್, ರಾಜ್ ಬಿ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರನ್ನು ರಿಷಬ್ ಅನ್‌ಫಾಲೋ ಮಾಡಿದ್ದಾರೆ. 'ಕಾಂತಾರ'ದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.
ನಿರ್ಮಾಪಕ ವಿಜಯ್ ಕಿರಗಂದೂರ್ ಮೇಲೆ ರಿಷಬ್ ಶೆಟ್ಟಿ ಮುನಿಸಿಕೊಂಡಿದ್ದಾರಾ? ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೊ ಮಾಡುವ ಮೂಲಕ ಅದನ್ನು ಬಹಿರಂಗಪಡಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ನಿಜ ಎನ್ನಲಾಗ್ತಿದೆ. ಆಪ್ತ ಮೂಲಗಳಿಂದ ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ 'ಕಾಂತಾರ' ಸರಣಿ ಸಿನಿಮಾಗಳನ್ನು ಮಾಡಿದ್ದ ರಿಷಬ್ ಈಗ ತಮ್ಮದೇ ಹಾದಿ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಕೋವಿಡ್ ಸಮಯದಲ್ಲಿ ರಿಷಬ್ ಶೆಟ್ಟಿ 'ಕಾಂತಾರ' ಕಥೆ ಮಾಡಿ ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ ಸಿನಿಮಾ ಮಾಡಿ ಗೆದ್ದರು. ಕೇವಲ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿ ಗೆದ್ದಿತ್ತು. ಅದನ್ನು ಎನ್‌ಕ್ಯಾಶ್ ಮಾಡಿಕೊಂಡು ಪ್ರೀಕ್ವೆಲ್ ಮಾಡಿದ್ದರು. ಮೊದಲ ಭಾಗಕ್ಕಿಂತ ಹಲವು ಪಟ್ಟು ಹೆಚ್ಚು ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ರಿಷಬ್ ಶೆಟ್ಟಿ ಚಿತ್ರಕ್ಕಾಗಿ 3 ವರ್ಷ ತನು-ಮನ ಅರ್ಪಿಸಿಕೊಂಡಿದ್ದರು. ಅದಕ್ಕೆ ತಕ್ಕ ಪ್ರತಿಫಲ ಕೂಡ ಸಿಕ್ಕಿತ್ತು.
'ಕಾಂತಾರ'-1 ಸಕ್ಸಸ್ ಬಳಿಕ ಎಲ್ಲವೂ ಚೆನ್ನಾಗಿಯೇ ಇತ್ತು. ಚಿತ್ರೀಕರಣ ನಡೆಯುತ್ತಿದ್ದಾಗಲೇ 'ಜೈಹನುಮಾನ್' ಸಿನಿಮಾ ಘೋಷಣೆ ಆಗಿತ್ತು. ಬಳಿಕ ಶಿವಾಜಿ ಬಯೋಪಿಕ್, ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ ಕೂಡ ಕನ್ಫರ್ಮ್ ಆಯಿತು. ರಿಷಬ್ ಶೆಟ್ಟಿ ನಿರ್ದೇಶನ ಪಕ್ಕಕ್ಕಿಟ್ಟು ಈ 3 ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸೋಕೆ ಮನಸ್ಸು ಮಾಡಿದ್ದಾರೆ. ಇಲ್ಲೇ ನೋಡಿ ಸಮಸ್ಯೆ ಆಗಿದ್ದು. ಹೊಂಬಾಳೆ ಬಿಟ್ಟು ಬೇರೆಯವರಿಗೆ ಕಾಲ್‌ಶೀಟ್ ಕೊಟ್ಟಿದ್ದೇ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ ಎನ್ನಲಾಗ್ತಿದೆ. ಈ 3 ಸಿನಿಮಾಗಳನ್ನು ಮುಗಿಸಲು ಕನಿಷ್ಠ 5 ವರ್ಷ ಬೇಕು. ಅಲ್ಲಿಯವರಗೆ ಹೊಂಬಾಳೆ ಫಿಲ್ಮ್ಸ್ ಕೈಗೆ ರಿಷಬ್ ಶೆಟ್ಟಿ ಸಿಗಲ್ಲ.

'ಕಾಂತಾರ- 1' ಬಳಿಕ ಚಾಪ್ಟರ್-2 ಮಾಡಿದ್ದರೆ ಚೆನ್ನಾಗಿತ್ತು ಎನ್ನುವುದು ಹೊಂಬಾಳೆ ಫಿಲ್ಮ್ಸ್ ಲೆಕ್ಕಾಚಾರ ಎನ್ನುವ ಮಾತುಗಳು ಕೇಳಿಬರ್ತಿದೆ. 3 ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆಗೆ ತಮ್ಮದೇ ಬ್ಯಾನರ್‌ನಲ್ಲಿ ಒಂದಷ್ಟು ಚಿಕ್ಕ ಸಿನಿಮಾಗಳನ್ನು ಮಾಡಬೇಕು ಎನ್ನುವುದು ರಿಷಬ್ ಲೆಕ್ಕಾಚಾರ. ಯುಗಾದಿ ಸಂಭ್ರಮದಲ್ಲಿ 'ಅಧ್ಯಾಯ ಎರಡು ಇಲ್ಲಿಂದ ಶುರು' ಎಂದು ಆ ಬಗ್ಗೆ ಸುಳಿವು ಕೊಟ್ಟಿದ್ದರು. ಸದ್ಯ ಹೊಂಬಾಳೆ ಫಿಲ್ಮ್ಸ್ ಖಾಲಿ ಕೂರುವಂತಾಗಿದೆ. 4 ದೊಡ್ಡ ಸಿನಿಮಾಗಳು ಘೋಷಣೆ ಆಗಿದ್ದರೂ ಯಾವುದು ಕೂಡ ಸೆಟ್ಸ್ ಮೇಲೆ ಇಲ್ಲ.
'ಸಲಾರ್'-2 ಈ ವರ್ಷ ಜೂನ್ ಅಥವಾ ಅಕ್ಟೋಬರ್ ವೇಳೆಗೆ ಶುರುವಾಗಬಹುದು ಎನ್ನಲಾಗ್ತಿದೆ. ಆದರೆ ಗ್ಯಾರಂಟಿ ಇಲ್ಲ. ಪ್ರಭಾಸ್ ಸದ್ಯ 'ಫೌಜಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ 'ಸ್ಪಿರಿಟ್' ಸಿನಿಮಾ ಮಾಡಬೇಕಿದೆ. 'ಕಲ್ಕಿ 2898AD' ಸೀಕ್ವೆಲ್ ಚಿತ್ರೀಕರಣ ಶುರುವಾಗಿದೆ. ಅತ್ತ ಪ್ರಶಾಂತ್ ನೀಲ್ ಈ ವರ್ಷ 'ಡ್ರ್ಯಾಗನ್' ಸಿನಿಮಾ ಮುಗಿಸಿ ತೆರೆಗೆ ತರುವಂತೆ ಕಾಣ್ತಿಲ್ಲ. ಹಾಗಾಗಿ 'ಸಲಾರ್'-2 ಸದ್ಯಕ್ಕಿಲ್ಲ ಎನ್ನುವಂತಾಗಿದೆ. ಇನ್ನು ಹೃತಿಕ್ ರೋಷನ್ ಕಾಲ್‌ಶೀಟ್ ಕೊಟ್ಟಿದ್ದರೂ ನಿರ್ದೇಶಕರು, ಕಥೆ ಸಿಕ್ಕಿಲ್ಲ. 'ರಿಚರ್ಡ್ ಆಂಟನಿ' ಸ್ಕ್ರಿಪ್ಟ್ ಮಾಡೋಕೆ ಹೋಗಿರುವ ರಕ್ಷಿತ್ ಶೆಟ್ಟಿ ಯಾರ ಕೈಗೂ ಸಿಗುತ್ತಿಲ್ಲ. ಹೊಂಬಾಳೆ ಸಂಸ್ಥೆಯಿಂದ ಬಹಳ ದೂರವೇ ಉಳಿದುಬಿಟ್ಟಿದ್ದಾರೆ.
'ಕೆಜಿಎಫ್'-3 ಸಿನಿಮಾ ಘೋಷಣೆ ಆಗಿದ್ದರೂ ಸದ್ಯಕ್ಕೆ ಶುರುವಾಗುವ ಸಾಧ್ಯತೆ ಇಲ್ಲ. ಇದೆಲ್ಲದರ ನಡುವೆ ಶಿವಕಾರ್ತಿಕೇಯನ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಮಾತುಕತೆ ನಡೀತಿದೆ. ಅದು ಕೂಡ ಸದ್ಯಕ್ಕೆ ಸೆಟ್ಟೇರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಕಾಂಬೋ ವರ್ಕ್ ಆಗುವ ಬಗ್ಗೆಯೇ ಕೆಲವರಿಗೆ ಅನುಮಾನವಿದೆ. ಹಾಗಾಗಿ ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್ ಯಾವುದೇ ಸಿನಿಮಾ ಆರಂಭಿಸುವ ಸಾಧ್ಯತೆಗಳು ಕಾಣುತ್ತಿಲ್ಲ. ಇದೆಲ್ಲದರ ನಡುವೆ ರಿಷಬ್ ಶೆಟ್ಟಿ ಕೂಡ ರಹದಾರಿ ಹುಡುಕಿಕೊಂಡಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಈಗೋ ಕ್ಲ್ಯಾಶ್ ಆಗಿದೆ ಎನ್ನಲಾಗ್ತಿದೆ.
'ಕಾಂತಾರ-1' ಚಿತ್ರದ ಸಂಭಾವನೆ ಕಾರಣಕ್ಕೆ ರಿಷಬ್ ಬೇಸರಗೊಂಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಆದರೆ ಅದೆಲ್ಲಾ ಸುಳ್ಳು ಎನ್ನಲಾಗ್ತಿದೆ. ಹೊಂಬಾಳೆ ಸಂಸ್ಥೆ ಸಂಭಾವನೆ, ವ್ಯವಹಾರದ ವಿಚಾರದಲ್ಲಿ ಯಾರಿಗೂ ಯಾವತ್ತೂ ಮೋಸ ಮಾಡಿಲ್ಲ. ಹಾಗಾಗಿ ಇದು ಕೇವಲ ವದಂತಿ ಮಾತ್ರ. ಇನ್ನು ರಿಷಬ್ ಶೆಟ್ಟಿ ತಮಗೆ ಸಿನಿಮಾ ಮಾಡಬೇಕು ಎನ್ನುವುದು ತಪ್ಪಾಗುತ್ತದೆ. 'ಕಾಂತಾರ' ಸರಣಿ ಗೆಲುವಿನಲ್ಲಿ ರಿಷಬ್ ಪಾಲು ದೊಡ್ಡದಿದೆ. ಒಪ್ಪಂದದ ಪ್ರಕಾರ ಸಿನಿಮಾ ಮುಗಿದ ಮೇಲೆ ಅವರಿಗೆ ಇಷ್ಟಬಂದ ಸಿನಿಮಾ ಮಾಡಬಹುದು.
ರಿಷಬ್ ಶೆಟ್ಟಿ ಇಲ್ಲದೇ 'ಕಾಂತಾರ' ಸರಣಿ ಸಿನಿಮಾ ಇಲ್ಲ.. ಅದೇ ರೀತಿ ಹೊಂಬಾಳೆ ಇಲ್ಲದೇ ಕೂಡ ಸಿನಿಮಾಗಳು ಆಗ್ತಿರಲಿಲ್ಲ. ಇಬ್ಬರು ಕೊಟ್ಟು ತೆಗೆದುಕೊಂಡಿದ್ದಾರೆ ಅಷ್ಟೆ.. ದಿಢೀರ್ ಗೆಲುವು ರಿಷಬ್ ಶೆಟ್ಟಿ ತಲೆಗೆ ಹತ್ತಿದೆ, ಅದಕ್ಕೆ ಎಲ್ಲರನ್ನು ದೂರ ಮಾಡಿಕೊಳ್ಳುತ್ತಿದ್ದಾರೆ, ಇದು ಅಹಂಕಾರದ ಪರಮಾವಧಿ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸ್ವಾಭಿಮಾನ, ಆತ್ಮಾಭಿಮಾನಕ್ಕೆ ಧಕ್ಕೆಯಾದರೆ ಯಾರೂ ಸಹಿಸಲ್ಲ. ಆತ್ಮ ಸ್ಥೈರ್ಯ ಇರುವವರು ತಮ್ಮ ದಾರಿ ತಾವು ಹಿಡಿಯುತ್ತಾರೆ. ಅದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ.
ಅಂದಹಾಗೆ ಇವತ್ತಿಗೂ ವಿಜಯ್ ಕಿರಗಂದೂರ್ ಬಗ್ಗೆ ರಿಷಬ್ ಶೆಟ್ಟಿ ಅವರಿಗೆ ಅದೇ ಅಭಿಮಾನ, ಪ್ರೀತಿ ಇದೆ. ಅಂದು ತಾನು ಹೇಳಿದ 'ಕಾಂತಾರ' ಕಥೆಯನ್ನು ಮೊದಲು ಒಪ್ಪಿ ಭಾರೀ ಬಜೆಟ್ ಹಾಕಿ ಸಿನಿಮಾ ಮಾಡಿದ್ದನ್ನು ಮರೆತ್ತಿಲ್ಲ. ಅವರಿಗೆ ಅಣ್ಣನ ಸ್ಥಾನ ಕೊಟ್ಟಿದ್ದಾರೆ. ಸ್ನೇಹ, ಪ್ರೀತಿ ಇರಲಿ, ಆದರೆ ಯಾವುದೇ ವ್ಯವಹಾರ ಬೇಡ ಎಂದು ನಿರ್ಧರಿಸಿದಂತೆ ಕಾಣ್ತಿದೆ.


Click it and Unblock the Notifications











