ನಮಗ್ಯಾಕೆ ಹೀಗೆ ಮೋಸ ಮಾಡಿದ್ರಿ ಶೆಟ್ರೆ? ಡಿವೈನ್ ಸ್ಟಾರ್ ಬಗ್ಗೆ ಯಾಕೆ ಈ ಮಾತು ?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ- 1' ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಬಾಕ್ಸಾಫೀಸ್‌ನಲ್ಲಿ 800 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಸಿನಿಮಾ ಇಂಗ್ಲೀಷ್ ಭಾಷೆಗೆ ಡಬ್ ಆಗಿ ರಿಲೀಸ್ ಆಗ್ತಿದೆ. ಇದೆಲ್ಲದರ ನಡುವೆ ಚಿತ್ರದ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಸಂಗತಿ ಬಯಲಾಗಿ ಸಿನಿರಸಿಕರು ಅಚ್ಚರಿಗೊಂಡಿದ್ದಾರೆ.
'ಕಾಂತಾರ-1' ರಿಷಬ್ ಶೆಟ್ಟಿ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿರುವುದು ಬಹಳ ಜನಕ್ಕೆ ಗೊತ್ತಿರಲಿಲ್ಲ. ಫಿಲ್ಮಿಬೀಟ್ ಕನ್ನಡ ಈ ಬಗ್ಗೆ ಬಹಳ ಹಿಂದೆಯೇ ಸುದ್ದಿ ಮಾಡಿತ್ತು. ಬೆರ್ಮೆ ಆಗಿ ಮಾತ್ರವಲ್ಲದೇ ಮಾಯಕಾರನ ಪಾತ್ರದಲ್ಲಿ ಕೂಡ ರಿಷಬ್ ಶೆಟ್ಟಿ ನಟಿಸಿದ್ದಾರೆ ಎಂದು ಹೇಳಿತ್ತು. ಇದೀಗ ಮಾಯಕಾರ ಪಾತ್ರಕ್ಕೆ ರಿಷಬ್ ಶೆಟ್ಟಿ ಹೇಗೆ ಸಿದ್ಧತೆ ನಡೆಸಿದ್ದರು ಎನ್ನುವ ಮೇಕಿಂಗ್ ವೀಡಿಯೋ ಬಯಲಾಗಿದೆ.

ಚಿತ್ರದಲ್ಲಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ನಟಿಸಿರುವ ವಿಚಾರವನ್ನು ಚಿತ್ರತಂಡ ಗುಟ್ಟಾಗಿಯೇ ಇಟ್ಟಿತ್ತು. ತೆರೆಮೇಲೆ ಸಿನಿಮಾ ನೋಡಿದಾಗಲೂ ಸಾಕಷ್ಟು ಜನರಿಗೆ ಅದು ಗೊತ್ತಾಗಿರಲಿಲ್ಲ. ಮಾಯಕಾರನ ಪಾತ್ರಕ್ಕೆ ರಿಷಬ್ ಧ್ವನಿ ಇದ್ದರೂ ನೋಡುಗರಿಗೆ ಗೊಂದಲ ಮೂಡಿತ್ತು. ಚಿತ್ರಕ್ಕಾಗಿ ದೇಹ ದಂಡಿಸಿ ಹುರಿಗಟ್ಟಿದ ಸ್ನಾಯುಗಳನ್ನು ಪ್ರದರ್ಶಿಸಿದ್ದರು. ಮಾಯಕಾರನ ದೇಹ ಸಿಕ್ಕಾಪಟ್ಟೆ ತೆಳ್ಳಗೆ ಕಾಣುತ್ತದೆ. ಇನ್ನು ಕಣ್ಣು, ಮೂಗು ಬಿಟ್ಟು ಇಡೀ ಮುಖವನ್ನು ಬಿಳಿ ಗಡ್ಡ ಮುಚ್ಚಿಕೊಂಡಂತೆ ತೋರಿಸಲಾಗಿತ್ತು. ಹಾಗಾಗಿ ಬಹುತೇಕರಿಗೆ ಅನುಮಾನ ಬರಲಿಲ್ಲ.
ಒಂದು ಹಂತಕ್ಕೆ ಕನ್ನಡದ ಕೆಲ ಪ್ರೇಕ್ಷಕರು ಇದನ್ನು ಗಮನಿಸಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸಿದ್ದರು. ಆದರೆ ಪರಭಾಷಾ ಪ್ರೇಕ್ಷಕರಿಗೆ ಇದು ಗೊತ್ತಾಗಿರಲಿಲ್ಲ. ಯಾರೋ ಬೇರೆ ಕಲಾವಿದರು ಈ ಪಾತ್ರ ಮಾಡಿದ್ದಾರೆ ಅಥವಾ ರಿಷಬ್ ಶೆಟ್ಟಿ ಸೋದರ ಸಂಬಂಧಿ ಯಾರಾದರೂ ನಟಿಸಿರಬಹುದು ಎಂದುಕೊಂಡಿದ್ದರು. ಈಗ ಮೇಕಿಂಗ್ ವೀಡಿಯೋ ನೋಡಿ ಹುಬ್ಬೇರಿಸುತ್ತಿದ್ದಾರೆ.
ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ "ಯಾಕಿಂಗೆ ಮೋಸ ಮಾಡ್ಬಿಟ್ರಿ ರಿಷಬ್ ಸರ್.. ನಿಜಕ್ಕೂ ಅದ್ಭುತ.. ನಿಮಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು" ಎಂದು ಕಾಮೆಂಟ್ ಮಾಡಿದ್ದಾರೆ. ಅದು ಸಖತ್ ವೈರಲ್ ಆಗ್ತಿದೆ. ತೆಲುಗು, ತಮಿಳು, ಹಿಂದಿ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕಾಮೆಂಟ್ ಮಾಡಿ ಚರ್ಚಿಸುತ್ತಿದ್ದಾರೆ. ನಿಮ್ಮ ಪರಿಶ್ರಮ, ಶ್ರದ್ಧೆಗೆ ಹ್ಯಾಟ್ಸಪ್ ಸರ್ ಎಂದು ಉದ್ಧಾರ ತೆಗೆಯುತ್ತಿದ್ಧಾರೆ.
'ಕಾಂತಾರ- 1' ಚಿತ್ರದ ಬಹಳ ಮುಖ್ಯವಾದ ಪಾತ್ರ ಮಾಯಕಾರ. ಶಿವನ ಅಂಶವಾಗಿ ಬಂದು ಬೆರ್ಮೆಗೆ ಸಹಾಯ ಮಾಡುವ ಪಾತ್ರ ಇದು. ಒಂದೆರಡು ದೃಶ್ಯಗಳಲ್ಲಿ ಮಾತ್ರ ಬಂದು ಹೋದರೂ ಬಹಳ ಮಹತ್ವ ಪಡೆದುಕೊಂಡಿದೆ. ಪಾತ್ರಕ್ಕಾಗಿ 6 ಗಂಟೆಗಳ ರಿಷಬ್ ಮೇಕಪ್ ಹಾಕಿಕೊಳ್ಳುತ್ತಿದ್ದರು. ಇನ್ನು ಸಿಜಿಯಲ್ಲಿ ಅವರನ್ನು ತೆಳ್ಳಗೆ ತೋರಿಸಲಾಗಿದೆ. ಇದೇ ಕಾರಣಕ್ಕೆ ಬಹುತೇಕರಿಗೆ ರಿಷಬ್ ಈ ಪಾತ್ರ ಮಾಡಿದ್ದಾರೆ ಎನ್ನುವ ಬಗ್ಗೆ ಸಣ್ಣ ಸುಳಿವು ಸಿಕ್ಕಿರಲಿಲ್ಲ.
ಮೊದಲಿನಿಂದಲೂ ರಿಷಬ್ ಶೆಟ್ಟಿ ಸಿನಿಮಾ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಟ್ರೈಲರ್‌ನಲ್ಲಿ ಕೂಡ ಅಸಲಿ ಸಂಗತಿಗಳನ್ನು ಬಿಚ್ಚಿಡಲಿಲ್ಲ. ಎಲ್ಲವನ್ನು ಪ್ರೇಕ್ಷಕರು ತೆರೆಮೇಲೆ ನೋಡಿ ಸರ್‌ಪ್ರೈಸ್ ಆಗಬೇಕು ಎಂದು ನಿರ್ಧರಿಸಿದ್ದರು. ಅವರ ಲೆಕ್ಕಾಚಾರ ಸರಿಯಾಗಿತ್ತು. ತೆರೆಮೇಲೆ ಹಲವು ಸರ್‌ಪ್ರೈಸ್‌ಗಳು ನೋಡುಗರಿಗೆ ಮಜಾ ಕೊಟ್ಟಿತ್ತು. ಸಾಮಾನ್ಯವಾಗಿ ನಟರು ದ್ವಿಪಾತ್ರದಲ್ಲಿ ನಟಿಸಿದರೆ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದೇ ಹೆಚ್ಚು.ಈ ರೀತಿ ನಾಲ್ಕೈದು ಗಂಟೆ ಮೇಕಪ್ ಹಾಕಿಕೊಂಡು ನಟಿಸಿದರೆ ಅದನ್ನೇ ದೊಡ್ಡದಾಗಿ ಹೇಳಿಕೊಳ್ಳುತ್ತಾರೆ. ಆದರೆ ಮಾಯಾಕಾರ ಪಾತ್ರದ ಬಗ್ಗೆ ರಿಷಬ್ ಈವರೆಗೆ ಮಾತನಾಡಲಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ಕೂಡ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. 25 ದಿನಗಳ ಬಳಿಕ ಮೇಕಿಂಗ್ ವೀಡಿಯೋ ಹೊರಬಂದಿದೆ.


Click it and Unblock the Notifications











