ಕಳರಿ, ಕುದುರೆ ಸವಾರಿ, ಡ್ಯೂಪ್ ಇಲ್ಲದೇ ರಿಷಬ್ ಆರ್ಭಟ; ಹೇಗಿತ್ತು 'ಕಾಂತಾರ- 1' ಆಕ್ಷನ್ ಮೇಕಿಂಗ್
'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 20 ದಿನಗಳಲ್ಲಿ ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೀರೊ ಆಗಿ ನಟಿಸಿ ಮೋಡಿ ಮಾಡಿದ್ದಾರೆ. ಇಂತಾದೊಂದು ಆಕ್ಷನ್ ಸಿನಿಮಾದಲ್ಲಿ ನಟಿಸುವುದು ತಮಾಷೆ ಮಾತಲ್ಲ. ಅದಕ್ಕಾಗಿ ರಿಷಬ್ ಪಟ್ಟ ಶ್ರಮ ಎಂಥಾದ್ದು ಎನ್ನುವುದು ಇದೀಗ ಮೇಕಿಂಗ್ ವೀಡಿಯೋದಲ್ಲಿ ರಿವೀಲ್ ಆಗಿದೆ.
ಐತಿಹಾಸಿಕ ಕಥಾಹಂದರದ ಚಿತ್ರವನ್ನು ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. 4-5ನೇ ಶತಮಾನದಲ್ಲಿ ಕದಂಬರ ಆಳ್ವಿಕೆ ಹಿನ್ನೆಲೆಯಲ್ಲಿ 'ಕಾಂತಾರ- 1' ಕಥೆಯನ್ನು ರಿಷಬ್ ತೆರೆಗೆ ತಂದಿದ್ದಾರೆ. ಅವತ್ತಿನ ಕಾಲಘಟ್ಟವನ್ನು ತೆರೆಗೆ ತರಲು ಬಹಳ ಶ್ರಮಿಸಿದ್ದಾರೆ. ಬೆರ್ಮೆ ಪಾತ್ರಕ್ಕಾಗಿ ತಾವು ಸಾಕಷ್ಟು ತಯಾರಿ ನಡೆಸಿದ್ದರು. ಅದೆಲ್ಲವೂ ಈಗ ತೆರೆಮೇಲೆ ಗೊತ್ತಾಗುತ್ತಿದೆ. ಚಿತ್ರದಲ್ಲಿ ನಟಿಸಲು ಕಳರಿಪಯಟ್ಟು ಸಾಹಸ ಕಲೆ, ಕುದುರೆ ಸವಾರಿ ಕೂಡ ಕಲಿತಿದ್ದರು. ದೇಹ ಹುರಿಗೊಳಿಸಿ ಖಡಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ.

ಯಾವುದೇ ಡ್ಯೂಪ್ ಇಲ್ಲದೇ ರಿಷಬ್ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಹೊಸ ಮೇಕಿಂಗ್ ಮೇಕಿಂಗ್ ವೀಡಿಯೋ ರಿಲೀಸ್ ಆಗಿದ್ದು ಅದರಲ್ಲಿ ರಿಷಬ್ ಪರಿಶ್ರಮ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ತನು ಮನ ಅರ್ಪಿಸಿ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಕೆಲವೊಮ್ಮೆ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಿರುವುದು ಅರ್ಥವಾಗುತ್ತದೆ.
ಕೇರಳದ ಚೆಮ್ಮಲಸ್ಸೆರಿಯಲ್ಲಿರುವ 'ಆತ್ಮ ಕಳರಿ ವಿಲೇಜ್'ನ ಕಳರಿ ಪಯಟ್ಟು ಮಾಸ್ಟರ್ ವಿಪಿನ್ ದಾಸ್ ನೇತೃತ್ವದಲ್ಲಿ ರಿಷಬ್ ಈ ಸಮರ ವಿದ್ಯೆ ಕಲಿತಿದ್ದಾರೆ. ಬಳಿಕ 'ಕಾಂತಾರ- 1' ಚಿತ್ರೀಕರಣ ನಡೆಯುತ್ತಿದ್ದ ಅದೇ ಜಾಗದಲ್ಲಿ ಸಣ್ಣ ಕಳರಿ ಪಯಟ್ಟು ಶಾಲೆ ಸ್ಥಾಪಿಸಿ ತರಬೇತಿ ನೀಡಲಾಗುತ್ತಿತ್ತು. ಇದ್ದಕ್ಕಿದಂತೆ ರಿಷಬ್ ಕಳರಿ ಪಟ್ಟುಗಳನ್ನು ಕಲಿಯುವುದು ಅಷ್ಟು ಸುಲಭವಾಗಿರಲಿಲ್ಲ. ದೇಹವನ್ನು ಭಾಗಿಸಿ ಬಳುಕಿಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ.
ಕಳರಿ ಪಯಟ್ಟು ವಿದ್ಯೆಯನ್ನು 'ಕಾಂತಾರ- 1' ಚಿತ್ರದಲ್ಲಿ ಯಥಾವತ್ತಾಗಿ ಬಳಸಿಕೊಂಡಿಲ್ಲ. ಆದರೆ ರಿಷಬ್ ಮಾಡಿರುವ ಸಾಹಸಗಳಲ್ಲಿ ಅದರ ಶೈಲಿಯನ್ನು ಅಲ್ಲಲ್ಲಿ ಗಮನಿಸಬಹುದು. ಇನ್ನು ಆ ಆಕ್ಷನ್ ಸನ್ನಿವೇಶಗಳಲ್ಲಿ ಡ್ಯೂಪ್ ಇಲ್ಲದೇ ಅಷ್ಟು ಲೀಲಾಜಾಲವಾಗಿ ನಟಿಸಲು ಕಳರಿ ವಿದ್ಯೆ ಸಹಾಯ ಮಾಡಿದೆ. ಜಿಮ್‌ನಲ್ಲಿ ಕಸರತ್ತು ಮಾಡುತ್ತಲೇ ಸ್ನಾಯುಗಳನ್ನು ಹಿಗ್ಗಿಸುವುದರ ಜೊತೆ ಜೊತೆಗೆ ಕಳರಿ, ಕುದುರೆ ಸವಾರಿಯನ್ನು ಕರಗತ ಮಾಡಿಕೊಂಡಿದ್ದಾರೆ.
ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಸಾಕಷ್ಟು ರಿಹರ್ಸಲ್ ಮಾಡಿ ಆಕ್ಷನ್ ಸನ್ನಿವೇಶಗಳಲ್ಲಿ ರಿಷಬ್ ನಟಿಸಿದ್ದಾರೆ. ಶೂಟಿಂಗ್ ವೇಳೆ ಗಾಯಗೊಂಡು ವಿಶ್ರಾಂತಿ ಪಡೆದಿದ್ದಾರೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಟೋಡರ್ ಲಾಜರೋವ್ ನಿರ್ದೇಶನದಲ್ಲಿ ವಾರ್ ಸೀಕ್ವೆನ್ಸ್ ಶೂಟ್ ಮಾಡಿದ್ದಾರೆ. ಅರ್ಜುನ್ ರಾಜ್ ಹಾಗೂ ರಾಮ್-ಲಕ್ಷ್ಮಣ್ ಮಾಸ್ಟರ್ ಕೂಡ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ.
ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ಹೀರೊ ಆಗಿ ನಟಿಸಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದ ನಟ, ನಿರ್ದೇಶಕ ಮತ್ತೊಬ್ಬರಿಲ್ಲ. ಅದರಲ್ಲೂ ಇಷ್ಟೆಲ್ಲಾ ರಿಸ್ಕ್ ತಗೊಂಡು ಚಿತ್ರದಲ್ಲಿ ನಟಿಸಿರುವುದು ವಿಶೇಷ. ಪ್ರಭಾಸ್, ಯಶ್, ಅಲ್ಲು ಅರ್ಜುನ್, ಜ್ಯೂ. ಎನ್‌ಟಿಆರ್, ರಾಮ್‌ಚರಣ್ ಪ್ಯಾನ್ ಇಂಡಿಯಾ ಹೀರೋಗಳು ಆಗಿರಬಹುದು. ಆದರೆ ನಿರ್ದೇಶಕ, ನಟ ಎರಡೂ ಆಗಿ ಅವರೆಲ್ಲರಿಗಿಂತ ರಿಷಬ್ ಶೆಟ್ಟಿ ಎತ್ತರದಲ್ಲಿ ನಿಲ್ಲುತ್ತಾರೆ.
'ಕಾಂತಾರ ಚಾಪ್ಟರ್- 2' ಸಿನಿಮಾ ಕೂಡ ಮಾಡುವುದಾಗಿ ಹೇಳಿದ್ದಾರೆ. ಆದರೆ ಯಾವಾಗ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಶೀಘ್ರದಲ್ಲೇ 'ಜೈ ಹನುಮಾನ್' ತಂಡವನ್ನು ರಿಷಬ್ ಶೆಟ್ಟಿ ಸೇರಿಕೊಳ್ಳಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಲಿದೆ. 'ಕಾಂತಾರ- 1' ಚಿತ್ರವನ್ನು ಈಗ ಇಂಗ್ಲೀಷ್ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.


Click it and Unblock the Notifications











