ದೊಡ್ಡ ನೋವು ಬದಿಗಿಟ್ಟು, ಅಭಿಮಾನಿಗಳ ಮುಂದೆ ಬರಲು ನಿರ್ಧರಿಸಿದ ನಟ ಶ್ರೀಮುರುಳಿ
ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಡಿಸೆಂಬರ್ 17ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಈ ಬಾರಿ ಅಭಿಮಾನಿಗಳಿಗಾಗಿ ಅವರ ಜೊತೆಗೆ ಬರ್ತ್‌ಡೇ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಫ್ಯಾನ್ಸ್‌ಗೆ ಪ್ರೀತಿಯ ಆಹ್ವಾನ ನೀಡಿದ್ದಾರೆ.
ಈ ವರ್ಷ ನಟ ಶ್ರೀಮುರಳಿ ಕುಟುಂಬಕ್ಕೆ ದೊಡ್ಡ ಹೊಡೆತ ಬಿದ್ದಿದೆ. ನಟ ವಿಜಯ ರಾಘವೇಂದ್ರ ಅವರ ಮುದ್ದಿನ ಮಡದಿ, ಮುರಳಿ ಅವರ ಅತ್ತಿಗೆ ಸ್ಪಂದನಾ ಅವರು ಅಕಾಲಿಕ ಮರಣ ಹೊಂದಿದ್ದಾರೆ. ಇದು ಮರೆಯುವಂತಹ ನೋವಲ್ಲ. ಆದರೂ, ಅಭಿಮಾನಿಗಳ ಒತ್ತಾಯಕ್ಕೆ ಶ್ರೀಮುರಳಿ ಮಣಿದಿದ್ದು, ಹುಟ್ಟುಹಬ್ಬ ಆಚರಣೆಗೆ ಅಸ್ತು ಎಂದಿದ್ದಾರೆ.

ಅಭಿಮಾನಿಗಳಿಗೆ ಶ್ರೀಮುರಳಿ ಪ್ರೀತಿಯ ಆಹ್ವಾನ
ಡಿಸೆಂಬರ್ 17ರ ಭಾನುವಾರದಂದು ಶ್ರೀಮುರಳಿ ಅವರ ಹುಟ್ಟುಹಬ್ಬವಿದೆ. ಹೀಗಾಗಿ ಅಭಿಮಾನಿಗಳನ್ನು ಭೇಟಿ ಮಾಡಲು ಬಯಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅಭಿಮಾನಿಗಳಿಗೆ ಹುಟ್ಟುಹಬ್ಬಕ್ಕೆ ಆಹ್ವಾನ ಮತ್ತು ವಿಶೇಷ ಮನವಿಯೊಂದು ಇದೆ.
"ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಶ್ರೀಮುರಳಿ. ನನ್ನ ಪ್ರೀತಿಯ ಅಭಿಮಾನಿಗಳೇ... ಇಷ್ಟು ವರ್ಷದ ಹುಟ್ಟುಹಬ್ಬಕ್ಕೆ ಸೇರಲು ಆಗಿರಲಿಲ್ಲ. ಯಾಕೆ ಎಂಬುದಕ್ಕೆ ಕಾರಣ ನಿಮಗೂ ಗೊತ್ತು. ಈ ಬಾರಿಯೂ ಸೇರುವ ಪರಿಸ್ಥಿತಿ ಇರಲಿಲ್ಲ. ಬಟ್...ಆದ್ರೂ, ಅಭಿಮಾನಿಗಳ ಒತ್ತಾಯದ ಮೇರೆಗೆ , ನೀವು ಕೊಡ್ತಿರೋ ಪ್ರೀತಿ, ಏನ್ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ನಿಮ್ಮ ಆಜ್ಞೆಯಂತೆಯೇ ನಡೀಬೇಕು. ಹಾಗಾಗಿ ಈ ವರ್ಷ ನಿಮ್ಮನ್ನೆಲ್ಲ ಭೇಟಿ ಮಾಡೋಕೆ ನನಗೊಂದು ಅವಕಾಶ ಇದೆ" ಎಂದಿದ್ದಾರೆ.
"ಇದೇ ಡಿಸೆಂಬರ್ 17ನೇ ತಾರೀಖು, ದೇವರಾಜ್ ಅರಸ್ ಭವನ್, ಮಿಲರ್ಸ್ ರೋಡ್, ಅಂಬೇಡ್ಕರ್ ಭವನದ ಹಿಂದಿರುವ ಜಾಗ. ಇದೇ ವಸಂತ ನಗರದಲ್ಲಿ ಬೆಳಗ್ಗೆ 10:30 ನಂತರ ನಾನು ಪ್ರತಿಯೊಬ್ಬರನ್ನು ಭೇಟಿ ಮಾಡುತ್ತಿನಿ. ಯಾರ್ಯಾರು ನೋಡಬೇಕು, ಮೀಟ್ ಮಾಡಬೇಕೋ, ಜೊತೆಗೆ ಸೇರೋಣ. ಇದೊಂದು ಮೀಟ್ ಅಂಡ್ ಗ್ರೀಟ್" ಎಂದು ಮುರಳಿ ಹೇಳಿದ್ದಾರೆ.

ಅಭಿಮಾನಿಗಳಲ್ಲಿ ಶ್ರೀಮುರಳಿ ವಿಶೇಷ ಮನವಿ
ಅಭಿಮಾನಿಗಳಿಗೆ ಪ್ರೀತಿಯ ಆಹ್ವಾನ ನೀಡಿರುವ ನಟ ಶ್ರೀಮುರಳಿ ಮತ್ತೊಂದು ಮನವಿ ಮಾಡಿದ್ದಾರೆ. "ಮತ್ತೊಂದು ನನ್ನ ಮನವಿ. ದಯವಿಟ್ಟು ನಾನು ಕೇಳಿಕೊಳ್ಳುವುದೇನೆಂದರೇ, ಯಾರೂ ಹಾರ, ಮತ್ತೊಂದು ಮಗದೊಂದು.. ಗಿಫ್ಟ್ ಅಂತ ಹಣ ಖರ್ಚು ಮಾಡಬೇಡಿ. ಅದು ನಿಮ್ಮ ದುಡಿಮೆ. ಅದರಿಂದ ನಿಮಗೆ ಒಳ್ಳೆಯದಾಗಬೇಕು. ಇದಕ್ಕೆಲ್ಲ ಖರ್ಚು ಮಾಡಬೇಡಿ. ಮನಸ್ಸಿದ್ದರೆ...ನಿಮಗೆ ಅನುಕೂಲವಿದ್ದರೇ ಅನಾಥಾಶ್ರಮಕ್ಕೆ ನೀಡಿ, ದಾನ ಧರ್ಮ ಮಾಡಿ. ಇಲ್ಲಿಗೆ ಖಾಲಿ ಕೈಯಲ್ಲಿ ಬನ್ನಿ. ಮನಸ್ಸು ಬಿಚ್ಚಿ ಮಾತನಾಡೋಣ. ನಿಮಗಾಗಿ, ನಿಮ್ಮನ್ನು ಭೇಟಿ ಮಾಡುವ ಉದ್ದೇಶಕ್ಕೆ ಮಾತ್ರ ಈ ಭೇಟಿ. ನಿಮ್ಮನ್ನು ನೋಡಲು ನಾನು ಕಾಯ್ತಾ ಇರ್ತೀನಿ ಬನ್ನಿ ಸಿಗೋಣ" ಎಂದು ವಿಡಿಯೋ ಸಂದೇಶ ಶೇರ್ ಮಾಡಿದ್ದಾರೆ.
ಇನ್ನು, ನಟನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಾಳೆ 'ಬಘೀರ' ಟೀಸರ್ ರಿಲೀಸ್ ಆಗಲಿದೆ. ಡಿಸೆಂಬರ್ 17ರಂದು ಬೆಳಗ್ಗೆ 9:45ಕ್ಕೆ ಟೀಸರ್ ರಿಲೀಸ್ ಅನಾವರಣವಾಗಲಿದೆ. ಬಘೀರನಿಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡುತ್ತಿದೆ.


Click it and Unblock the Notifications











