ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗನ ಮದುವೆಗೆ ಯಶ್ ರಾಕಿಂಗ್ ಎಂಟ್ರಿ; ಫ್ಯಾನ್ಸ್ ಖುಷ್
ರಾಕಿಂಗ್ ಸ್ಟಾರ್ ಯಶ್ 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಮ್ಮಿಯಾಗಿದೆ. ನಿನ್ನೆ(ಜೂನ್ 7) ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗನ ಮದುವೆ ಸಮಾರಂಭಕ್ಕೆ ಯಶ್ ಹಾಜರಾಗಿದ್ದರು. ನವಜೋಡಿಗೆ ಶುಭ ಹಾರೈಸಿದ್ದಾರೆ.
ಯಡಿಯೂರಪ್ಪ ಮೊಮ್ಮಗ, ಸಂಸದ ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್ ಆರತಕ್ಷತೆ ಕಾರ್ಯಕ್ರಮ ಬೆಂಗಳೂರು ಅರಮನೆ ಮೈದಾನದಲ್ಲಿ ನಡೀತು. ಸಾಕಷ್ಟು ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ಉದ್ಯಮಿಗಳು ಈ ಕಲ್ಯಾಣೋತ್ಸವಕ್ಕೆ ಸಾಕ್ಷಿ ಆಗಿದ್ದರು. ನಟ ಯಶ್ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಯಶ್ ಖಡಕ್ ಲುಕ್‌ನಲ್ಲಿ ಸಮಾರಂಭಕ್ಕೆ ಬಂದು ಹೋಗಿರುವ ಫೋಟೊ ವೀಡಿಯೋಗಳು ವೈರಲ್ ಆಗುತ್ತಿದೆ. ನೀಲಿ ಬಣ್ಣದ ಕುರ್ತಾ ಧರಿಸಿ ಗಡ್ಡ, ಮೀಸೆಯ ರಗಡ್ ಲುಕ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದರು. ನೆಚ್ಚಿನ ನಟನ ಕೈ ಕುಲುಕಲು ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಅದಕ್ಕೆ ಸಂಬಂಧಿಸಿ ವೀಡಿಯೋಗಳು ವೈರಲ್ ಆಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಾಕಷ್ಟು ಗಣ್ಯರು ಈ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇಂದು(ಜೂನ್ 8) ಸುಭಾಷ್ ಹಾಗೂ ಶ್ರಾವಣಾ ಮದುವೆ ನೆರವೇರಿದೆ. ಮಾರ್ಚ್ 24ರಂದು ಕಲಬುರಗಿಯಲ್ಲಿ ಬಿವೈ ರಾಘವೇಂದ್ರ ಪುತ್ರ ಸುಭಾಷ್ ಮದುವೆ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಅಂದಹಾಗೆ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ-ದೀಪಾಲಿ ದಂಪತಿಯ ಪುತ್ರಿ ಶ್ರಾವಣ ಎಂಬುವವರ ಜೊತೆ ಸುಭಾಷ್ ಮದುವೆ ನಡೆದಿದೆ.
ಸುಭಾಷ್ -ಶ್ರಾವಣ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ರಾಷ್ಟ್ರೀಯ ರಾಜಕೀಯ ಮುಖಂಡರು ಹಾಜರಾಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ ನಡ್ಡಾ, ಉಪರಾಷ್ಟ್ರಪತಿ ಜಗದೀಪ್ ಧನಕರ್ , ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ, ಆಂಧ್ರ ಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮುಖರು. ಇನ್ನುಳಿದಂತೆ ರಾಜ್ಯದ ಕೆಲ ಶಾಸಕರು, ಸಚಿವರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. "ಇಂದು ಬೆಂಗಳೂರಿನ ಅರಮನೆಯಲ್ಲಿ ನಡೆದ ಶಿವಮೊಗ್ಗ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಮತ್ತು ಶ್ರೀಮತಿ ತೇಜಸ್ವಿನಿ ಅವರ ಸುಪುತ್ರನಾದ ಸುಭಾಷ್ ಹಾಗೂ ಶ್ರಾವಣ ಅವರ ಮದುವೆ ಅರತಕ್ಷತೆಯಲ್ಲಿ ಪಾಲ್ಗೊಂಡು ವಧು-ವರನಿಗೆ ಶುಭ ಹಾರೈಸಿದೆ" ಬರೆದುಕೊಂಡಿದ್ದಾರೆ.
ಇನ್ನು ಯಶ್ ಸದ್ಯ 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಮುಂಬೈನಲ್ಲಿ ಚಿತ್ರೀಕರಣ ನಡೀತಿದೆ. ಇತ್ತೀಚೆಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಸಾಹಸ ಸಂಯೋಜನೆ ಮಾಡುತ್ತಿರುವ ಫೋಟೊಗಳು ವೈರಲ್ ಆಗಿತ್ತು. 60 ದಿನಗಳ ಕಾಲ ಚಿತ್ರಕ್ಕಾಗಿ ಕಾಲ್‌ಶೀಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಇಂದ್ರದೇವನ ಜೊತೆಗಿನ ರಾವಣನ ಯುದ್ಧದ ಸನ್ನಿವೇಶಗಳನ್ನು ಸೆರೆಹಿಡಿಯುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಯಶ್ 'ಟಾಕ್ಸಿಕ್' ಚಿತ್ರ ನಿರ್ಮಿಸಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಈ ಆಕ್ಷನ್ ಥ್ರಿಲ್ಲರ್ ತೆರೆಗೆ ಬರಲಿದೆ. ಸದ್ಯ 'ಟಾಕ್ಸಿಕ್' ಚಿತ್ರೀಕರಣದಿಂದ ಬಿಡುವು ಪಡೆದು 'ರಾಮಾಯಣ' ತಂಡ ಸೇರಿಕೊಂಡಿದ್ದಾರೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಈ ಚಿತ್ರಕ್ಕೂ ಹಣ ಹೂಡಿದ್ದಾರೆ. ಅಂದಹಾಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೆವಿಎನ್ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರಿದೆ.


Click it and Unblock the Notifications











