ಮುಂಬೈ, ಹೈದ್ರಾಬಾದ್, ಬೆಂಗಳೂರು ಎಲ್ಲೆಲ್ಲೂ ರಾಕಿ ಕ್ರೇಜ್; ರೆಸ್ಟೋರೆಂಟ್‌ನಲ್ಲಿ ಪತ್ನಿ ಜೊತೆ ಯಶ್ ಮಿಂಚಿಂಗ್
ರಾಕಿಂಗ್ ಸ್ಟಾರ್ ಯಶ್ ಸದ್ಯ ಎರಡು ಪ್ಯಾನ್ ವರ್ಲ್ಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ನಟಿಸುವುದರ ಜೊತೆಗೆ ತಮ್ಮದೇ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಎರಡೂ ಸಿನಿಮಾಗಳು ಮುಂದಿನ ವರ್ಷ ತೆರೆಗೆ ಬರಲಿದೆ. ಇನ್ನು ಯಶ್ ಎಲ್ಲೇ ಹೋಗಲಿ ಎಲ್ಲೇ ಬರಲಿ ಹವಾ ಜೋರಾಗಿ ಇರುತ್ತದೆ.
ಇತ್ತೀಚೆಗೆ ಮುಂಬೈನಲ್ಲಿ 'ರಾಮಾಯಣ' ಸಿನಿಮಾ ಚಿತ್ರೀಕರಣದಲ್ಲಿ ಯಶ್ ಭಾಗಿ ಆಗಿದ್ದರು. ಕೊಂಚ ಬಿಡುವು ಮಾಡಿಕೊಂಡು ಮೊನ್ನೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮೊಮ್ಮಗನ ಮದುವೆ ಸಮಾರಂಭಕ್ಕೆ ಯಶ್ ಹಾಜರಾಗಿದ್ದರು. ಅದರ ಬೆನ್ನಲ್ಲೇ ತೆಲುಗು ನಟ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಯಶ್ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಮುಖ್ಯವಾಗಿ ಯಶ್ ಲುಕ್, ಖದರ್, ಸ್ವ್ಯಾಗ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಎಷ್ಟೇ ಜನರ ನಡುವೆ ಇದ್ದರೂ ರಾಕಿಂಗ್ ಸ್ಟಾರ್ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ 'ರಾಮಾಯಣ' ಶೂಟಿಂಗ್ ಸೆಟ್‌ನಿಂದ ಒಂದಷ್ಟು ಫೋಟೊಗಳು ಹೊರಬಂದಿತ್ತು. ಹಾಲಿವುಡ್ ಸ್ಟಂಟ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಆಕ್ಷನ್ ಸೀಕ್ವೆನ್ಸ್ ಗ್ಲಿಂಪ್ಸ್ ಅದು. ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಚಿತ್ರದಲ್ಲಿ ರಾವಣನಾಗಿ ಯಶ್ ಬಣ್ಣ ಹಚ್ಚಿರುವುದು ಗೊತ್ತೇಯಿದೆ. ಚಿತ್ರಕ್ಕಾಗಿ 60 ದಿನಗಳ ಕಾಲ ಕಾಲ್‌ಶೀಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. 'ಟಾಕ್ಸಿಕ್' ಸಿನಿಮಾ ನಡುವೆಯೇ 'ರಾಮಾಯಣ' ಶೂಟಿಂಗ್ ಕೂಡ ಮಾಡಿ ಮುಗಿಸುತ್ತಿದ್ದಾರೆ.
ರಾವಣನಾಗಿ ಯಶ್ ಖಡಕ್ ಲುಕ್ ಹೇಗಿರುತ್ತದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಗಡ್ಡ ಟ್ರಿಮ್ ಮಾಡಿ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ಸದ್ಯ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಲುಕ್ 'ರಾಮಾಯಣ' ಚಿತ್ರದಲ್ಲಿ ಇರುತ್ತಾ ಕಾದು ನೋಡಬೇಕಿದೆ. ಇನ್ನು ಯಶ್ ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. 'KGF' ರಾಕಿಭಾಯ್ ಪಾತ್ರ ಹುಟ್ಟಾಕಿರುವ ಕ್ರೇಜ್ ಅಂಥಾದ್ದು. ಇನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಯಶ್ ಭಾಗಿ ಆಗಿಬಿಟ್ಟರೆ ಮುಗಿದೇ ಹೋಯ್ತು. ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಾರೆ.
ಯಶ್ ಕ್ರೇಜ್
ನೀಲಿ ಬಣ್ಣದ ಕುರ್ತಾ ಧರಿಸಿ ಸಂಸದ ಬಿ ವೈ ರಾಘವೇಂದ್ರ ಮತ್ತು ತೇಜಸ್ವಿನಿ ದಂಪತಿ ಪುತ್ರ ಸುಭಾಷ್ ಹಾಗೂ ಶ್ರಾವಣಿ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಯಶ್ ಬಂದಿದ್ದರು. ಬೆಂಗಳೂರು ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಮದುವೆ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಯಶ್ ಆಗಮಿಸಿ ಮಾಜಿ ಸಿಎಂ ಬಿಎಸ್‌ವೈ ಅವರನ್ನು ಮಾತನಾಡಿಸಿ ಬಳಿಕ ವೇದಿಕೆಯಲ್ಲಿ ನವಜೋಡಿಗೆ ಹಾರೈಸಿ ಹೊರಟರು. ಅಭಿಮಾನಿಗಳು ಕೈ ಕುಲುಕಲು, ಫೋಟೊ ಕ್ಲಿಕ್ಕಿಸಲು ಮುಗಿಬಿದ್ದರು.
ಯಶ್ ಸ್ಟೈಲಿಶ್ ಲುಕ್
ಶುಕ್ರವಾರ ತೆಲುಗು ನಟ ನಾಗಾರ್ಜುನ ಪುತ್ರ ಅಖಿಲ್ ಹಾಗೂ ಜೈನಾಬ್ ರಾವ್ಜಿ ಹಸೆಮಣೆ ಏರಿದ್ದರು. ಭಾನುವಾರ ಹೈದರಾಬಾದ್‌ನಲ್ಲೇ ಭರ್ಜರಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿತ್ತು. ದಕ್ಷಿಣ ಭಾರತದ ಸಾಕಷ್ಟು ನಟ ನಟಿಯರು ಸಮಾರಂಭಕ್ಕೆ ಹಾಜರಾಗಿ ನವಜೋಡಿಗೆ ಶುಭ ಹಾರೈಸಿದ್ದರು. ನಟ ಯಶ್ ಕೂಡ ಸ್ಟೈಲಿಶ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಹಸಿರು ಬಣ್ಣದ ಬ್ಲೇಸರ್ ಸೂಟ್ ಧರಿಸಿದ್ದ ಯಶ್, ಅದಕ್ಕೊಪ್ಪುವ ಸ್ಟೈಲಿಶ್ ಹೆಡ್ ಬ್ಯಾಂಡ್ ತೊಟ್ಟು ಮಿಂಚಿದ್ದಾರೆ. ಕಿಚ್ಚ ಸುದೀಪ್ ಕೂಡ ಅಖಿಲ್ ಮದುವೆ ಸಂಭ್ರಕ್ಕೆ ಸಾಕ್ಷಿ ಆಗಿದ್ದರು.
ರೆಸ್ಟೋರೆಂಟ್‌ನಲ್ಲಿ ರಾಕಿ ಹಂಗಾಮ
ಇತ್ತೀಚೆಗೆ ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಬೆಂಗಳೂರಿನ ಬಾಸ್ಟಿಯನ್ ಗಾರ್ಡನ್ ಸಿಟಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಡಿಜೆ ಕೇಳುತ್ತಾ ಎಂಜಾಯ್ ಮಾಡುತ್ತಿದ್ದ ಜನ ರಾಕಿಂಗ್ ಸ್ಟಾರ್ ನೋಡಿ ಫಿದಾ ಆಗಿದ್ದಾರೆ. ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.


Click it and Unblock the Notifications











