ಅಪ್ಪು ನೆನಪಿನಲ್ಲಿ 25 ಆಂಬುಲೆನ್ಸ್ ಕೊಡ್ತೀನಿ ಎಂದು ಪ್ರಕಾಶ್ ರಾಜ್‌ಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡ್ರಾ ಯಶ್?

ಕಳೆದ ವರ್ಷ ಅಕ್ಟೋಬರ್ 21ರಂದು ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಅಪ್ಪು ಕನಸಿನ ಕೂಸು ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ ಕುಟುಂಬ ಸೇರಿದಂತೆ ಕನ್ನಡದ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಇನ್ನೂ ಹಲವಾರು ಕಲಾವಿದರು ಆಗಮಿಸಿದ್ದರು. ಸ್ಯಾಂಡಲ್‌ವುಡ್ ಅಲ್ಲದೇ ಸೌತ್ ಇಂಡಿಯಾದ ಇತರೆ ಇಂಡಸ್ಟ್ರಿಗಳಿಂದಲೂ ಸಹ ನಟರು ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ತಮಿಳು ನಟ ಸೂರ್ಯ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದರ ಮೂಲಕ ಪುನೀತ್ ರಾಜ್‌ಕುಮಾರ್ ಮಾಡಿದ ಸಾಧನೆ ಹಾಗೂ ಸಹಾಯವನ್ನು ಶ್ಲಾಘಿಸಿದರು. ಅದರ ಜತೆಗೆ ಇದೇ ಸಂದರ್ಭದಲ್ಲಿ ಯಶ್ ತಾವೂ ಸಹ ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ಒಳ್ಳೆಯ ಕೆಲಸವೊಂದನ್ನು ಮಾಡಲು ಮುಂದಾಗುವುದಾಗಿ ಮಾತು ನೀಡಿದ್ದರು.
ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ನಂತರ ಅವರ ನೆನಪಿನಲ್ಲಿ ಹಿರಿಯ ನಟ ಪ್ರಕಾಶ್ ರಾಜ್ ಅವರು ಉಚಿತ ಆಂಬುಲೆನ್ಸ್ ಸೇವೆಯನ್ನು ಶುರು ಮಾಡಿ ಅದಕ್ಕೆ 'ಅಪ್ಪು ಎಕ್ಸ್‌ಪ್ರೆಸ್' ಎಂಬ ಹೆಸರನ್ನು ಇಟ್ಟಿದ್ದರು. ಒಂದು ಆಂಬುಲೆನ್ಸ್ ಆರಂಭಿಸಿದ್ದ ಪ್ರಕಾಶ್ ರಾಜ್ ಕರ್ನಾಟಕದ ಪ್ರತಿ ಜಿಲ್ಲೆಗೂ ಸಹ ಉಚಿತ ಆಂಬುಲೆನ್ಸ್ ಒದಗಿಸುವ ಗುರಿಯನ್ನು ಹೊಂದಿದ್ದರು. ಇನ್ನು ಗಂಧದ ಗುಡಿ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಕಾಶ್ ರಾಜ್ ಈ ವಿಷಯವಾಗಿ ಮಾತನಾಡಿದ್ದರು.
ಅಪ್ಪು ನಿಧನದ ನಂತರ ಅವರ ನೆನಪಿನಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿಯೂ ಅಪ್ಪು ಎಕ್ಸ್‌ಪ್ರೆಸ್ ಹೆಸರಿನಡಿಯಲ್ಲಿ ಆಂಬ್ಯುಲೆನ್ಸ್ ಸೇವೆ ನೀಡಲು ನಿರ್ಧರಿಸಿದ್ದೆ ಎಂದು ಪ್ರಕಾಶ್ ರಾಜ್ ಹೇಳಿದ್ದರು. 'ಮನಸ್ಸಿನಲ್ಲಿ ಅಂದುಕೊಳ್ಳುವುದಿಲ್ಲ ಏನಾದರೂ ಮಾಡಬೇಕು ಪ್ರಕಾಶ್ ಸರ್' ಎಂದು ಅಪ್ಪು ಹೇಳಿದ್ದ ಮಾತೇ ಈ ಕೆಲಸ ಮಾಡಲು ಸ್ಫೂರ್ತಿ ಎಂದು ಪ್ರಕಾಶ್ ರಾಜ್ ಹೇಳಿಕೊಂಡರು. ಹಾಗಾಗಿಯೇ ಮೈಸೂರಿನಲ್ಲಿ ಒಂದು ಆಂಬ್ಯುಲೆನ್ಸ್ ಸೇವೆ ಆರಂಭಿಸಿ ಅಪ್ಪು ಎಕ್ಸ್‌ಪ್ರೆಸ್ ಶುರುಮಾಡಿದೆ ಎಂದು ಪ್ರಕಾಶ್ ರಾಜ್ ತಿಳಿಸಿದ್ದರು.
ಹೀಗೆ ಅಪ್ಪು ಹೆಸರಿನಡಿಯಲ್ಲಿ ರಾಜ್ಯದ ಪೂರ್ತಿ ಆಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿರುವ ಪ್ರಕಾಶ್ ರಾಜ್ ಅವರ ಯೋಜನೆಗೆ ಸ್ಪಂದಿಸಿದ ಯಶ್ ಗಂಧದಗುಡಿ ವೇದಿಕೆ ಮೇಲೆ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಘೋಷಿಸಿದರು. 'ಅನ್ಯತಾ ಭಾವಿಸಬೇಡಿ, ನನ್ನದು ಯಶೋಮಾರ್ಗ ಎಂಬ ಫೌಂಡೇಶನ್ ಇದೆ, ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಒದಗಿಸುವ ಸೇವೆಯನ್ನು ನಾನು ನನ್ನ ಸ್ನೇಹಿತ ಮಾಡುತ್ತೇವೆ. ನಮ್ಮ ಅಪ್ಪು ಅವರ ಹೆಸರಿನಲ್ಲಿ ನೀವು ಈ ಯೋಜನೆ ಆರಂಭಿಸಿದ್ದೀರಾ, ಆ ಕನಸು ಈ ಕ್ಷಣದಿಂದಲೇ ನನಸಾಗಬೇಕು, ಉಳಿದ 25 ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಸೇವೆ ಒದಗಿಸುತ್ತೇನೆ' ಎಂದು ಹೇಳಿಕೆ ನೀಡಿದ್ದರು. ಹೀಗೆ ಯಶ್ ಹೇಳಿಕೆ ನೀಡುತ್ತಿದ್ದಂತೆ ಭಾವುಕರಾದ ಪ್ರಕಾಶ್ ರಾಜ್ ತಮ್ಮ ಸೀಟಿನಿಂದ ಎದ್ದು ನಿಂತು ಯಶ್ ಅವರಿಗೆ ಕೈಮುಗಿದು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು ಹಾಗೂ ವೇದಿಕೆಗೆ ಓಡಿಹೋಗಿ ಯಶ್ ಅವರನ್ನು ಅಪ್ಪಿಕೊಂಡಿದ್ದರು.
ಹೀಗೆ ಅಂದು ಯಶ್ ಕೊಟ್ಟಿದ್ದ ಈ ಮಾತನ್ನು ಉಳಿಸಿಕೊಂಡ್ರಾ ಎಂಬ ಪ್ರಶ್ನೆ ಎದ್ದಿತ್ತು ಹಾಗೂ ಕೆಲ ಕಿಡಿಗೇಡಿಗಳು ಈ ಕುರಿತು ಕೆಲ ದಿನಗಳ ಹಿಂದೆ ಕೇವಲ ಘೋಷಣೆಯಷ್ಟೇ ಎಂದು ಟ್ರೋಲ್ ಕೂಡ ಮಾಡಿದ್ದರು. ಆದರೆ ಯಶ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್ ಅವರಿಗೆ 5 ಆಂಬುಲೆನ್ಸ್‌ಗಳನ್ನು ತಲುಪಿಸಿದ್ದಾರೆ. ಇನ್ನೂ ಉಳಿದ ಆಂಬುಲೆನ್ಸ್‌ಗಳು ಶೀಘ್ರದಲ್ಲಿಯೇ ತಲುಪಲಿವೆ. ಯಶ್ ಮಾಡಿದ ಈ ಸಹಾಯವನ್ನು ಪ್ರಕಾಶ್ ರಾಜ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಯಶ್ ಕಳುಹಿಸಿಕೊಟ್ಟ ಆಂಬುಲೆನ್ಸ್ ಚಿತ್ರಗಳನ್ನು ಹಂಚಿಕೊಳ್ಳುವುದರ ಜತೆಗೆ ವಿಶೇಷ ವಿಡಿಯೊವೊಂದನ್ನೂ ಸಹ ಅಪ್‌ಲೋಡ್ ಮಾಡಿರುವ ಪ್ರಕಾಶ್ ರಾಜ್ ಮೊದಲಿಗೆ ಮೈಸೂರಿಗೆ ಒಂದು ಆಂಬುಲೆನ್ಸ್ ಆರಂಭಿಸಿದ್ದೆ, ಈಗ ನಾನು ಒಬ್ಬಂಟಿಯಲ್ಲ ನನ್ನ ಜತೆ ಸೂರ್ಯ, ಚಿರಂಜೀವಿ, ನನ್ನ ಡಾರ್ಲಿಂಗ್ ಯಶ್ ಹಾಗೂ ಅವರ ಸ್ನೇಹಿತ ವೆಂಕಟ್ ಇದ್ದಾರೆ. ಈಗ ಎರಡನೇ ಹಂತದಲ್ಲಿ ಬೀದರ್, ಕಲಬುರಗಿ, ಉಡುಪಿ, ಚಾಮರಾಜನಗರ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಈ ಆಂಬುಲೆನ್ಸ್‌ಗಳನ್ನು ನೀಡುತ್ತಿದ್ದೇವೆ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.


Click it and Unblock the Notifications











