ಮೋದಿ ಭೇಟಿ ಮಾಡಿದ ಸ್ಯಾಂಡಲ್‌ವುಡ್ ಸ್ಟಾರ್ಸ್; ಯಶ್ - ಮೋದಿ ನಡುವೆ ನಡೆದ ಮಾತುಕತೆ ಏನು?
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ ( ಫೆಬ್ರವರಿ 13 ) ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2023 ಕಾರ್ಯಕ್ರಮಕ್ಕೆ ಭಾಗವಹಿಸುವ ಸಲುವಾಗಿ ಸಿಲಿಕಾನ್ ಸಿಟಿಗೆ ಆಗಮಿಸಿದ್ದಾರೆ. ಇನ್ನು ನಿನ್ನೆ ( ಫೆಬ್ರವರಿ 12 ) ರಾತ್ರಿ ನರೇಂದ್ರ ಮೋದಿ ಕನ್ನಡ ಚಿತ್ರರಂಗದ ಕಲೆ ಪ್ರಮುಖ ಕಲಾವಿದರು ಹಾಗೂ ನಿರ್ಮಾಪಕರನ್ನು ಭೇಟಿ ಮಾಡಿ ಭೋಜನ ಸವಿದಿದ್ದಾರೆ.
ಹೌದು, ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು, ನಟ ರಾಕಿಂಗ್ ಸ್ಟಾರ್ ಯಶ್, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ಪಿಆರ್‌ಕೆ ಪ್ರೊಡಕ್ಷನ್ಸ್‌ನ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಖ್ಯಾತ ರೇಡಿಯೊ ಜಾಕಿ ಅಯ್ಯೋ ಶ್ರದ್ಧಾ ಅವರನ್ನು ಭೇಟಿ ಮಾಡಿದ್ದಾರೆ.
ನಿನ್ನೆಯೇ ಯಶ್, ರಿಷಬ್ ಶೆಟ್ಟಿ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇಂದು ಬೆಳಗ್ಗೆ ಈ ಭೇಟಿಯ ಫೋಟೊಗಳು ಹೊರಬಿದ್ದಿದ್ದು, ವೈರಲ್ ಆಗಿದ್ದ ಈ ಸುದ್ದಿ ನಿಜವಾಗಿದೆ. ಇನ್ನು ಈ ಐವರೂ ಸಹ ನರೇಂದ್ರ ಮೋದಿ ಅವರ ಜತೆ ಪ್ರತ್ಯೇಕ ಫೋಟೊ ತೆಗೆಸಿಕೊಂಡಿದ್ದು, ಗ್ರೂಪ್ ಫೋಟೊಗೂ ಸಹ ಪೋಸ್ ನೀಡಿದ್ದಾರೆ. ಈ ಫೋಟೊಗಳನ್ನು ನೋಡಿದ ಸಿನಿ ರಸಿಕರು ಹಾಗೂ ಇವರ ಅಭಿಮಾನಿಗಳು ಮೋದಿ ಭೇಟಿ ಮಾಡಿದ ತಮ್ಮ ನೆಚ್ಚಿನ ನಟರು ಹಾಗೂ ನಿರ್ಮಾಪಕರು ಯಾವ ವಿಷಯದ ಬಗ್ಗೆ ಮಾತನಾಡಿರಬಹುದು ಎಂಬ ಕುತೂಹಲವಿತ್ತು. ಸದ್ಯ ಈ ಕುತೂಹಲಗಳಿಗೆ ಒಂದೊಂದಾಗಿ ಉತ್ತರಗಳು ಲಭಿಸುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಇಟ್ಟ ದೊಡ್ಡ ಮನವಿಯೊಂದು ಹೊರಬಿದ್ದಿದೆ.

ಯಶ್ ಮಾಡಿದ ಮನವಿ ಏನು?
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಕರ್ನಾಟಕದಲ್ಲೇ ಒಂದು ಸುಸಜ್ಜಿತ ಫಿಲ್ಮ್ ಸಿಟಿಯನ್ನು ನಿರ್ಮಿಸಿಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲರ ಪರವಾಗಿ ಯಶ್ ಈ ಬೇಡಿಕೆಯನ್ನು ಇಟ್ಟಿದ್ದು, ಒಂದೊಳ್ಳೆ ಸೌಕರ್ಯವಿರುವ ಫಿಲ್ಮ್ ಸಿಟಿಯನ್ನು ರಾಜ್ಯದಲ್ಲಿಯೇ ನಿರ್ಮಿಸಿದರೆ ವಿದೇಶಗಳಿಗೆ ಹೋಗಿ ಶೂಟಿಂಗ್ ಮಾಡುವ ಹೊರೆ ಕಡಿಮೆ ಆಗಲಿದೆ ಎಂದು ಯಶ್ ಮೋದಿ ಜತೆ ಮಾತನಾಡಿದ್ದಾರೆ. ಯಶ್ ಅವರ ಈ ಬೇಡಿಕೆಯನ್ನು ಮೋದಿ ಈಡೇರಿಸುತ್ತಾರಾ ಎಂಬ ಪ್ರಶ್ನೆ ಎದ್ದಿದ್ದು, ಸಿನಿ ರಸಿಕರು ಯಶ್ ಬೇಡಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರದ ಬಳಿಯೂ ಸಹ ನಟ ಯಶ್ ಇದೇ ರೀತಿಯ ಮನವಿ ಮಾಡಿಕೊಂಡಿದ್ದರು.

ಕನ್ನಡ ಚಿತ್ರಗಳನ್ನು ಕೊಂಡಾಡಿದ ಮೋದಿ
ಇನ್ನು ನರೇಂದ್ರ ಮೋದಿ ಈ ಸಂದರ್ಭದಲ್ಲಿ ಕನ್ನಡದ ಚಿತ್ರಗಳಾದ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳನ್ನು ಕೊಂಡಾಡಿದ್ದು, ಇದೇ ರೀತಿ ಒಳ್ಳೊಳ್ಳೆ ಚಿತ್ರಗಳನ್ನು ಕನ್ನಡ ಚಿತ್ರರಂಗ ನೀಡಲಿ ಎಂದು ಆಶಿಸಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೈ ಸಹ ಮೋದಿ ಜತೆ ಮಾತನಾಡಿದ್ದು, ತಮ್ಮ ಸಂಸ್ಥೆಯಡಿ ಮೂಡಿ ಬರುತ್ತಿರುವ ಚಿತ್ರಗಳ ಬಗ್ಗೆ ಹೇಳಿಕೊಂಡಿದ್ದಾರೆ ಹಾಗೂ ಮೋದಿ ಇನ್ನೂ ಹೆಚ್ಚೆಚ್ಚು ಒಳ್ಳೆ ಚಿತ್ರಗಳನ್ನು ನಿರ್ಮಿಸಿ ಎಂದು ಶುಭ ಕೋರಿದ್ದಾರೆ.

ಖುಷಿ ಹಂಚಿಕೊಂಡ ರಿಷಬ್
ಇತ್ತ ನರೇಂದ್ರ ಮೋದಿ ಅವರನ್ನು ಭೇಟಿಯಾದದ್ದರ ಕುರಿತು ರಿಷಬ್ ಶೆಟ್ಟಿ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಮೋದಿ ಜತೆ ಕ್ಲಿಕ್ಕಿಸಿಕೊಂಡ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಿಷಬ್ ಶೆಟ್ಟಿ "ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಭಾರತ ಹಾಗೂ ಕರ್ನಾಟಕದ ಅಭಿವೃದ್ಧಿಯಲ್ಲಿ ಮನರಂಜನಾ ಕ್ಷೇತ್ರ ಪಾತ್ರದ ಬಗ್ಗೆ ಚರ್ಚಿಸಲಾಯಿತು, ಉತ್ತಮ ಭಾರತ ನಿರ್ಮಿಸುವಲ್ಲಿ ಕೊಡುಗೆ ನೀಡುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನಿಮ್ಮ ದೂರದೃಷ್ಟಿ ನಾಯಕತ್ವ ನಮಗೆ ಸ್ಪೂರ್ತಿ ಮತ್ತು ನಿಮ್ಮ ಬೆಂಬಲ ನಮಗೆ ಪ್ರಪಂಚವಿದ್ದಂತೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











