ರಾಯ- ಟಿಕೆಟ್ ಗುಟ್ಟು ರಟ್ಟು; ಅಯ್ಯಯ್ಯೋ, 'ಟಾಕ್ಸಿಕ್' ಚಿತ್ರದ ಸಂಪೂರ್ಣ ಕಥೆ ಹೇಳಿಬಿಟ್ರಲ್ಲ ಯಶ್!
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣ ಮಾಡುತ್ತಿರುವ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಜೂನ್ 4ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
ಇಲ್ಲಿಯವರೆಗೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಚಿತ್ರತಂಡ ಮಾತನಾಡಿರಲಿಲ್ಲ. ಯಶ್ ಅಂತೂ ಮಾಧ್ಯಮಗಳ ಮುಂದೆ ಬಂದು ವರ್ಷಗಳೇ ಕಳೆದಿದೆ. 'ರಾಮಾಯಣ' ಚಿತ್ರದ ಪ್ರಚಾರಕ್ಕಾಗಿ ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಭಾಗಿ ಆಗಿದ್ದಾರೆ. ಇದೇ ವೇಳೆ 'ಟಾಕ್ಸಿಕ್' ಚಿತ್ರದ ಬಗ್ಗೆ ಕೂಡ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಚಿತ್ರದ ಕಥೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದು ತಂದೆ ಹಾಗೂ ಮಗನ ರಿವೇಂಜ್ ಸ್ಟೋರಿ ಎಂದು ಹೇಳಿಬಿಟ್ಟಿದ್ದಾರೆ.

ಸಾಧ್ಯವಾದಷ್ಟು ಕಥೆಯ ಎಳೆಯನ್ನು ಗುಟ್ಟಾಗಿ ಇಟ್ಟರೆ ಸಿನಿಮಾ ನೋಡುವವರಿಗೆ ಮಜಾ ಇರುತ್ತದೆ. ಮೊದ್ಲೆ ಎಲ್ಲಾ ಹೇಳಿಬಿಟ್ಟರೆ ತೆರೆಮೇಲೆ ಸಿನಿಮಾ ನೋಡುವಾಗ ಆ ಕಿಕ್ ಇರಲಿಲ್ಲ. 'ರಾಮಾಯಣ' ಚಿತ್ರದ ಬಗ್ಗೆ ಕೂಡ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ಯಶ್. ಮೊದಲ ಭಾಗದಲ್ಲಿ ನಾನು ಹಾಗೂ ರಣ್‌ಬೀರ್ ತೆರೆ ಹಂಚಿಕೊಂಡಿಲ್ಲ ಎಂದಿದ್ದಾರೆ. ಸಿನಿಮಾ ತೆರೆಗೆ ಬರುವವರೆಗೂ ಇದು ಗುಟ್ಟಾಗಿಯೇ ಇದ್ದಿದ್ದರೆ ಚೆನ್ನಾಗಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ 'ಟಾಕ್ಸಿಕ್' ಕಥೆಯ ಬಗ್ಗೆಯೂ ಮತ್ತೊಂದು ಸಂದರ್ಶನದಲ್ಲಿ ಯಶ್ ಮಾತನಾಡಿರುವುದು ವೈರಲ್ ಆಗ್ತಿದೆ.
'ಟಾಕ್ಸಿಕ್' ಚಿತ್ರದ ಟೀಸರ್ ನೋಡಿ ಇದು 60-70ರ ದಶಕದಲ್ಲಿ ಗೋವಾದಲ್ಲಿ ನಡೆಯುವ ಕಥೆ, ತಂದೆ ಹಾಗೂ ಮಗನ ನಡುವಿನ ಕಥೆ ಅಂತ ಕೆಲವರು ಊಹಿಸಿದ್ದರು. ಇದನ್ನು ಸ್ವತಃ ಯಶ್ ಈಗ ಖಚಿತಪಡಿಸಿಬಿಟ್ಟಿದ್ದಾರೆ. LRM Online ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಯಶ್ ಮಾತನಾಡಿದ್ದಾರೆ. "ರಾಮಾಯಣಕ್ಕಿಂತ ಟಾಕ್ಸಿಕ್ ಸಂಪೂರ್ಣ ವಿಭಿನ್ನ ಸಿನಿಮಾ. ವೈಲ್ಡ್ ಸಿನಿಮಾ. ಫೇರಿಟೇಲ್ ಫರ್ ಗ್ರೋನ್ ಅಪ್ಸ್. ಇದು ತಂದೆ ಹಾಗೂ ಮಗನ ಸೇಡಿನ ಕಥಾನಕ" ಎಂದು ಯಶ್ ಹೇಳಿದ್ದಾರೆ.
ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆಯಿತು. ಆದರೂ ಗೋವಾ 1961ರವರೆಗೆ ಪೋರ್ಚುಗೀಸರ ವಶದಲ್ಲಿತ್ತು. ಆ ಸಮಯದಲ್ಲಿ ನಡೆಯುವ ಕಾಲ್ಪನಿಕ ಗ್ಯಾಂಗ್‌ಸ್ಟರ್ ಕಥೆ ಇದು ಎಂದು ಯಶ್ ಬಹಿರಂಗಪಡಿಸಿದ್ದಾರೆ. "ಸಾಕಷ್ಟು ಇಂಟ್ರೆಸ್ಟಿಂಗ್ ಪಾತ್ರಗಳು, ದೃಶ್ಯಗಳು 'ಟಾಕ್ಸಿಕ್' ಚಿತ್ರದಲ್ಲಿ ಇರಲಿದೆ. ಇದು ಸಂಪೂರ್ಣ ವಿಭಿನ್ನವಾದ ಗ್ಯಾಂಗ್‌ಸ್ಟರ್ ಸಿನಿಮಾ. ಬರೀ ಆಕ್ಷನ್ ಇರಲ್ಲ. ಸೈಕಲಾಜಿಕಲ್ ವಿಚಾರಗಳಿವೆ. ಸಾಕಷ್ಟು ಭಾವೋದ್ವೇಗ ಇರುತ್ತೆ. ನಾನು ಆಕ್ಷನ್ ಹೀರೊ ಆಗಿ ಹೆಸರು ಮಾಡಿರಬಹುದು, ಒಳ್ಳೆ ನಟನಾಗಿ ಗುರ್ತಿಸಿಕೊಳ್ಳಲು ಇಷ್ಟಪಡ್ತೀನಿ" ಎಂದು ಯಶ್ ತಿಳಿಸಿದ್ದಾರೆ.
ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್‌ಗಳಲ್ಲಿ ಯಶ್ ಆರ್ಭಟ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಚಿತ್ರದ ಕೆಲ ಹಸಿಬಿಸಿ ದೃಶ್ಯಗಳ ಬಗ್ಗೆ ಕೆಲವರು ಟೀಕಿಸುತ್ತಿದ್ದಾರೆ. ಇನ್ನು ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ಯಶ್ ಅಬ್ಬರಿಸಿದ್ದಾರೆ. ಗಡ್ಡ ಬಿಟ್ಟು ಖಡಕ್ ರಾಯ ಆಗಿ ಗನ್ ಹಿಡಿದು ಸದ್ದು ಮಾಡಿರುವ ಯಶ್, ಕ್ಲೀನ್ ಶೇವ್‌ನಲ್ಲಿ ಟಿಕೆಟ್ ಆಗಿ ಎಂಬ ಮತ್ತೊಂದು ಡೆಡ್ಲಿ ಪಾತ್ರದಲ್ಲಿ ಶಾಕ್ ಕೊಟ್ಟಿದ್ದಾರೆ.
ನಯನತಾರಾ, ಹುಮಾ ಖುರೇಷಿ, ಕಿಯಾರಾ ಅದ್ವಾನಿ ಹಾಗೂ ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ 'ಟಾಕ್ಸಿಕ್' ಚಿತ್ರದಲ್ಲಿದೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಿದೆ. ಹಾಲಿವುಡ್‌ನಲ್ಲಿ ಕೂಡ ದೊಡ್ಡದಾಗಿ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications