ಧನಂಜಯ್- ಶಿವಣ್ಣ ನಟನೆಯ 'ಉತ್ತರಕಾಂಡ' ಚಿತ್ರ ನಿಂತಿದ್ದೇಕೆ? ಸಿಕ್ತು ಸ್ಪಷ್ಟನೆ
ಒಂದು ಸಿನಿಮಾ ಸೆಟ್ಟೇರಿ ಚಿತ್ರೀಕರಣ ಮುಗಿಸಿ ತೆರೆಗೆ ಬರುವುದು ಅಷ್ಟು ಸುಲಭವಲ್ಲ. ಈ ಹಾದಿಯಲ್ಲಿ ನಾನಾ ವಿಘ್ನಗಳು ಎದುರಾಗುತ್ತವೆ. ಎಲ್ಲವನ್ನು ಮೀರಿ ಸಿನಿಮಾ ಅಂತಿಮವಾಗಿ ಪ್ರೇಕ್ಷಕರ ಮುಂದೆ ಬರುತ್ತದೆ. ಕೆಲ ಸಿನಿಮಾಗಳು ಅರ್ಧದಲ್ಲೇ ನಿಂತುಬಿಡುತ್ತದೆ. ಕನ್ನಡದ 'ಉತ್ತರಕಾಂಡ' ಸಿನಿಮಾ ನಿಂತೇಹೋಯ್ತಾ ಅಂತ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
'ರತ್ನನ್ ಪ್ರಪಂಚ' ಸಿನಿಮಾ ಬಳಿಕ ನಿರ್ದೇಶಕ ರೋಹಿತ್ ಪದಕಿ 'ಉತ್ತರಕಾಂಡ' ಚಿತ್ರ ಕೈಗೆತ್ತಿಕೊಂಡಿದ್ದರು. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿತ್ತು. ಒಂದಷ್ಟು ಚಿತ್ರೀಕರಣ ಕೂಡ ನಡೆದಿತ್ತು. ಬಳಿಕ ಈ ಸಿನಿಮಾ ಬಿಟ್ಟು ರೋಹಿತ್ 'ಎಕ್ಕ' ಸಿನಿಮಾ ಘೋಷಿಸಿದ್ದರು. ಕೆಆರ್‌ಜಿ ಸಂಸ್ಥೆಯೇ ಜಯಣ್ಣ ಕಂಬೈನ್ಸ್ ಹಾಗೂ ಪಿಆರ್‌ಕೆ ಬ್ಯಾನರ್ ಜೊತೆಗೂಡಿ ಸಿನಿಮಾ ನಿರ್ಮಾಣ ಆರಂಭಿಸಿತು.

'ಎಕ್ಕ' ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ತಿಂಗಳು 18ರಂದು ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಸಾಂಗ್ಸ್ ಹಿಟ್ ಆಗಿದೆ. 'ಬ್ಯಾಂಗಲ್ ಬಂಗಾರಿ' ಸಾಂಗ್ ಟ್ರೆಂಡ್ ಹುಟ್ಟಾಕ್ಕಿದೆ. ಇದೆಲ್ಲದರ ನಡುವೆ 'ಉತ್ತರಕಾಂಡ' ಸಿನಿಮಾ ಕಥೆ ಏನಾಯ್ತು? ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಟೈಟಲ್‌ನಿಂದಲೇ 'ಉತ್ತರಕಾಂಡ' ಸಿನಿಮಾ ಗಮನ ಸೆಳೆದಿದೆ. ಇನ್ನು ಗಬ್ರು ಸತ್ಯ ಎಂಬ ಪಾತ್ರದಲ್ಲಿ ಡಾಲಿ ಲುಕ್, ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಬಾರಿ ರೋಹಿತ್ ಜೊತೆ ಸೇರಿ ಬೇರೆಯದ್ದೇ ಮಜಾ ಕೊಡುತ್ತಾರೆ ಎಂದು ಪ್ರೇಕ್ಷಕರು ಕಾದಿದ್ದಾರೆ. ಇನ್ನು ಚಿತ್ರದಲ್ಲಿ ಮಾಲೀಕ ಎಂಬ ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದರು. ಅಷ್ಟಕ್ಕೂ 'ಉತ್ತರಕಾಂಡ' ಚಿತ್ರ ನಿಲ್ಲಿಸಿ 'ಎಕ್ಕ' ಸಿನಿಮಾ ಕೈಗೆತ್ತಿಕೊಂಡಿದ್ದು ಯಾಕೆ ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ.

ಇತ್ತೀಚೆಗೆ 'ಎಕ್ಕ' ಸಿನಿಮಾ ಸುದ್ದಿಗೋಷ್ಠಿ ನಡೀತು. ಈ ವೇಳೆ ಪತ್ರಕರ್ತರು ನಿರ್ದೇಶಕ ರೋಹಿತ್, ನಿರ್ಮಾಪಕ ಕಾರ್ತಿಕ್ ಗೌಡ ಬಳಿ 'ಉತ್ತರಕಾಂಡ' ಚಿತ್ರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಕಾರ್ತಿಕ್ "ಉತ್ತರಕಾಂಡ ಸಿನಿಮಾ ನಿಂತಿಲ್ಲ. ಕೊಂಚ ತಡವಾಗುತ್ತಿದೆ ಅಷ್ಟೆ. ಆಗ ಶಿವಣ್ಣ ಅವ್ರ ಆರೋಗ್ಯ ಸಮಸ್ಯೆ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ನಮಗೆ ಗೊತ್ತಾಗಿತ್ತು. ಹಾಗಾಗಿ ಅದನ್ನು ನಿಲ್ಲಿಸಿ ಬೇರೆ ಸಿನಿಮಾ ಮಾಡೋಣ ಎಂದುಕೊಂಡೆವು. ಆ ಸಿನಿಮಾ ಸದ್ಯದಮಟ್ಟಿಗೆ ನಿಲ್ಲಿಸಲು ಅದೇ ಕಾರಣ. ನಾವು ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ" ಎಂದಿದ್ದಾರೆ.
ನಿರ್ದೇಶಕ ರೋಹಿತ್ ಪದಕಿ ಪ್ರತಿಕ್ರಿಯಿಸಿ "ಸೆಪ್ಟೆಂಬರ್‌ನಲ್ಲಿ ನಮಗೆ ಶಿವಣ್ಣ ಆರೋಗ್ಯದ ಬಗ್ಗೆ ವಿಷಯ ಗೊತ್ತಾಯಿತು. ಹಾಗಾಗಿ ಆ ಚಿತ್ರವನ್ನು ಸದ್ಯಕ್ಕೆ ನಿಲ್ಲಿಸಿ ಬೇರೆ ಏನಾದರೂ ಮಾಡೋಣ ಅಂದಾಗ 'ಎಕ್ಕ' ಶುರು ಮಾಡಿದೆವು. ಶಿವಣ್ಣನಿಗೆ ಕೊಂಚ ರೆಸ್ಟ್ ಕೊಡಬೇಕು ಎಂದುಕೊಂಡೆವು. ಕಾರಣ 'ಉತ್ತರಕಾಂಡ' ಚಿತ್ರದಲ್ಲಿ ಹೆಚ್ಚು ಆಕ್ಷನ್ ಸೀಕ್ವೆನ್ಸ್ ಇದೆ. ಅದರಲ್ಲೂ ಶಿವಣ್ಣ, ಧನಂಜಯ್ ಜೊತೆ ಆಕ್ಷನ್ ಇದೆ. ಹಾಗಾಗಿ ಅವರಿಗೆ ಹೆಚ್ಚು ಸಮಯ ಕೊಡುತ್ತಿದ್ದೇವೆ. ಸದ್ಯಕ್ಕೆ ಏನು ಪ್ಲ್ಯಾನ್ ಮಾಡಿಲ್ಲ. ಆದರೆ 'ಎಕ್ಕ' ಬಳಿಕ ಮತ್ತೆ 'ಉತ್ತರಕಾಂಡ' ಚಿತ್ರ ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
'ಉತ್ತರಕಾಂಡ' ಚಿತ್ರದಲ್ಲಿ ಧನು, ಶಿವಣ್ಣ ಜೊತೆಗೆ ದಿಗಂತ್, ಯೋಗರಾಜ್ ಭಟ್, ರಂಗಾಯಣ ರಘು, ಉಮಾಶ್ರೀ ನಟಿಸುತ್ತಿದ್ದಾರೆ. ಐಶ್ವರ್ಯ ರಾಜೇಶ್, ಭಾವನಾ, ಚೈತ್ರಾ ಆಚಾರ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಬೇಕಿದೆ. ನಿರ್ದೇಶಕರು, ನಿರ್ಮಾಪಕರು ಸಿನಿಮಾ ಬಗ್ಗೆ ಕೊಟ್ಟ ಮಾಹಿತಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.


Click it and Unblock the Notifications











