ಸುದೀಪ್ ಜೊತೆ ಸಿನಿಮಾ ಮಾಡಲು ಮುಂದಾದ ಗೌತಮ್ ವಾಸುದೇವ್ ಮೆನನ್ ?ವೈರಲ್ ವಿಡಿಯೋದಲ್ಲಿ ಏನಿದೆ ?
ಹಿಂದೆ ಒಂದು ಕಾಲ ಇತ್ತು. ಕನ್ನಡ ಚಿತ್ರರಂಗ ಅಂದರೆ ಅಸಡ್ಡೆಯಿಂದ ನೋಡುತ್ತಿದ್ದ ಕಾಲ ಅದು. ಯಾಕೆಂದರೆ .. ನಮ್ಮಲ್ಲಿ ಅನೇಕರು ರಿಮೇಕ್ ಸಂಪ್ರದಾಯಕ್ಕೆ ಆಗ ಶರಣಾಗಿದ್ದರು. ಪ್ರೇಕ್ಷಕರು ಕೂಡ ಏಕತಾನತೆಯಿಂದ ಬೇಸತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯೋಗಗಳಾಗುತ್ತಿವೆ. ಮೊದಲೆಲ್ಲಾ ಕನ್ನಡ ಚಿತ್ರರಂಗ ಅಂದರೆ ಅಯ್ಯೋ...
ಎಂದು ಕೇವಲವಾಗಿ ನೋಡುತ್ತಿದ್ದವರ ಕಣ್ಣುಗಳಲ್ಲಿಯೇ ಈಗ ಬೆರಗೊಂದು ಪ್ರಜ್ವಲಿಸಲಾರಂಭಿಸಿದೆ. ಗಡಿ ಸೀಮೆಯನ್ನೆಲ್ಲ ದಾಟಿಕೊಂಡು ಕನ್ನಡದ ಚಿತ್ರಗಳು ಸದ್ದು ಮಾಡುತ್ತಿವೆ. ಇನ್ನು ಬದಲಾದ ಈ ಕಾಲದಲ್ಲಿ ಪರಭಾಷೆಯ ನಾಯಕ - ನಾಯಕಿಯರು, ತಂತ್ರಜ್ಞರು, ನಿರ್ದೇಶಕ ಮತ್ತು ನಿರ್ಮಾಪಕರು ಕನ್ನಡ ಚಿತ್ರರಂಗದ ಭಾಗವಾಗಲು ಹಾತೊರೆಯುತ್ತಿದ್ದಾರೆ. ಕನ್ನಡ ಚಿತ್ರರಂಗದ ಕುರಿತು ಹೆಮ್ಮೆಯ ಮಾತುಗಳನ್ನಾಡುತ್ತಿದ್ದಾರೆ. ಬೇರೆ ಬೇರೆ ಭಾಷೆಯ ದೊಡ್ಡ ದೊಡ್ಡ ನಿರ್ದೇಶಕರು ನಮ್ಮ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಉದಾಹರಣೆಗೆ ಗೌತಮ್ ವಾಸುದೇವ್ ಮೆನನ್.

ಹೌದು, ಗೌತಮ್ ವಾಸುದೇವ್ ಮೆನನ್..ಭಾರತದ ಪ್ರಖ್ಯಾತ ನಿರ್ದೇಶಕ. ''ರೆಹನಾ ಹೈ ತೇರೆ ದಿಲ್ ಮೇ''.. ''ಕಾಕ ಕಾಕ''.. ''ವೆಟ್ಟೇಯಾಡು ವಿಲೆವಾಡು''.. ''ವನೈತಾಂಡಿ ವರುವಾಯ''.. ''ಯೇ ಮಾಯ ಚೇಸಾವೆ''.. ''ವಾರನಂ ಅಯರಂ''.. ''ವೆಂದು ತನಿದತ್ತು ಕಾಡು''.. ''ಏಕ್ ದಿವಾನಾ ಥಾ''.. ಹೀಗೆ ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಚಿತ್ರಗಳನ್ನು ಮಾಡಿರುವ ಹೆಗ್ಗಳಿಕೆ ಇವರದ್ದು.
ಕಳೆದ 25 ವರ್ಷಗಳಿಂದ ತಮ್ಮ ಚಿತ್ರಗಳಿಂದ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಾ ಬಂದ ಗೌತಮ್ ವಾಸುದೇವ್ ಮೆನನ್ ಸದ್ಯ ಕನ್ನಡಕ್ಕೆ ಬರುತ್ತಿದ್ದಾರೆ. ತಾವೇ ಖುದ್ದು ಇಂತಹದ್ದೊಂದು ಬ್ರೇಕಿಂಗ್ ನ್ಯೂಸ್ ಕೂಡ ನೀಡಿದ್ದಾರೆ.
''ಸಿನೆಉಲಗಂ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಗೌತಮ್ ವಾಸುದೇವ್ ಮೆನನ್ ಪ್ರೇಮಕಥೆಯ ಬರವಣಿಗೆ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ. ಮುಂದುವರೆದು ಕನ್ನಡದಲ್ಲಿ ಚಿತ್ರವೊಂದನ್ನು ಮಾಡುವ ಇರಾದೆ ಇದೆ, ನನಗೆ ಎಲ್ಲ ಭಾಷೆಯಲ್ಲಿ ಕೆಲಸ ಮಾಡಲು ಇಷ್ಟ ಎಂದು ಹೇಳಿರುವ ಗೌತಮ್ ವಾಸುದೇವ್ ಮೆನನ್ ಕನ್ನಡದಲ್ಲಿ ಸೂಪರ್ ಸ್ಟಾರ್ ಒಬ್ಬರ ಜೊತೆ ಮಾತುಕಥೆ ನಡೆಯುತ್ತಿದೆ, ನೋಡೋಣ ಏನಾಗುತ್ತೆ ಎಂದು ಹೇಳಿದ್ದಾರೆ.
ಗೌತಮ್ ವಾಸುದೇವ್ ಮೆನನ್ ಅವರ ಈ ಮಾತು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. GVM ಹೇಳಿರುವ ಆ ಸೂಪರ್ ಸ್ಟಾರ್ ಬೇರೆ ಯಾರು ಅಲ್ಲ ಬದಲಿಗೆ ಸುದೀಪ್ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಯಾಕೆಂದರೆ.. ಕೆಲ ದಿನಗಳ ಹಿಂದೆಯಷ್ಟೇ ಸುದೀಪ್ ತಮ್ಮ ಮುಂದಿನ ಚಿತ್ರದ ಸುಳಿವು ನೀಡಿದ್ದರು. ಹಾಸ್ಯ ಕಥಾಹಂದರ ಹೊಂದಿರುವ ರೊಮ್ಯಾಂಟಿಕ್ ಲವ್ ಸ್ಟೋರಿ ಮಾಡುತ್ತಿರುವುದಾಗಿ ಹೇಳಿದ್ದರು. ಸುದೀಪ್ ಅವರ ಈ ಹೇಳಿಕೆಯ ಬೆನ್ನಲ್ಲಿಯೇ ಗೌತಮ್ ವಾಸುದೇವ್ ಮೆನನ್ ಕನ್ನಡ ಸೂಪರ್ ಸ್ಟಾರ್ ಜೊತೆ ಚಿತ್ರದ ಕುರಿತು ಮಾತುಕಥೆ ನಡೆಯುತ್ತಿದೆ. ಹೇಳಿದ್ದಾರೆ. ಹೀಗಾಗಿ ಇಬ್ಬರ ಮಾತುಗಳನ್ನು ತಾಳೆ ಹಾಕಿ ಸುದೀಪ್ ಅಭಿಮಾನಿಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ ಪಡುತ್ತಿದ್ದಾರೆ.
ಅಂದ್ಹಾಗೇ ಎಲ್ಲವೂ ಅಂದುಕೊಂಡತೆ ಆಗಿದ್ದರೆ ತುಂಬಾ ಹಿಂದೆಯೇ ಗೌತಮ್ ವಾಸುದೇವ್ ಮೆನನ್ ಕನ್ನಡ ಚಿತ್ರರಂಗಕ್ಕೆ ಬರಬೇಕಿತ್ತು. ಕನ್ನಡ, ತೆಲುಗು ಮತ್ತು ತಮಿಳಿನ ಮೂರು ಸ್ಟಾರ್‌ಗಳನ್ನು ಹಾಕಿಕೊಂಡು ಚಿತ್ರ ಮಾಡಲು ಗೌತಮ್ ವಾಸುದೇವ್ ಮೆನನ್ ಬಯಸಿದ್ದರು. ಕನ್ನಡದಿಂದ ಪುನೀತ್ ರಾಜ್ಕುಮಾರ್, ತೆಲುಗಿನಲ್ಲಿ ಅಲ್ಲು ಅರ್ಜುನ್, ತಮಿಳಿನಲ್ಲಿ ಸಿಂಭು ಅವರನ್ನೂ ಹಾಕಿಕೊಂಡು ''ಜಿಂದಗಿ ನಾ ಮಿಲೇಗಿ ದುಬಾರ'' ರೀತಿಯ ಪ್ರಯಾಣ ಕತೆಯುಳ್ಳ ಸಿನಿಮಾ ಮಾಡುವ ಆಸೆ ಇವರಿಗಿತ್ತು. ಆದರೆ ಅದು ಆಗಲಿಲ್ಲ. ಈಗ ಗೌತಮ್ ವಾಸುದೇವ್ ಮೆನನ್ ಕನ್ನಡದ ಸೂಪರ್ ಸ್ಟಾರ್ ಒಬ್ಬರ ಜೊತೆ ಚಿತ್ರ ಮಾಡುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆ ಸೂಪರ್ ಸ್ಟಾರ್ ನಿಜಕ್ಕೂ ಸುದೀಪ್ ಅವರೇನಾ..? ಉತ್ತರ ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆ ಇದೆ.


Click it and Unblock the Notifications











