»   » ನೆಹರೂ, ಗಾಂಧಿ ಚಿತ್ರಗಳು ಯಾರಿಗೆ ಬೇಕು ಸ್ವಾಮಿ!

ನೆಹರೂ, ಗಾಂಧಿ ಚಿತ್ರಗಳು ಯಾರಿಗೆ ಬೇಕು ಸ್ವಾಮಿ!

Posted By: *ಸತ್ಯನಾರಾಯಣ
Subscribe to Filmibeat Kannada

ಖ್ಯಾತರ ಬಗ್ಗೆ ಚಿತ್ರ ತಯಾರಿಸಿದರೆ ಯಾರೂ ನೋಡೋದಿಲ್ಲ. ಉದಾಹರಣೆಗೆ ಗಾಂಧಿ, ನೆಹರೂ, ಪಟೇಲ್‌. ಅಬ್ಬಬ್ಬಾ ಅಂದ್ರೆ ಅಂಥಾ ಚಿತ್ರಗಳಿಗೆ ಒಂದೆರಡು ಪ್ರಶಸ್ತಿ ಸಿಗಬಹುದು. ಕಾಸು ಕೊಟ್ಟು ಸಿನಿಮಾ ನೋಡುವ ಜನರ ಪಾಲಿಗೆ ಈ ಚಿತ್ರಗಳೂ ಬೋರೊ ಬೋರು.

ಆದರೆ ಕುಖ್ಯಾತರ ಚಿತ್ರ ಮಾಡಿ. ಶೂಟಿಂಗ್‌ ಮುಗಿಯೋದಕ್ಕೆ ಮೊದಲೇ ಚಿತ್ರಕ್ಕೆ ಗಿರಾಕಿಗಳು ಸಿಗುತ್ತಾರೆ. ಕಾಳಸಂತೆಯಲ್ಲಿ ಒಂದಕ್ಕೆ ಹತ್ತರಷ್ಟು ರೇಟಿಗೆ ಟಿಕೇಟ್‌ಗಳು ಮಾರಾಟವಾಗುತ್ತದೆ. ಹಾಲಿವುಡ್‌ನ ಗಾಡ್‌ಫಾದರ್‌ನಿಂದ ಹಿಡಿದು ಕಮಲಹಾಸನ್‌ನ ನಾಯಗನ್‌ ತನಕ. ಯಾವ ಚಿತ್ರಗಳೂ ಗಲ್ಲಾಪೆಟ್ಟಿಗೆಯಲ್ಲಿ ಬಿದ್ದಿಲ್ಲ .

ಗೂಂಡಾಗಳ ಬದುಕೇ ಹಾಗಿರುತ್ತದೆ. ಹಿಂಸೆ, ಪ್ರೀತಿ, ವಿಷಾದ, ನಿಮಗಾವ ಭಾವಗಳು ಬೇಕು ಹೇಳಿ.... ಎಲ್ಲವೂ ಅಲ್ಲಿರುತ್ತದೆ. ಒಂದು ಕಾಲದಲ್ಲಿ ಜನರನ್ನೇ ಕೊಂದು ತಿಂದು ಬೆಳೆದವನು, ವಯಸ್ಸಾದ ನಂತರ ಜನನಾಯಕನಾಗುತ್ತಾನೆ. ಹಾಜಿ ಮಸ್ತಾನ್‌ನಿಂದ ಹಿಡಿದು ವರದರಾಜನ್‌ ಮೊದಲಿಯಾರ್‌ ತನಕ ಎಲ್ಲಾ ಡಾನ್‌ಗಳ ಭಯಾಗ್ರಫಿ ಒಂದೇ ಥರ.

ಇದೀಗ ಕನ್ನಡದಲ್ಲೂ ಇಂಥಾ ಅಜರಾಮರ ವ್ಯಕ್ತಿಗಳ ಬದುಕಿನ ಚಿತ್ರವನ್ನು ತೆರೆಗಿಳಿಸುವ ಪ್ರಯತ್ನ ನಡೆಯುತ್ತಿದೆ. ಹಾಗೆ ನೋಡಿದರೆ ಕನ್ನಡದಲ್ಲಿ ಮೊದಲ ಬಾರಿಗೆ ಭೂಗತ ಜಗತ್ತನ್ನು ತಡವಿದ ಚಿತ್ರವೆಂದರೆ 'ಓಂ". ಇಲ್ಲಿನ ಕೇಂದ್ರಪಾತ್ರ ಯಾವುದೋ ಒಬ್ಬ ನಿರ್ದಿಷ್ಟ ಗೂಂಡಾನನ್ನು ಹೋಲದೇ ಇದ್ದರೂ ಪರಿಸ್ಥಿತಿಯ ಪಿತೂರಿಯಿಂದ ಮಾಮೂಲು ಮನುಷ್ಯ ರೌಡಿಯಾಗಿ ರೂಪಾಂತರಗೊಳ್ಳುವ ಎಲಿಮೆಂಟ್‌ಗಳಂತೂ ಇದ್ದವು.

ಬೆಳ್ಳಿ ತೆರೆಗೆ ಬೆಂಗಳೂರ ನಡುಗಿಸಿ ಡಾನ್‌ಗಳು

ಈಗ ನಮ್ಮ ನಿರ್ಮಾಪಕರು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ದಶಕದ ಹಿಂದೆ ಬೆಂಗಳೂರನ್ನು ಗಡಗಡನೆ ನಡುಗಿಸಿದ ಡಾನ್‌ಗಳ ಜೀವನ ಚರಿತ್ರೆಯನ್ನು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದಾರೆ. ಅವರ ಅನುಯಾಯಿಗಳನ್ನೂ ವಿರೋಧಿಗಳನ್ನೂ ಭೇಟಿಯಾಗಿ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಪತ್ರಿಕಾ ತುಣುಕುಗಳಿಗೂ ಡಿಮ್ಯಾಂಡು ಕುದುರಿದೆ.

ಕುಖ್ಯಾತ ರೌಡಿ ಕೊತ್ವಾಲ ರಾಮಚಂದ್ರನ ಹಿಂದೆ ಬಿದ್ದಿರುವವರು ರಾಜೇಂದ್ರ ಸಿಂಗ್‌ ಬಾಬು.

ಈ ಚಿತ್ರವನ್ನು ನಿರ್ಮಿಸುತ್ತಿರುವಾತ ಮುನಿರತ್ನಂ. ಈತ ಕೊತ್ವಾಲನ ಬಲಗೈ ಬಂಟನಾಗಿದ್ದಾತ. ಅನಂತರ ಕೊತ್ವಾಲನ ರಾಜಕೀಯ ಕಾಂಟ್ಯಾಕ್ಟ್‌ಗಳನ್ನು ಬಳಸಿಕೊಂಡು ಸ್ವಿಮಿಂಗ್‌ ಪೂಲ್‌ ಕಾಂಟ್ರಾಕ್ಟರ್‌, ರಸ್ತೆ ಕಾಂಟ್ರಾಕ್ಟರ್‌ ಆಗಿ ಬೆಳೆದಾತ.

ಜನತಾದಳ ಸರಕಾರ ಇದ್ದಾಗ ಸಚಿವರಾಗಿದ್ದ ಅನಂತನಾಗ್‌ಗೆ ಮುನಿರತ್ನಂ ಆತ್ಮೀಯರಾಗಿದ್ದರು. ಮುನಿರತ್ನಂ ದುಡಿಮೆಯ ಒಂದು ಅಂಶ ಅನಂತ್‌ಗೆ ಕಾಣಿಕೆ ರೂಪದಲ್ಲಿ ಸಂದಾಯವಾಗುತ್ತಿತ್ತು ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದೂ ಉಂಟು. ಈಗ ಮುನಿರತ್ನಂ ಬೆಂಗಳೂರಿನ ಗಟ್ಟಿಕುಳಗಳಲ್ಲಿ ಒಬ್ಬರು. ಹಾಗಾಗಿ ಗುರುವಿನ ಋಣ ತೀರಿಸುವುದಕ್ಕೆ ಇದು ಸಕಾಲ ಅಂತ ಆತ ನಂಬಿರುವುದರಲ್ಲಿ ತಪ್ಪೇನೂ ಇಲ್ಲ. ಆತ ಹೇಳುವ ಪ್ರಕಾರ ಕೊತ್ವಾಲ ಯಾವತ್ತೂ ಸಮಾಜಘಾತುಕ ಶಕ್ತಿಯಾಗಿರಲಿಲ್ಲ. ನೊಂದವರಿಗೆ ಧ್ವನಿಯಾಗಿದ್ದ. ಹಾಗಾಗಿ ಈ ಚಿತ್ರದಲ್ಲಿ ಕೊತ್ವಾಲನ ಸಕಲ ಲೀಲೆಗಳೂ ವೈಭವೀಕೃತವಾಗುತ್ತದೆ ಅನ್ನುವ ಬಗ್ಗೆ ಅನುಮಾನ ಬೇಕಿಲ್ಲ.

ಬಂದೂಕಿನ ನಳಿಗೆಯಲ್ಲೇ ಮಾತಾಡುವ ಮುತ್ತಪ್ಪ ರೈ
ಬಾಬು ಕೊತ್ವಾಲನ ಜಾತಕ ಹುಡುಕುತ್ತಿದ್ದರೆ, ಕೋಟಿ ನಿರ್ಮಾಪಕ ರಾಮು ಮುತ್ತಪ್ಪ ರೈ ಹಿಂದೆ ಬಿದ್ದಿದ್ದಾರೆ. ಸದ್ಯಕ್ಕೆ ದುಬೈಯನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿರುವ ಮುತ್ತಪ್ಪ ರೈಯ ಶಿಷ್ಯರು ಬೆಂಗಳೂರಿನ ಉದ್ದಗಲಕ್ಕೆ ಹರಡಿಕೊಂಡಿದ್ದಾರೆ. ಕೊತ್ವಾಲ ಮಚ್ಚು ಹಿಡಿದು ಬಡಿದಾಡುವ ರೌಡಿಯಾಗಿದ್ದರೆ, ರೈ ಬಂದೂಕಿನ ನಳಿಗೆಯಲ್ಲೇ ಮಾತಾಡುವ ಗೂಂಡಾ. ರಾಮು ನಿರ್ಮಿಸುತ್ತಿರುವ ಚಿತ್ರದ ಹೆಸರು ಕೂಡ ರೈ. ಹಾಯ್‌ ಬೆಂಗಳೂರು ಪತ್ರಿಕೆಯ ಸಂಪಾದಕ ರವಿಬೆಳಗೆರೆ ಈ ಚಿತ್ರಕ್ಕೆ ಕತೆ, ಚಿತ್ರಕತೆ ಒದಗಿಸುತ್ತಿರುವುದು ಹೈಲೈಟು.

ವಿಚಿತ್ರ ಅಥವಾ ವಿಶೇಷವೆಂದರೆ ಕೊತ್ವಾಲ ಮತ್ತು ರೈ ಇವೆರಡೂ ಪಾತ್ರಗಳಿಗೆ ಉಪೇಂದ್ರ ಆಯ್ಕೆಯಾಗಿದ್ದಾರೆ. ಕೊತ್ವಾಲನ ದೈತ್ಯ ನಿಲುವಿಗೂ ಉಪೇಂದ್ರರ ನಿಲುವಿಗೂ ಸಂಬಂಧವಿಲ್ಲ. ಆದರೆ ಕನ್ನಡದಲ್ಲಿ ಈ ಪಾತ್ರ ಮಾಡುವುದಕ್ಕೆ ಬೇರೆ ನಟರಿಲ್ಲ ಎನ್ನುವುದು ಮುನಿರತ್ನಂ ಸಮರ್ಥನೆ. ರೈ ಪಾತ್ರಕ್ಕೆ ಉಪೇಂದ್ರ ಸರಿಯಾಗಿ ಹೊಂದಿಕೊಳ್ಳುತ್ತಾರೆ ಅನ್ನೋ ಖುಷಿ ರಾಮು ಅವರದು.

ಇವೆರಡೂ ಚಿತ್ರಗಳು ಈ ವರ್ಷಾಂತ್ಯಕ್ಕೆ ಸೆಟ್ಟೇರುವ ಸಾಧ್ಯತೆಯಿದೆ. ಮೊದಲು ಬಿಡುಗಡೆಯಾದ ಚಿತ್ರವಷ್ಟೇ ಗೆಲ್ಲಬಹುದು ಅನ್ನುವ ವಾಸ್ತವದ ಹಿನ್ನೆಲೆಯಲ್ಲಿ ಈಗ ಉಪೇಂದ್ರರ ಮನವೊಲಿಸಲು ಅಥವಾ ಮನ ಬದಲಾಯಿಸಲು ಕೆಲಸ ಶುರುವಾಗಿದೆ. ಕೊತ್ವಾಲ ಕತೆಯಾಳಗೆ ರೈ ಪಾತ್ರವೂ ಬರುತ್ತದೆ, ಅದೇ ರೀತಿ ಕೊತ್ವಾಲನಿಲ್ಲದೇ ಇದ್ದಲ್ಲಿ ರೈ ಚಿತ್ರವೂ ಅಪೂರ್ಣವಾಗುತ್ತದೆ.

ಚಿತ್ರರಂಗದಲ್ಲಿ ಶತ್ರುಗಳೇ... ಛೆ ಛೆ !
ಚಿತ್ರರಂಗದಲ್ಲಿ ಯಾರೂ ಶತ್ರುಗಳಲ್ಲ ಅನ್ನೋ ಮಾತು ಈಗ ಮತ್ತೊಮ್ಮೆ ನಿಜವಾಗಿದೆ. ಯಾಕೆಂದರೆ ಹಾಯ್‌ ಬೆಂಗಳೂರು ಪತ್ರಿಕೆ ಈ ಹಿಂದೆ ರಾಮು ಮತ್ತು ಉಪೇಂದ್ರರ ಜನ್ಮ ಜಾಲಾಡಿತ್ತು. ನಿರ್ಮಾಪಕ ಸಂಘ ಕೂಡ ಹಾಯ್‌ ವಿರುದ್ಧ ಫತ್ವಾ ಹೊರಡಿಸಿತ್ತು. ರಾಮು-ರವಿ-ಉಪೇಂದ್ರ ಈಗ ಒಂದಾಗಿದ್ದಾರೆ. ನಿರ್ಮಾಪಕ ಸಂಘ ಈಗೇನು ಮಾಡುತ್ತದೆ ?

ಇನ್ನೊಂದೆಡೆ ನಿರ್ದೇಶಕ ಓಂ ಪ್ರಕಾಶ್‌ ನಚ್ಚಿ ಅನ್ನುವ ಮತ್ತೊಂದು ಅಂಡರ್‌ವರ್ಲ್ಡ್‌ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಭೂಗತದೊರೆ ಅನ್ನುವ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದಲ್ಲಿ ಹಿಂಸಾತ್ಮಕ ಚಿತ್ರಗಳ ಅಧ್ಯಾಯ ಶುರುವಾರುಗುತ್ತಿರುವ ಸೂಚನೆಯಿದು.

English summary
Kannada Movies : Ideal persons like gandhi nehru biographies are worth for awards, but business seeks goondas history

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X